ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಪ್ರವಾಸಕ್ಕಾಗಿ ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಸಮಯದಲ್ಲಿ ಅವರು ಸಂಚರಿಸುವ ಮಾರ್ಗದಲ್ಲಿರುವ ಕಾಲೇಜುಗಳಿಗೆ ರಜೆ ಘೋಷಿಸಿ ಉನ್ನತ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಕುರಿತು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ. “ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ 20ರ ಸೋಮವಾರದಂದು ನಗರಕ್ಕೆ ಆಗಮಿಸುತ್ತಿದ್ದಾರೆ. ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವುದರಿಂದ, ಅವರು ಸಂಚರಿಸಲಿರುವ ಮಾರ್ಗದಲ್ಲಿ ಬರುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಅಂದು ಬಿಗಿಭದ್ರತೆಯ ದೃಷ್ಟಿಯಿಂದ ರಜೆ ಘೋಷಿಸಲಾಗಿದೆ ಎಂದಿದ್ದಾರೆ.
“ಶನಿವಾರ ಈ ಬಗ್ಗೆ ಸರಕಾರ ಆದೇಶ ಹೊರಡಿಸಿದೆ. ಇದರಂತೆ, ಪ್ರಧಾನಿ ಹಾದು ಹೋಗಲಿರುವ ಭಾರತೀಯ ವಿಜ್ಞಾನ ಮಂದಿರ(ೈಐಎಸ್‌ಸಿ), ಗೊರಗುಂಟೆ ಪಾಳ್ಯ, ಸಿಎಂಟಿಐ, ವರ್ತುಲ ರಸ್ತೆ, ಡಾ.ರಾಜಕುಮಾರ್ ಸ್ಮಾರಕ ಮೇಲ್ಸೇತುವೆ, ಲಗ್ಗೆರೆ ಸೇತುವೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಆರ್.ವಿ.ಕಾಲೇಜು, ನಾಗರಬಾವಿ, ಸುಮನಹಳ್ಳಿ ಮೇಲ್ಸೇತುವೆ, ಎಂಇಐ ಜಂಕ್ಷನ್, ಗೋವರ್ಧನ್ ಚಿತ್ರಮಂದಿರ, ಯಶವಂತಪುರ ಮತ್ತು ಜಕ್ಕೂರು ವಿಮಾನ ನಿಲ್ದಾಣ ಮಾರ್ಗಗಳ ಸುತ್ತಮುತ್ತಲಿನ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಈ ರಜೆ ಅನ್ವಯವಾಗಲಿದೆ” ಎಂದು ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಶಾಲೆಗಳ ಮಾಹಿತಿ ಇಲ್ಲ
ಅಶ್ವತ್ಥನಾರಾಯಣ ಅವರು ತಮ್ಮ ವ್ಯಾಪ್ತಿಗೆ ಒಳಪಡುವ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಿದ್ದಾರೆ. ಆದರೆ ಇದೇ ಮಾರ್ಗದಲ್ಲಿ ಅನೇಕ ಪದವಿ ಪೂರ್ವ ಕಾಲೇಜುಗಳು ಹಾಗೂ ಶಾಲೆಗಳೂ ಆಗಮಿಸುತ್ತವೆ. ಈ ಸಂಸ್ಥೆಗಳಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಗೆ ಒಳಪಡುತ್ತವೆ. ಈ ಕುರಿತು ಶಿಕ್ಷಣ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.