Site icon Vistara News

Kantara Movie | ಮಂಗಳೂರಿನಲ್ಲಿ ಕುಟುಂಬ ಸಮೇತ ಕಾಂತಾರ ಸಿನಿಮಾ ವೀಕ್ಷಿಸಿದ ಡಾ.ಡಿ.ವೀರೇಂದ್ರ ಹೆಗ್ಗಡೆ

Kantara Movie

ಮಂಗಳೂರು: ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಕುಟುಂಬ ಸಮೇತರಾಗಿ ನಗರದಲ್ಲಿ ಶುಕ್ರವಾರ ಕಾಂತಾರ ಚಿತ್ರ(Kantara Movie) ವೀಕ್ಷಣೆ ಮಾಡಿ, ಚಿತ್ರ ತಂಡದ ಶ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ನಗರದ ಬಿಗ್ ಸಿನಿಮಾ ಚಿತ್ರಮಂದಿರದಲ್ಲಿ ಪತ್ನಿ ಹೇಮಾವತಿ ಸೇರಿ ಕುಟುಂಬಸ್ಥರು ಹಾಗೂ ಕಾಂ‍ತಾರ ಚಿತ್ರ ತಂಡದ ಕಲಾವಿದರೊಂದಿಗೆ ಸಿನಿಮಾ ವೀಕ್ಷಿಸಿದರು. ನಟ, ನಿರ್ದೇಶಕ ರಿಷಬ್ ಶೆಟ್ಟಿ, ಸಿನಿಮಾ ಮಾಡುವ ಮುನ್ನ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿ ದೈವಾರಾಧನೆ ಸಂಬಂಧಿತ ಸಿನಿಮಾ ಮಾಡುತ್ತಿರುವುದಾಗಿ ಹೇಳಿ, ಹಲವು ಸಲಹೆಗಳನ್ನು ಪಡೆದಿದ್ದರು. ಕಾಂತಾರ ಚಿತ್ರದ ಬಗ್ಗೆ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಹೆಗ್ಗಡೆ ಅವರು ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಸಿನಿಮಾ ನೋಡಿ ಬಹಳ ದಿನಗಳಾಗಿತ್ತು, ಇಂದು ಒಂದು ವಿಭಿನ್ನವಾದ ಸಿನಿಮಾ ನೋಡಿದೆ. ರಾಜ್ಯದ ಒಂದು ಭಾಗದ ‌ಅನುಭವಗಳು, ನಂಬಿಕೆ, ನಡವಳಿಕೆಗಳು ಹಾಗೂ ದೈವಾರಾಧನೆಯ ಸೂಕ್ಷ್ಮತೆಗಳನ್ನು ಬಹಳ ಚೆನ್ನಾಗಿ ರಿಷಭ್ ತೋರಿಸಿದ್ದಾರೆ. ಈ ಚಿತ್ರದಿಂದ ಯುವಕರಿಗೆ ಹೊಸ ಕತೆ ಮತ್ತು ಹಳೆಯ ಆಚರಣೆಗಳ ಸ್ಮರಣೆ ಆಗುತ್ತದೆ ಎಂದು ತಿಳಿಸಿದರು.

ಹೊಸ ದೃಷ್ಟಿಕೋನದ ಜತೆ ಅಸತ್ಯದ ವಿರುದ್ಧ ಹೋರಾಡುವ ಕತೆಗಳು ನಮ್ಮಲ್ಲಿ ಜಾಸ್ತಿ. ಸತ್ಯದ ರಕ್ಷಣೆ, ಅನ್ಯಾಯದ ವಿರುದ್ಧ ಹೋರಾಟ ಮತ್ತು ನೆಮ್ಮದಿಯ ಜೀವನ ನಮಗೆ ಬೇಕು. ನೆಮ್ಮದಿ ಇಲ್ಲದಿರುವ ವ್ಯಕ್ತಿಯಿಂದಲೇ ಚಿತ್ರದ ಕತೆ ಆರಂಭವಾಗಿದೆ. ಎಲ್ಲ ಇದ್ದರೂ ಚಿತ್ರದಲ್ಲಿ ರಾಜನಿಗೆ ನೆಮ್ಮದಿ ಇಲ್ಲ. ಹಾಗಾಗಿ ಶಾಂತಿ, ನೆಮ್ಮದಿ, ಜಾತಿ, ಮತ ಬಿಟ್ಟು ಸಹಬಾಳ್ವೆಯ ಸಂದೇಶ ಈ ಚಿತ್ರದಲ್ಲಿ ‌ಇದೆ ಎಂದು ಹೇಳಿದರು.

ಚಿತ್ರ ನೋಡಿ ನಾನು ಬಹಳ ಸಂತೋಷ ಪಟ್ಟಿದ್ದೇನೆ, ಎಲ್ಲಾ ‌ಕಲಾವಿದರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ತಂತ್ರಜ್ಞಾನ ಬೆಳೆದಿದೆ, ಅದನ್ನು ರಿಷಭ್ ಶೆಟ್ಟಿ ‌ಚೆನ್ನಾಗಿ ಬಳಸಿಕೊಂಡಿದ್ದಾರೆ. ಕಲಾವಿದರು, ನಿರ್ಮಾಪಕ ವಿಜಯ್ ಕಿರಗಂದೂರು ಅವರಿಗೆ ನಮ್ಮ ಕುಟುಂಬದ ಪರವಾಗಿ ಅಭಿನಂದನೆ ಸಲ್ಲಿಸುವೆ ಎಂದು ನುಡಿದರು.

ಯಾವತ್ತೂ ನಮ್ಮ ದೈವಗಳು ಅಧರ್ಮಕ್ಕೆ ಬೆಂಬಲ ಕೊಡಲ್ಲ ಎಂಬುವುದು ಚಿತ್ರದ ಸಂದೇಶ. ನಮ್ಮ ಸಮಾಜದಲ್ಲಿ ಸ್ವಾರ್ಥಿಗಳು ಇರುತ್ತಾರೆ, ಭೂಮಿ, ಸಂಪತ್ತಿನ ಬಗ್ಗೆ ಆಸೆ ಇರುತ್ತದೆ. ಆದರೆ, ದೈವಗಳು ಸತ್ಯ ಮತ್ತು ‌ಧರ್ಮ ಹೊರತುಪಡಿಸಿ ಯಾವುದಕ್ಕೂ ಬೆಂಬಲ ಕೊಡುವುದಿಲ್ಲ ಎಂಬುವುದನ್ನು ಸಿನಿಮಾ ತೋರಿಸಿದೆ. ಇದು ಒಂದೊಳ್ಳೆ ಸಂದೇಶ ಎಂಬುವುದು ನನ್ನ ಅನಿಸಿಕೆ ಎಂದು ಅಭಿಮತ ವ್ಯಕ್ತಪಡಿಸಿದರು.

ಧರ್ಮ ಹುಡುಕಿಕೊಂಡು ಹೋದರೆ ಸಿಗಲ್ಲ

ದೈವಾರಾಧನೆ ಹಿಂದೂ ಸಂಸ್ಕೃತಿ ಅಲ್ಲ ಎಂಬ ಕುರಿತು ನಟ ಚೇತನ್‌ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, “ಧರ್ಮದ ಭಾಗ ಹೌದೋ ಅಲ್ಲವೋ ನನಗೆ ಗೊತ್ತಿಲ್ಲ. ಆದರೆ, ಎರಡೂ ಜಿಲ್ಲೆಯಲ್ಲಿ ವ್ಯಾಪಕವಾಗಿ ದೈವಾರಾಧನೆ ಇದೆ. ಅವಿಭಜಿತ ಜಿಲ್ಲೆಯ ಮೂಲ ಸ್ವರೂಪ ಅರಿಯದೇ ಮಾತನಾಡಿದರೆ ಅದು ಬೇರೆಯಾಗುತ್ತದೆ. ಧರ್ಮ ಅನ್ನುವ ಮೂಲ ಹುಡುಕಿಕೊಂಡು ಹೋದರೆ ‌ಎಲ್ಲೂ ಸಿಗಲ್ಲ. ನಮ್ಮ ನಂಬಿಕೆ, ನಡವಳಿಕೆ, ಆಚರಣೆಗಳು ನಮ್ಮಲ್ಲಿ ಬೆಳೆದು ಬಂದವು. ಹಾಗಾಗಿ ನಾವು ಇದನ್ನು ಬಿಟ್ಟಿರಲು ಸಾಧ್ಯವೇ ಇಲ್ಲ. ಚೇತನ್ ಅವರು ಹಿಂದೂ ಧರ್ಮದ ಯಾವ ಸೂಕ್ಷ್ಮತೆ ನೋಡಿದ್ದಾರೋ ಗೊತ್ತಿಲ್ಲ.‌ ನಮ್ಮ ಎರಡೂ ಜಿಲ್ಲೆಯಲ್ಲಿ ವ್ಯಾಪಕವಾಗಿ ಇರುವ ನಂಬಿಕೆ ಇದೆ. ನಾವು ದೈವಾರಾಧನೆ ಮಾಡಿ ದೈವಗಳಿಗೆ ಗೌರವ ಕೊಡ್ತೇವೆ ಅನ್ನೋದು ಸತ್ಯ. ದೈವ ಮೈ ಮೇಲೆ ‌ಬಂದಾಗ ಆ‌ ಮಾತಿಗೆ ನಾವು ಗೌರವ ‌ಕೊಡ್ತೇವೆ. ಇದು ಧರ್ಮ ಸೂಕ್ಷ್ಮದಲ್ಲಿ ವಿಮರ್ಶೆ ಮಾಡುವ ಅಗತ್ಯವೇ ಇಲ್ಲ” ಎಂದು ಹೇಳಿದರು.

ಮೊದಲಿಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದ್ದ ಕಾಂತಾರ ಚಿತ್ರಕ್ಕೆ ದೇಶದಾದ್ಯಂತ ಉತ್ತಮ ಸ್ಪಂದನೆ ದೊರೆತಿದ್ದರಿಂದ ಹಿಂದಿ, ತೆಲುಗು, ತಮಿಳು, ಮಲಯಾಳಂನಲ್ಲಿಯೂ ಸಿನಿಮಾ ರಿಲೀಸ್ ಮಾಡಲಾಯಿತು. ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಈಗಾಗಲೇ 150 ಕೋಟಿಗೂ ಹೆಚ್ಚು‌ ಹಣ ಗಳಿಸಿದ್ದು, ಬಿಡುಗಡೆಯಾಗಿ ಮೂರು ವಾರಗಳು ಕಳೆದರೂ ಬೇರೆ ಚಿತ್ರಗಳಿಗಿಂತ ಉತ್ತಮವಾಗಿ ಕಲೆಕ್ಷನ್‌ ಮಾಡುತ್ತಿದೆ.

ಇದನ್ನೂ ಓದಿ | Kantara Movie | ಕಾಂತಾರದ ಈ ವಾರದ ಓಟಕ್ಕೆ ಬ್ರೇಕ್ ಬೀಳುತ್ತಾ? 10 ಸಿನಿಮಾಗಳು ರಿಲೀಸ್‌!

Exit mobile version