ಮೈಸೂರು: 25 ವರ್ಷಗಳಿಂದ ಯೋಗಸಹಿತ ಮಾನಸಿಕ ಚಿಕಿತ್ಸೆ ಮೂಲಕ ಸಮಾಜಸೇವೆ ಸಲ್ಲಿಸುತ್ತಿರುವ ಮೈಸೂರಿನ ಡಾ. ಕೃಷ್ಣವೇಣಿ ಶ್ರೀಧರ್ ಅವರಿಗೆ ʼಸ್ವಾಮಿ ಶಿವಾನಂದ ಸರಸ್ವತಿ ಯೋಗ ಸಮ್ಮಾನ್ʼ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ರಾಜ್ಯ ಹಾಗೂ ಹೊರ ದೇಶಗಳಲ್ಲಿ ಸಮಾಜಕ್ಕೆ ಉಚಿತ ಸೇವೆ ಸಲ್ಲಿಸುತ್ತಿರುವ ಅನುಭವಿ, ನುರಿತ ಹಾಗೂ ತಜ್ಞ ಯೋಗಚಿಕಿತ್ಸಕರಿಗೆ ಕಾನ್ಪುರದ ಪ್ರತಿಷ್ಠಿತ ಮರ್ಚೆಂಟ್ ಚೇಂಬರ್ಸ್ ಸಭಾಂಗಣದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶಾಲಾ ಮಕ್ಕಳು, ಉದಯೋನ್ಮುಖ ಆಟಗಾರರು, ಹಿರಿಯ ವಯಸ್ಕರು ಮುಂತಾದವರಿಗೆ ಮಾನಸಿಕ ಸ್ವಾಸ್ಥ್ಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಉಚಿತ ಸೇವೆ ಪರಿಗಣಿಸಿ ಡಾ. ಕೃಷ್ಣವೇಣಿ ಶ್ರೀಧರ್ ಅವರಿಗೆ ಅಂತಾರಾಷ್ಟ್ರೀಯ ಯೋಗ ಪುರಸ್ಕಾರ ನೀಡಲಾಗಿದೆ. ಪ್ರಶಸ್ತಿಯನ್ನು ತಂದೆಯವರಿಗೆ ಸಮರ್ಪಿಸುತ್ತಿರುವುದಾಗಿ ಕೃಷ್ಣವೇಣಿ ಅವರು ಹೇಳಿದರು.
1938ರಲ್ಲಿ ಮೈಸೂರು ನಾಲ್ವಡಿ ಕೃಷ್ಣರಾಜ ಒಡೆಯರ್ ಮಹಾರಾಜರ ಕೃಪಾ ಪೋಷಿತ ಪಾಠಶಾಲೆಯಲ್ಲಿ ಯೋಗಶಿಕ್ಷಕರಾಗಿದ್ದ ಟಿ. ಕೃಷ್ಣಮಾಚಾರ್ಯ ಅವರ ವಿದ್ಯಾರ್ಥಿಯಾಗಿದ್ದ ಪೂಜ್ಯ ತಂದೆಯವರಾದ ಎಂ. ಕೆ. ಗೋಪಾಲ ಅಯ್ಯಂಗಾರ್ ಅವರು 3 ವರ್ಷಗಳ ‘ಶ್ರೀ ಸನಾತನ ಯೋಗಿಕ್ ಫಿಸಿಕಲ್ ಕಲ್ಚರ್’ ಎಂಬ ಹೆಸರಿನಲ್ಲಿದ್ದ ಅಂದಿನ ಕಾಲದ ಅತ್ಯಂತ ಕಠಿಣವಾದ 3 ವರ್ಷಗಳ ಎಲಿಮೆಂಟರಿ, ಇಂಟರ್ ಮೀಡಿಯಟ್ ಹಾಗೂ ಅಡ್ವಾನ್ಸ್ ಕೋರ್ಸ್ ಯೋಗತರಬೇತಿಯನ್ನು ಸಂಪೂರ್ಣಗೊಳಿಸಿರುವುದಷ್ಟೇ ಅಲ್ಲದೆ, ಯೋಗದ ಅಂತರಾಳವನ್ನು ಕೃಷಿ ಮಾಡುತ್ತಾ ಇಂದಿನ ಯುವ ಪೀಳಿಗೆಗೂ ಮಾದರಿಯಾಗಿ, ಇಷ್ಟೂ ಸುದೀರ್ಘ ವರ್ಷಗಳ ಸಮಾಜಸೇವೆಗೆ ಮುಖ್ಯದ್ವಾರವಾಗಿದ್ದಾರೆ ಎಂದು ಕೃಷ್ಣವೇಣಿ ತಿಳಿಸಿದರು.
ಇದನ್ನೂ ಓದಿ | CM Siddaramaiah: ಅಪ್ರಾಪ್ತ ಹೆಣ್ಣುಮಕ್ಕಳ ಮದುವೆ ಹೆಚ್ಚಳ; ಅಧಿಕಾರಿಗಳಿಗೆ ಸಿಎಂ ತರಾಟೆ
ಈ ವಿಶಿಷ್ಟ ಸಮಾರಂಭದಲ್ಲಿ ಭಾರತದ ನೀತಿ ಆಯೋಗಕ್ಕೆ ಸೇರಿ ಹೊಂದಿಕೊಂಡಂತೆ ಜಂಟಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತೀಯ ಯೋಗ ಚಿಕಿತ್ಸಕರ ಸಂಘದಿಂದ ಕಾನ್ಪುರದಲ್ಲಿ ಡಿಸೆಂಬರ್ 23ರಂದು ದೇಶ ಮತ್ತು ವಿದೇಶಗಳ ಸುಮಾರು ವಿವಿಧ 22 ರಾಜ್ಯಗಳಿಂದ ಆಯ್ದ 108 ಯೋಗಾಚಾರ್ಯರಿಗೆ ಸನ್ಮಾನ ಮಾಡಲಾಗಿತ್ತು. ಈ ಕಾರ್ಯಕ್ರಮದ ಉದ್ದೇಶವು ಯೋಗದ ಮೂಲಕ ನಿರೋಗಿ ಹಾಗೂ ಸಧೃಡ ಭಾರತ ಸಮಾಜ ನಿರ್ಮಾಣದೆಡೆಗೆ ಕೊಂಡೊಯ್ಯಲು ಶ್ರಮಿಸುತ್ತಿರುವ ಯೋಗಾಚಾರ್ಯರನ್ನು ಗೌರವಿಸುವ ಮೂಲಕ ಪ್ರೋತ್ಸಾಹ ನೀಡುವುದಾಗಿದೆ ಎಂದು ಕಾರ್ಯಕ್ರಮದ ಆಯೋಜನರು ಹೇಳಿದರು.