ಬೆಂಗಳೂರು: ಖ್ಯಾತ ಐಸ್‌ಕ್ರೀಮ್ ಹಾಗೂ ಚಾಕೊಲೇಟ್ ಕಂಪನಿ ಡೈರಿ ರಿಚ್‌ನ (Dairy Rich Ice Cream) ಮಾಲಿಕನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ಒಂದು ವಾರದ ಬಳಿಕ ಈ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ. ಪೊಲೀಸರು ಆಕೆಗೆ ಕಿರುಕುಳ ನೀಡುತ್ತಿದ್ದ ಆರೋಪದಲ್ಲಿ (dowry case) ಐವರನ್ನು ಬಂಧಿಸಿದ್ದಾರೆ.
ಗಂಡನ ಮನೆಯಲ್ಲಿ ಚಾಡಿ ಹೇಳಿ ಕಿರುಕುಳ ಕೊಡಿಸುತ್ತಿದ್ದ ಮನೆಹಾಳ ಬಂಧುಗಳ ಕಾಟ ಹಾಗೂ ಗಂಡನ ಮನೆಯವರ ಕಿರುಕುಳ ಸಹಿಸಲಾಗದೆ ಈಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಆಕೆ ಸಾವಿಗೆ ಮುನ್ನ ಡೆತ್‌ನೋಟ್ ಬರೆದಿಟ್ಟಿದ್ದು, ಐವರನ್ನು ಬಂಧಿಸಲಾಗಿದೆ.
ಐಶ್ವರ್ಯ ಆತ್ಮಹತ್ಯೆಗೆ ಶರಣಾದ ಗೃಹಿಣಿ. ಸಾವು ಸಂಭವಿಸಿದ ಒಂದು ವಾರದ ಬಳಿಕ ಆತ್ಮಹತ್ಯೆ ಹಿಂದಿನ ಅಸಲಿ ಕಹಾನಿ ಬಯಲಾಗಿದೆ. ಈಕೆಯ ಮದುವೆ ಮಾಡಿಸಿದ ಸಂಬಂಧಿಕರೇ ಕೊನೆಗೂ ಮದುವೆ ಮುರಿಯಲು ಮುಂದಾಗಿರುವುದು ಪತ್ತೆಯಾಗಿದೆ. ಮುರಿದುಬಿದ್ದ ಮದುವೆಯ ಕಾರಣ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಳೆದ ತಿಂಗಳ 26ರಂದು ಘಟನೆ ನಡೆದಿತ್ತು.
ಐಶ್ವರ್ಯ 5 ವರ್ಷಗಳ ಹಿಂದೆ ರಾಜೇಶ್ ಎಂಬಾತನನ್ನು ಕುಟುಂಬಸ್ಥರ ನಿಶ್ಚಯದಂತೆ ಐಶ್ವರ್ಯ ಮದುವೆಯಾಗಿದ್ದಳು. ಅಮೆರಿಕದಲ್ಲಿ ಎಂಎಸ್ ಮಾಡಿದ್ದ ಪ್ರತಿಭಾವಂತೆಯಾಗಿದ್ದ ಐಶ್ವರ್ಯ, ಪ್ರಸಿದ್ಧ ಸೀತ ಡೈರಿ ರಿಚ್ ಐಸ್‌ಕ್ರೀಮ್ ಕಂಪನಿ ಮಾಲೀಕರಾದ ರಾಜೇಶ್ ಕುಟುಂಬ ಸೇರಿದ್ದಳು.
ಐಶ್ವರ್ಯ ತಂದೆ ಸುಬ್ರಮಣಿಯ ತಂಗಿ ಗಂಡನಾದ ರವೀಂದ್ರ ಎಂಬಾತ ಇದೇ ಕಂಪನಿಯಲ್ಲಿ ಆಡಿಟರ್ ಆಗಿದ್ದು, ಆತನೇ ಮುಂದೆ ನಿಂತು ರಾಜೇಶ್ ಹಾಗೂ ಐಶ್ವರ್ಯ ಮದುವೆ ಮಾಡಿಸಿದ್ದರು. ಕೆಲಕಾಲ ನಂತರ ಆಸ್ತಿ ವಿಚಾರವಾಗಿ ರವೀಂದ್ರ ಮತ್ತು ಸುಬ್ರಮಣಿ ಕುಟುಂಬಕ್ಕೆ ಕಲಹ ಉಂಟಾಗಿತ್ತು. ತಂದೆ ಮೇಲಿನ ದ್ವೇಷಕ್ಕೆ ಮಗಳ ಸಂಸಾರದಲ್ಲಿ ದಾಯಾದಿಗಳು ಹುಳಿ ಹಿಂಡಿದ್ದರು.
ಐಶ್ವರ್ಯ ಕುರಿತು ಕೆಟ್ಟದಾಗಿ ರಾಜೇಶ್ ಕುಟುಂಬಕ್ಕೆ ಹೇಳುತ್ತಿದ್ದ ರವೀಂದ್ರ ಮತ್ತು ಕುಟುಂಬ, ಐಶ್ವರ್ಯಳ ಹಳೆಯ ಪೋಟೋಗಳನ್ನು ಕಳುಹಿಸಿ ನಿಮ್ಮ ಸೊಸೆ ಸರಿಯಿಲ್ಲ ಎಂದು ಕೆಟ್ಟದಾಗಿ ಬಿಂಬಿಸಿದ್ದರು. ಇದರಿಂದಾಗಿ ರಾಜೇಶ್ ಕುಟುಂಬ ಪ್ರತಿನಿತ್ಯ ಐಶ್ವರ್ಯಳಿಗೆ ಕಿರುಕುಳ ನೀಡುತ್ತಿತ್ತು. ಐಶ್ವರ್ಯ ಮಾವ ಗಿರಿಯಪ್ಪ, ಅತ್ತೆ ಸೀತ, ಮೈದುನ ವಿಜಯ್ ಹಾಗೂ ಆತನ ಪತ್ನಿ ತಸ್ಮಿಯಿಂದ ಕಿರುಕುಳವಿತ್ತು. ವರದಕ್ಷಿಣೆ ತರುವಂತೆಯೂ ಕಿರುಕುಳ ನೀಡಲಾಗುತ್ತಿತ್ತು.
ಎಷ್ಟೇ ಕಿರುಕುಳ ಕೊಟ್ಟರೂ ಗಂಡನಿಗಾಗಿ ಸುಮ್ಮನಿದ್ದ ಐಶ್ವರ್ಯ, ತಾನು ದುಡಿದ ಹಣದಲ್ಲಿ ಗಂಡನಿಗೆ ಐಷಾರಾಮಿ ಸೂಪರ್ ಬೈಕ್ ಹಾಗೂ ಚಿನ್ನದ ಒಡವೆ ಸಹ ಕೊಡಿಸಿದ್ದಳು. ಕುಟುಂಬಸ್ಥರ ಚಾಡಿಮಾತು ಕೇಳಿ ಗಂಡ ರಾಜೇಶ್ ಕೂಡ ಹೆಂಡತಿಯನ್ನು ನಿಂದಿಸುತ್ತಿದ್ದ ಎನ್ನಲಾಗಿದೆ. ಇದರಿಂದಾಗಿ ನೊಂದು ಕಳೆದ 20 ದಿನಗಳ ಹಿಂದೆ ಐಶ್ವರ್ಯ ಗಂಡನ ಮನೆಬಿಟ್ಟು ಬಂದಿದ್ದಳು. ಕಳೆದ 26ರಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಘಟನೆ ಸಂಬಂಧ ಐಶ್ವರ್ಯ ತಾಯಿ ಗೋವಿಂದರಾಜನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅತ್ತೆ ಸೀತ, ಮಾವ ಗಿರಿಯಪ್ಪ, ಮೈದುನ ವಿಜಯ ಹಾಗೂ ಆತನ ಪತ್ನಿ ತಸ್ಮೈ ಮೇಲೆ ದೂರು ದಾಖಲಾಗಿದೆ. ಜೊತೆಗೆ ಸಂಸಾರ ಒಡೆಯಲು ಪ್ರಚೋದನೆ ನೀಡಿದ್ದ ಸಂಬಂಧಿಕರಾದ ರವೀಂದ್ರ, ಗೀತಾ, ಶಾಲಿನಿ, ಓಂಪ್ರಕಾಶ್ ಎಂಬವರ ಮೇಲೂ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿ 5 ಮಂದಿ ಆರೋಪಿಗಳನ್ನು ಗೋವಿಂದರಾಜನಗರ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: Triple Talaq: ಮದುವೆಯಾದ 2 ಗಂಟೆಯಲ್ಲೇ ಪತ್ನಿಗೆ ತ್ರಿವಳಿ ತಲಾಕ್ ನೀಡಿದ ದುರುಳ; ವರದಕ್ಷಿಣೆ ಆಸೆಗೆ ನೀಚ ಕೃತ್ಯ