ಹಾಸನ: ಆಕೆಗೆ ಕೇವಲ 23 ವರ್ಷ ವಯಸ್ಸು. ನೂರಾರು ಆಸೆ ಕನಸುಗಳೊಂದಿಗೆ ಕುಟುಂಬದವರ ಇಷ್ಟದಂತೆ ಅದ್ಧೂರಿಯಾಗಿ ಮದುವೆ ನಡೆದಿತ್ತು. ಮದುವೆ ಆಗಿ ಏಳೇ ತಿಂಗಳಿಗೆ ನವವಿವಾಹಿತೆಯ ಮೃತದೇಹವು ಕೆರೆಯಲ್ಲಿ ಪತ್ತೆ ಆಗಿದೆ. ಆಕೆಯೀಗ ಮೂರು ತಿಂಗಳ ಗರ್ಭಿಣಿ ಕೂಡಾ. ಆಕೆಯ ಮನೆಯವರು ಇದೊಂದು ಕೊಲೆ, ಗಂಡ ಹಾಗೂ ಅವರ ಮನೆಯವರೇ ಕೊಲೆ ಮಾಡಿ ಕೆರೆಗೆ ಎಸೆದಿದ್ದಾರೆ (Dowry harassment) ಎಂದು ಆರೋಪಿಸಿದ್ದಾರೆ.
ಇಲ್ಲಿನ ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಕೆರೆಯಲ್ಲಿ ನವವಿವಾಹಿತೆ ರೋಹಿಣಿ (23) ಎಂಬಾಕೆಯ ಮೃತದೇಹ ಪತ್ತೆ ಆಗಿದೆ. ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಪಶುಪತಿ ಗ್ರಾಮದ ಕುಮಾರ್, ಸುಧಾ ದಂಪತಿಗೆ ಇಬ್ಬರು ಮಕ್ಕಳಲ್ಲಿ ರೋಹಿಣಿ ಒಬ್ಬರು. ಈಕೆಯ ಮದುವೆ ಕನಸು ಕಂಡಿದ್ದ ಪೋಷಕರು, ಅರಕಲಗೂಡು ತಾಲೂಕಿನ ಕಲ್ಲಹಳ್ಳಿ ಗ್ರಾಮದ ಸುಮಂತ್ ಎಂಬಾತನೊಂದಿಗೆ ಕಳೆದ ಮೇ 28ರಂದು ಕೇರಾಳಪುರದ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಮದುವೆ ವೇಳೆ ಸುಮಂತ್‌ಗೆ 250 ಗ್ರಾಂ ಚಿನ್ನ ಇದರ ಜತೆಗೆ 20ಲಕ್ಷ ರೂ. ಖರ್ಚು ಮಾಡಿ ಮದುವೆ ಮಾಡಿದ್ದರು.
ಇದನ್ನೂ ಓದಿ | Corona Virus | ರಾಜ್ಯದಲ್ಲಿ 18 ಜನರಲ್ಲಿ ಕೋವಿಡ್ ವೈರಸ್ ಪತ್ತೆ, ಮಾಸ್ಕ್ ಕಡ್ಡಾಯ ಆದೇಶ ಜಾರಿ ಸಾಧ್ಯತೆ
ವರದಕ್ಷಿಣಿ ಕಿರುಕುಳ ಆರೋಪ
ಮದುವೆಯಾಗಿ ಎರಡು ತಿಂಗಳು ಕಳೆಯುತ್ತಿದ್ದಂತೆ ಸುಮಂತ್ ತಾಯಿ ಮೀನಾಕ್ಷಿ ವರದಕ್ಷಿಣೆ ಹಣ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದರಂತೆ. ಜತೆಗೆ ಸುಮಂತ್ ಅಕ್ಕ ಸುಶ್ಮಿತಾ ಹಾಗೂ ಭಾವ ಪ್ರಮೋದ್ ಕೂಡ ಮನೆಗೆ ಬಂದಾಗಲೆಲ್ಲಾ ರೋಹಿಣಿಗೆ ಚುಚ್ಚು ಮಾತನಾಡುತ್ತಿದ್ದರಂತೆ. ಇದರ ಜತೆಗೆ ಪತಿ ಸುಮಂತ್ ಮದುವೆ ವೇಳೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿದ್ದನಂತೆ. ಆದರೆ ಮದುವೆ ಬಳಿಕ ಆತ ಬ್ಯಾಂಕ್ ಉದ್ಯೋಗಿಯೇ ಅಲ್ಲ ಎಂಬ ಸತ್ಯ ರೋಹಿಣಿಗೆ ತಿಳಿದು ಬಂತಂತೆ. ಇತ್ತ ಗಂಡನ ಮನೆಯಲ್ಲಿ ಎಷ್ಟೇ ಕಿರುಕುಳ ನೀಡಿದರೂ ರೋಹಿಣಿ ಯಾವುದನ್ನು ಪೋಷಕರ ಬಳಿ ಹೇಳಿ ಕೊಂಡಿರಲಿಲ್ಲವಂತೆ. ಇಷ್ಟು ಮಾತ್ರವಲ್ಲದೆ ರೋಹಿಣಿಗೆ ಯಾವುದಾದರೂ ಫೋನ್ ಬಂದರೂ, ಸುಮಂತ್ ಅನುಮಾನದಿಂದ ನೋಡುತ್ತಿದ್ದನಂತೆ. ರೋಹಿಣಿ ಪೋಷಕರಿಗೆ ಫೋನ್ ಮಾಡಿದರೆ ಹಲ್ಲೆ ಮಾಡುತ್ತಿದ್ದನಂತೆ.
ಇವೆಲ್ಲದರಿಂದ ಬೇಸತ್ತ ರೋಹಿಣಿ ನಿನ್ನ ಜತೆ ಮಾತನಾಡಬೇಕು, ಕೆಲವು ವಿಷಯಗಳನ್ನು ಹೇಳಬೇಕು ಎಂದು ಸಹೋದರಿಗೆ ಮೆಸೇಜ್ ಮಾಡಿದ್ದಳಂತೆ. ಕಳೆದ ಭಾನುವಾರ ರೋಹಿಣಿ ಹಾಗೂ ಸುಮಂತ್, ಸುಶ್ಮಿತಾ ಸೀಮಂತ ಕಾರ್ಯಕ್ರಮಕ್ಕೆ ಬೆಂಗಳೂರಿಗೆ ತೆರಳಿದ್ದರು. ಮಂಗಳವಾರ ಬೆಂಗಳೂರಿನಿಂದ ಇಬ್ಬರು ರೈಲಿನಲ್ಲಿ ಹೊರಟಿದ್ದಾರೆ. ಈ ವೇಳೆ ರೋಹಿಣಿ ತಂದೆಗೆ ಎರಡು ಕರೆ ಮಾಡಿ ಚೆನ್ನಾಗಿಯೇ ಮಾತನಾಡಿದ್ದಾಳೆ.
ದಂಪತಿ ಇಬ್ಬರು ಚನ್ನರಾಯಪಟ್ಟಣ ತಾಲೂಕಿನ ಸಮುದ್ರವಳ್ಳಿ ಬಳಿ ರೈಲಿನಿಂದ ಇಳಿದಿದ್ದಾರೆ. ಅಲ್ಲೇ ಸ್ವಲ್ಪ ದೂರದಲ್ಲಿದ್ದ ಕೆರೆಯ ಬಳಿ ನಡೆದುಕೊಂಡು ಬಂದಿದ್ದು ಕೆರೆಯಲ್ಲಿ ಗ್ರಾಮದ ಮಹಿಳೆಯರು ಬಟ್ಟೆ ಒಗೆಯುತ್ತಿದ್ದನ್ನು ಕಂಡ ಸುಮಂತ್ ಪತ್ನಿಗೆ ಇಲ್ಲೇ ಇರು ಎಂದು ಹೇಳಿ ಮರೆಯಾಗಿದ್ದಾನೆ. ರೋಹಿಣಿ ಕೆರೆಯ ಒಬ್ಬಳೆ ನಿಂತಿದ್ದನ್ನು ಅಲ್ಲಿದ್ದ ಮಹಿಳೆಯರು ನೋಡಿದ್ದಾರೆ. ಇದಾದ ಬಳಿಕ ರೋಹಿಣಿ ನಾಪತ್ತೆಯಾಗಿದ್ದಾಳೆ.
ಇದನ್ನೂ ಓದಿ | ಸಂಪಾದಕೀಯ | ಕಬ್ಬು ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಪಂದಿಸಲಿ
ತಂದೆ ಎಷ್ಟು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ಟವರ್ ಲೊಕೇಷನ್ ಮೂಲಕ ರೋಹಿಣಿ ಮೊಬೈಲ್ ಇರುವ ಜಾಗವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಕೆರೆಯ ಬಳಿ ಬಂದು ನೋಡಿದಾಗ ದಡದಲ್ಲಿ 1,760 ರೂ. ಹಣ, ಮೊಬೈಲ್ ಹಾಗೂ ಚಪ್ಪಲಿ ಕಂಡುಬಂದಿದೆ. ಅನುಮಾನಗೊಂಡು ಕೆರೆಯಲ್ಲಿ ಶೋಧ ಕಾರ್ಯ ನಡೆಸಿದಾಗ ರೋಹಿಣಿ ಶವ ಪತ್ತೆಯಾಗಿದೆ. ಗಂಡ ಸುಮಂತ್ ತನ್ನ ಮಗಳನ್ನು ಹೊಡೆದು ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ಆಕೆಯ ಮೈಮೇಲೆ ಇರುವ ಗಾಯದ ಗುರುತುಗಳೇ ಇದಕ್ಕೆ ಸಾಕ್ಷಿ ಎಂದು ಪೋಷಕರು ಆರೋಪಿಸಿದ್ದಾರೆ.
ಚನ್ನರಾಯಪಟ್ಟದ ಶವಾಗಾರದ ಮುಂದೆ ಮೃತ ರೋಹಿಣಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮುದ್ದಾದ ಮಗಳಿಗೆ ಬಂದ ಸ್ಥಿತಿ ಇನ್ಯಾವ ಹೆಣ್ಣು ಮಗಳಿಗೂ ಬರಬಾರದು. ನಮ್ಮ ಮಗಳ ಸಾವಿಗೆ ಸುಮಂತ್, ಮೀನಾಕ್ಷಿ, ಸುಶ್ಮಿತಾ ಹಾಗೂ ಪ್ರಮೋದ್ ಕಾರಣ ಇವರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಪೋಷಕರು ಒತ್ತಾಯಿಸಿದ್ದಾರೆ. ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ | Road accident | ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ: ಮೂರು ವರ್ಷದ ಮಗು ಸ್ಥಳದಲ್ಲಿಯೇ ಸಾವು