ಧಾರವಾಡ : ಇಲ್ಲಿನ ಕಮಲಾಪುರ ಹೊರವಲಯದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸೇರಿ ಇಬ್ಬರನ್ನು ಹತ್ಯೆ (Double Murder) ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ.
ಧಾರವಾಡ ಅಫನಾ ನಗರದ ಅರಬಾಜ್ ಹಂಚಿನಾಳ (24), ಮುಂಡಗೋಡದ ಇಂಧಿರಾನಗರ ನಿವಾಸಿ ಅಲ್ಲಾವುದ್ದೀನ್ ರಜೇಬ ಅಲಿ (26), ಮುರುಘಾಮಠದ ಮೋರೆ ಪ್ಲಾಟ್ ಅಜಯ ಮದ್ಲಿ(23), ಅಬೀದ್ ಚಟ್ಟರಕಿ(31) ಹಾಗೂ ಹಾವೇರಿಯ ಜುಮ್ಮಾ ಬಜಾರ್ ನಿವಾಸಿ ಅಬೀದ್ ಚಿಟ್ಟವಾಲೆ (27), ಧಾರವಾಡ ಚನ್ನಬಸವೇಶ್ವರ ಕಾಲೋನಿ ಸಾಹೀಲ್ ನಧಾಪ್ (26) ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೊಬ್ಬ ಆರೋಪಿ ಗಣೇಶ ಕಮ್ಮಾರ ಕೂಡ ಕೊಲೆಯಾಗಿದ್ದಾನೆ ಎಂದು ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ರಮಣ ಗುಪ್ತ ಮಾಹಿತಿ ನೀಡಿದ್ದಾರೆ.
ಕಳೆದ ಮೇ 25ರ ರಾತ್ರಿ ಧಾರವಾಡದ ರಿಯಲ್ ಎಸ್ಟೇಟ್ ಉದ್ಯಮಿ ಮಹಮ್ಮದ್ ಕುಡಚಿ ಮನೆ ಎದುರು ಕುಳಿತಿದ್ದರು. ಈ ವೇಳೆ ದುಷ್ಕರ್ಮಿಗಳ ಗುಂಪೊಂದು ದಾಳಿ ಮಾಡಿತ್ತು. ಮಹಮ್ಮದ್ ಕುಡಚಿ ಅವರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಕೊಂದಿದ್ದಾರೆ. ಈ ಗಲಾಟೆಯಲ್ಲಿ ಆರೋಪಿಗಳ ತಂಡದಲ್ಲಿದ್ದ ಗಣೇಶ ಕಮ್ಮಾರ ಎಂಬಾತನಿಗೂ ಚಾಕು ಇರಿತವಾಗಿತ್ತು. ತೀವ್ರ ರಕ್ತಸ್ರಾವವಾಗಿ ಓಡಿದ ಈತ ಕುಡಚಿ ನಿವಾಸದ ಅನತಿ ದೂರದಲ್ಲಿ ಬಿದ್ದು ಮೃತಪಟ್ಟಿದ್ದ. ಉಳಿದ ಹಂತಕರು ಅಲ್ಲಿಂದ ಪರಾರಿಯಾಗಿ ದಾಂಡೇಲಿಯಲ್ಲಿ ತಲೆಮರೆಸಿಕೊಂಡಿದ್ದರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಹತ್ಯೆ ನಡೆಸಲಾಗಿತ್ತು ಎಂದು ಹೇಳಲಾಗಿದೆ.
ಇದನ್ನೂ ಓದಿ: UDR Case: ಕಟ್ಟಡ ಅಡಿಪಾಯದ ಗುಂಡಿಯಲ್ಲಿ ಬಿದ್ದು ವ್ಯಕ್ತಿ ಸಾವು
ಇದೀಗ ಪ್ರಕರಣ ಸಂಬಂಧ ಎಲ್ಲ ಹಂತಕರನ್ನು ಬಂಧಿಸಿದ್ದು, ಕೊಲೆಗೆ ಆಸ್ತಿ ಹಾಗೂ ಹಣದ ವ್ಯವಹಾರವೇ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ