ಬೆಂಗಳೂರು: ಇಲ್ಲಿನ ಬ್ಯಾಟರಾಯನಪುರದಲ್ಲಿ ಮಗನೊಬ್ಬ ತನ್ನ ತಂದೆ ತಾಯಿಯನ್ನೇ ಬರ್ಬರವಾಗಿ ಕೊಲೆ (Bangalore double murder) ಮಾಡಿ ಪರಾರಿ ಆಗಿದ್ದಾನೆ. ತಾಯಿ ಶಾಂತ (60), ತಂದೆ ಭಾಸ್ಕರ್ (63) ಕೊಲೆಯಾದ ದುರ್ದೈವಿಗಳು. ಶರತ್ (26) ಎಂಬಾತನಿಂದ ಕೃತ್ಯ ನಡೆದಿದೆ.
ಶರತ್ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಎಂದು ತಿಳಿದು ಬಂದಿದೆ. ಸೋಮವಾರ (ಜು.17) ಸಂಜೆ ಶರತ್ ತಂದೆ ತಾಯಿ ಮೇಲೆ ಎರಗಿ ಏಕಾಏಕಿ ರಾಡ್‌ನಿಂದ ಹೊಡೆದಿದ್ದಾನೆ. ಗಂಭೀರ ಗಾಯಗೊಂಡ ಇಬ್ಬರು ತೀವ್ರ ರಕ್ತಸ್ರಾವವಾಗಿ ಮೃತಪಟ್ಟಿದ್ದಾರೆ. ಈ ಹಿಂದೆ ಕೂಡ ಮನೆಯಲ್ಲಿ ಶರತ್ ಗಲಾಟೆ ಮಾಡಿ ಅಪ್ಪ ಅಮ್ಮನಿಗೆ ಥಳಿಸಿದ್ದ ಎನ್ನಲಾಗಿದೆ.
ಶಾಂತ ಹಾಗೂ ಭಾಸ್ಕರ್ ದಂಪತಿ ಮಂಗಳೂರು ಮೂಲದವರಾಗಿದ್ದು, ಕಳೆದ 12 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬಂದು ನೆಲಸಿದ್ದರು. ತಾಯಿ ಶಾಂತ ಕೇಂದ್ರ ಸರ್ಕಾರದ ಸಿಬ್ಬಂದಿ ಆಗಿದ್ದು ಇತ್ತೀಚೆಗಷ್ಟೇ ನಿವೃತ್ತಿ ಹೊಂದಿದ್ದರು. ತಂದೆ ಭಾಸ್ಕರ್ ಖಾಸಗಿ ಕ್ಯಾಂಟೀನ್ ಒಂದರಲ್ಲಿ ಕ್ಯಾಶಿಯರ್ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, ಆರೋಪಿ ಶರತ್ ಕಿರಿಯ ಮಗನಾಗಿದ್ದಾನೆ.
ಇದನ್ನೂ ಓದಿ: Road Accident : ಬೈಕ್‌ಗಳ ನಡುವೆ ಅಪಘಾತ; ಅಜ್ಜ ಸ್ಥಳದಲ್ಲೇ ಮೃತ್ಯು; ಮೊಮ್ಮಗನಿಗೆ ಗಾಯ
ಆರೋಪಿ ಶರತ್ ಮನೆಯಲ್ಲೇ ಇದ್ದರೆ ಮತ್ತೊಬ್ಬ ಮಗ ಕೆಲಸದಲ್ಲಿ ಇದ್ದಾನೆ. ಆಗಾಗ ಶರತ್ ಸೈಕೋ ರೀತಿ ವರ್ತಿಸುತ್ತಿದ್ದ ಎನ್ನಲಾಗಿದೆ. ನಿನ್ನೆ ಸೋಮವಾರ ಸಂಜೆ ಕುಡಿದು ಮನೆಯಲ್ಲಿ ಗಲಾಟೆ ಮಾಡಿದ್ದಾನೆ. ಇದನ್ನೂ ಪ್ರಶ್ನಿಸಿದ್ದಕ್ಕೆ ಅಪ್ಪ-ಅಮ್ಮನಿಗೆ ರಾಡ್‌ನಿಂದ ಹೊಡೆದು ಕೊಂದಿದ್ದಾನೆ. ಬಳಿಕ ಮನೆ ಡೋರ್ ಲಾಕ್ ಮಾಡಿ ಪರಾರಿ ಆಗಿದ್ದಾನೆ.
ದಂಪತಿಯ ದೊಡ್ಡ ಮಗ ಇಂದು ಬೆಳಗ್ಗೆ ತಂದೆ-ತಾಯಿಗೆ ಕರೆ ಮಾಡಿದ್ದಾನೆ. ಆದರೆ ಯಾರು ಕರೆ ಸ್ವೀಕರಿಸಿಲ್ಲ. ಹೀಗಾಗಿ ಅನುಮಾನಗೊಂಡು ಕೂಡಲೇ ಪಕ್ಕದ ಮನೆಯವರಿಗೆ ಕರೆ ಮಾಡಿ ಮನೆಗೆ ಹೋಗಿ ನೋಡುವಂತೆ ತಿಳಿಸಿದ್ದಾನೆ. ಈ ವೇಳೆ ದಂಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ತಿಳಿದು ಬಂದಿದೆ.
ಸ್ಥಳೀಯರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಲಕ್ಷ್ಮೀ ಪ್ರಸಾದ್ ದೌಡಾಯಿಸಿದ್ದು, ಇಬ್ಬರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ನಾಪತ್ತೆ ಆಗಿರುವ ಶರತ್‌ಗಾಗಿ ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ