Site icon Vistara News

Karnataka Election 2023: ಪರಮೇಶ್ವರ್‌, ಅಶೋಕ್‌ ಖೇಣಿ ಸೇರಿ ವಿವಿಧ ಕಾಂಗ್ರೆಸ್‌ ನಾಯಕರಿಂದ ಉಮೇದುವಾರಿಕೆ

Dr Parameshwara, Ashok Kheny and other Congress leaders to file nominations

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ (Karnataka Election 2023) ಬುಧವಾರ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್‌, ಅಶೋಕ್‌ ಖೇಣಿ ಸೇರಿ ವಿವಿಧ ಕಾಂಗ್ರೆಸ್‌ ನಾಯಕರು ನಾಮಪತ್ರ ಸಲ್ಲಿಸಿದರು. ಏ.20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಹೀಗಾಗಿ ಹಲವು ಅಭ್ಯರ್ಥಿಗಳು ಬುಧವಾರ ನಾಮಪತ್ರ ಸಲ್ಲಿಸಿದ್ದು, ಇದೇ ವೇಳೆ ಅಪಾರ ಸಂಖ್ಯೆಯ ಬೆಂಬಲಿಗರು, ಕಾರ್ಯಕರ್ತರೊಂದಿಗೆ ರೋಡ್‌ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದ್ದಾರೆ.

ಕೊರಟಗೆರೆಯಲ್ಲಿ ಬೃಹತ್ ಮೆರವಣಿಗೆಯಲ್ಲಿ ತೆರಳಿ ಪರಮೇಶ್ವರ್ ನಾಮಪತ್ರ

ತುಮಕೂರು: ಕೊರಟಗೆರೆಯ ಕಟ್ಟೆ ಗಣಪತಿ ಮತ್ತು ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ, ತಾಲೂಕು ಕಚೇರಿಗೆ ಸಾವಿರಾರು ಬೆಂಬಲಿಗರು, ಕಾರ್ಯಕರ್ತರೊಂದಿಗೆ ತೆರಳಿ ಕಾಂಗ್ರೆಸ್‌ ನಾಯಕ ಡಾ.ಜಿ.ಪರಮೇಶ್ವರ್‌ ಅವರು ನಾಮಪತ್ರ ಸಲ್ಲಿಸಿದರು. ಬಳಿಕ ಬೃಹತ್ ಮೆರವಣಿಗೆ ಮಾಡುವ ಮೂಲಕ ಶಕ್ತಿ ಪ್ರದರ್ಶನ ಮಾಡಿದರು.

ನಂತರ ಮಾತನಾಡಿದ ಪರಮೇಶ್ವರ್‌, ಸಂವಿಧಾನದ ಚೌಕಟ್ಟಿನಲ್ಲಿ ಚುನಾವಣೆ ನಡೆಸಲು ಒಪ್ಪಿಕೊಂಡಿದ್ದೇವೆ. ಅದರನ್ವಯ ನಾನು ನಾಮಪತ್ರ ಸಲ್ಲಿಸಿದ್ದೇನೆ. ಈ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ ಎನ್ನುವ ಆತ್ಮವಿಶ್ವಾಸದಿಂದ ನಾಮಪತ್ರ ಸಲ್ಲಿಸಿದ್ದೇನೆ‌ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಎಲ್ಲ ಸೂಚನೆ ಇದೆ. ಮೇ 10ರಂದು ನನಗೆ ಮತ ಕೊಡಿ ಎಂದು ಕೊರಟಗೆರೆ ಕ್ಷೇತ್ರದ ಜನರಲ್ಲಿ ಮನವಿ ಮಾಡುತ್ತೇನೆ. ನಾನು ಉನ್ನತ ಹುದ್ದೆಗೆ ಏರಲಿ ಎಂದು ಅಭಿಮಾನಿಗಳು ಆಸೆ ಇಟ್ಟುಕೊಂಡಿರುತ್ತಾರೆ. ಅದು ಸಹಜ, ಹೊಸದೇನಲ್ಲ. ಈ ಕ್ಷೇತ್ರದಿಂದ ನಾನು ಗೆಲ್ಲುತ್ತೇನೆ ಎಂಬ ಅಚಲ ವಿಶ್ವಾಸ ಇದೆ ಎಂದು ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಸಚಿವ ಸುಧಾಕರ್‌ಗೆ ಸೆಡ್ಡು ಹೊಡೆದ ಪ್ರದೀಪ್‌ ಈಶ್ವರ್‌

ಚಿಕ್ಕಬಳ್ಳಾಪುರ: ನಗರದಲ್ಲಿ ಬೃಹತ್ ಮೆರವಣಿಗೆ ಮೂಲಕ ಸಾಗಿ ಪರಿಶ್ರಮ ನೀಟ್‌ ಅಕಾಡೆಮಿ ಸಂಸ್ಥಾಪಕ, ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ ಅವರು ನಾಮಪತ್ರ ಸಲ್ಲಿಸಿದರು. ಮೆರವಣಿಗೆಯಲ್ಲಿ ಸಾವಿರಾರು ಜನರು ಸೇರಿದ್ದರು. ಒಕ್ಕಲಿಗರ ಕಲ್ಯಾಣ ಮಂಟಪದಿಂದ ಬೃಹತ್ ರೋಡ್ ಶೋ‌ ನಡೆಸಿ ಚಿಕ್ಕಬಳ್ಳಾಪುರದಲ್ಲಿ ಸಚಿವ ಡಾ.ಕೆ.ಸುಧಾಕರ್‌ಗೆ ಸೆಡ್ಡು ಹೊಡೆದರು. ಬೃಹತ್ ಮೆರವಣಿಗೆಯಲ್ಲಿ ಕಾಂಗ್ರೆಸ್‌ ನಾಯಕರಾದ ರಮೇಶ್ ಕುಮಾರ್, ರಕ್ಷಾರಾಮಯ್ಯ‌ , ಎಂ.ಸಿ.ಸುಧಾಕರ್, ಅನಿಲ್ ಕುಮಾರ್, ಮಾಜಿ ಸಿಎಂ ವೀರಪ್ಪಮೊಯ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ | Karnataka Elections 2023 : ಜೆಡಿಎಸ್‌ ಸ್ಟಾರ್‌ ಪ್ರಚಾರಕರ ಪಟ್ಟಿಯಲ್ಲಿ ದೇವೇಗೌಡರ ಕುಟುಂಬದ 8 ಮಂದಿ, ಭವಾನಿ ರೇವಣ್ಣಗೂ ಸ್ಥಾನ

ಮುಧೋಳ ಕ್ಷೇತ್ರದಲ್ಲಿ ಆರ್‌.ಬಿ. ತಿಮ್ಮಾಪೂರ ನಾಮಪತ್ರ

ಬಾಗಲಕೋಟೆ: ಮುಧೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಆರ್‌.ಬಿ.ತಿಮ್ಮಾಪೂರ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಭರ್ಜರಿ ರೋಡ್ ಶೋ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ಮಂಗಳವಾರ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಶಕ್ತಿ ಪ್ರದರ್ಶನ ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಬುಧವಾರ ತಿಮ್ಮಾಪೂರ ಭರ್ಜರಿ ರೋಡ್ ಶೋ ನಡೆಸಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಅಶೋಕ ಖೇಣಿ ಉಮೇದುವಾರಿಕೆ

ಬೀದರ್: ಬೀದರ್ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಉದ್ಯಮಿ ಅಶೋಕ ಖೇಣಿ ನಾಮಪತ್ರ ಸಲ್ಲಿಸಿದರು. ಅಪಾರ ಬೆಂಬಲಿಗರೊಂದಿಗೆ ತಹಸೀಲ್ದಾರ್‌ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು. ಅಶೋಕ ಖೇಣಿ ಅವರು ಮೂರನೆಯ ಬಾರಿಗೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಮತ್ತೊಂದೆಡೆ ಬೀದರ್ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರಹೀಂ ಖಾನ್ ನಾಮಪತ್ರ ಸಲ್ಲಿಸಿದರು. ನಗರದ ಡಿಸಿ‌ ಕಚೇರಿಗೆ ತೆರಳಿ‌ ನಾಮಪತ್ರ ನಾಮಪತ್ರ ಸಲ್ಲಿಕೆ ಮಾಡಿದರು. ಇನ್ನು ಜಿಲ್ಲೆಯ ಔರಾದ್ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಭೀಮಸೇನ್ ರಾವ ಶಿಂಧೆ ನಾಮಪತ್ರ ಸಲ್ಲಿಸಿದ್ದಾರೆ.

ಇದನೂ ಓದಿ | Karnataka Election 2023 : ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಿದ ಕಾಂಗ್ರೆಸ್‌; ಪುಲಕೇಶಿನಗರದಿಂದ ಎ.ಸಿ. ಶ್ರೀನಿವಾಸ್‌ ಕಣಕ್ಕೆ

ವಿವಿಧ ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ

ಬಳ್ಳಾರಿ ಗ್ರಾಮೀಣ- ಬಿ.ನಾಗೇಂದ್ರ
ಗಂಗಾವತಿ- ಇಕ್ಬಾಲ್‌ ಅನ್ಸಾರಿ
ಹುನಗುಂದ- ವಿಜಯಾನಂದ ಕಾಶಪ್ಪನವರ್‌
ಹಗರಿಬೊಮ್ಮನಹಳ್ಳಿ- ಭೀಮಾ ನಾಯಕ್‌
ಚಳ್ಳಕೆರೆ- ಟಿ.ರಘುಮೂರ್ತಿ
ಶಿರಹಟ್ಟಿ- ಸುಜಾತಾ ದೊಡ್ಡಮನಿ
ರೋಣ- ಜಿ.ಎಸ್‌.ಪಾಟೀಲ
ಕುಮಟಾ- ನಿವೇದಿತಾ ಆಳ್ವಾ
ಪುತ್ತೂರು- ಅಶೋಕ್‌ ಕುಮಾರ್‌ ರೈ
ಶಿಕಾರಿಪುರ- ಗೋಣಿ ಮಾಲತೇಶ್‌
ಹಿರಿಯೂರು-ಡಿ.ಸುಧಾಕರ್‌

Exit mobile version