ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ (Kasapa) ಅಧ್ಯಕ್ಷ ಡಾ. ಮಹೇಶ ಜೋಶಿ (DR Mahesh Joshi) ವಿರುದ್ಧ ಅಪಸ್ವರಗಳು ಕೇಳಿಬರುತ್ತಿದ್ದು, ಅವರ ನಡೆ-ನುಡಿಗಳ ಬಗ್ಗೆ ತೀವ್ರ ಆಕ್ಷೇಪವೊಂದು ಕೇಳಿಬಂದಿದೆ. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ. ಪ್ರಕಾಶಮೂರ್ತಿ (M Prakashmurthy) ಅವರು ಈ ಬಗ್ಗೆ ಜೋಶಿ ಅವರಿಗೆ ಬಹಿರಂಗ ಪತ್ರ ಬರೆದಿದ್ದು, “ರಾಜ್ಯಾಧ್ಯಕ್ಷರಾದ ತಮ್ಮಿಂದ ಕಸಾಪದ ಘನತೆ-ಗೌರವಗಳು ಹಿಂದೆಂದಿಗಿಂತಲೂ ಕುಸಿದು ಮಣ್ಣುಪಾಲಾಗುತ್ತಿದೆ” ಎಂದು ಗಂಭೀರವಾಗಿ ಆರೋಪ ಮಾಡಿದ್ದಾರೆ.
ಈವರೆಗೆ ಕೆಲವು ಸಮಸ್ಯೆಗಳ ಬಗ್ಗೆ, ನಿಲುವುಗಳ ಬಗ್ಗೆ ಆಂತರಿಕವಾಗಿ ಮಹೇಶ್ ಜೋಶಿಯವರಿಗೆ ಪತ್ರ ಬರೆದಿದ್ದರೂ ಅವರಿಂದು ಯಾವುದೇ ಪ್ರತಿಕ್ರಿಯೆ ಬಾರದೇ ಇರುವುದರಿಂದ ಈಗ ಅನಿವಾರ್ಯವಾಗಿ ಬಹಿರಂಗ ಪತ್ರವನ್ನು ಬರೆಯುತ್ತಿರುವುದಾಗಿ ಪ್ರಕಾಶಮೂರ್ತಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪ್ರಕಾಶಮೂರ್ತಿ ಪತ್ರದ ಯಥಾವತ್ ಪ್ರತಿ
ತಮ್ಮ ನಡೆ-ನುಡಿ-ನಿಲುವುಗಳನ್ನು ಬದಲಾಯಿಸಿಕೊಂಡು, ದಿನದಿಂದ ದಿನಕ್ಕೆ ಕುಸಿಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆಯನ್ನು ಎತ್ತಿ ಹಿಡಿಯುವಂತೆ ರಾಜ್ಯಾಧ್ಯಕ್ಷರಾದ ತಮಗೆ ಬಹಿರಂಗ ಮನವಿ.
ಇದನ್ನೂ ಓದಿ: Grapes Benefits: ದ್ರಾಕ್ಷಿ ಸೇವಿಸಿದ್ರೆ ಸನಿಹಕ್ಕೂ ಬರಲ್ಲ ಕ್ಯಾನ್ಸರ್! ಅಬ್ಬಾ ಎಷ್ಟೊಂದು ಲಾಭಗಳು?
108 ವರ್ಷಗಳಿಂದ ಕನ್ನಡದ-ಕನ್ನಡಿಗರ-ಕರ್ನಾಟಕದ ಕಲೆ, ಸಾಹಿತ್ಯ, ಸಂಸ್ಕೃತಿ, ಜನಪದಗಳ ಸಂವರ್ಧನೆಗೆ ಸೃಜನಶೀಲ ನೆಲೆಯಲ್ಲಿ ಸದಾ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವ ಕನ್ನಡ ಸಾಹಿತ್ಯ ಪರಿಷತ್ತಿನಂತಹ ಘನತೆವೆತ್ತ ಸಂಸ್ಥೆಯ ಪ್ರಸ್ತುತ ರಾಜ್ಯಾಧ್ಯಕ್ಷರಾದ ತಮ್ಮಿಂದ ಕಸಾಪದ ಘನತೆ-ಗೌರವಗಳು ಹಿಂದೆಂದಿಗಿಂತಲೂ ಕುಸಿದು ಮಣ್ಣುಪಾಲಾಗುತ್ತಿರುವ ವಿಚಾರಗಳು ವ್ಯಾಪಕವಾಗಿ ಹರಡಿ, ಎಲ್ಲೆಡೆಗಳಿಂದ ಎಲ್ಲರಿಗೂ ಮುಜುಗರ ಉಂಟುಮಾಡುತ್ತಿವೆ. ಈಗಾಗಲೇ ನಾನು ಆಂತರಿಕವಾಗಿ ಬರೆದಿರುವ ಪತ್ರಗಳಿಗೆ, ಸಭೆಗಳಲ್ಲಿ ನಡೆಸಿರುವ ಚರ್ಚೆಗಳಿಗೆ, ಸಾರ್ವಜನಿಕರ ತೀವ್ರ ಟೀಕೆ-ಟಿಪ್ಪಣಿಗಳಿಗೆ ಯಾವುದೇ ರೀತಿಯ ಸ್ಪಂದನೆಗಳು ಬಾರದ ಹಿನ್ನೆಲೆಯಲ್ಲಿ ಕೆಳಕಂಡ ವಿಚಾರಗಳನ್ನು ತಮ್ಮ ಗಮನಕ್ಕೆ ತರುತ್ತಾ, ಅನಿವಾರ್ಯವಾಗಿ ಈ ಬಹಿರಂಗ ಮನವಿಯನ್ನು ಮಾಡುತ್ತಿದ್ದೇನೆ.
ಸಾಮಾಜಿಕ ವಲಯದಲ್ಲಿ ಟೀಕೆಗೆ ಗುರಿ
ನವೆಂಬರ್ 21, 2021ರಂದು ನಡೆದ ಚುನಾವಣೆಯಲ್ಲಿ 30 ಜಿಲ್ಲಾಧ್ಯಕ್ಷರು, ನಾಲ್ಕು ಗಡಿನಾಡುಗಳ ಅಧ್ಯಕ್ಷರು, ಓರ್ವ ರಾಜ್ಯಾಧ್ಯಕ್ಷರಾದ ತಾವು ಏಕಕಾಲಕ್ಕೆ ಆಯ್ಕೆಯಾಗಿ ನೂತನ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂದಿದ್ದು, ಪ್ರಾರಂಭದ ದಿನಗಳಿಂದಲೂ ರಾಜ್ಯಾಧ್ಯಕ್ಷರಾದ ತಮ್ಮ ನಡೆ-ನುಡಿ-ನಿಲುವುಗಳು ನಾಡಿನಾದ್ಯಂತ ಸಾಹಿತ್ಯಿಕ-ಸಾಂಸ್ಕೃತಿಕ-ಸಾಮಾಜಿಕ ವಲಯಗಳಲ್ಲಿ ವ್ಯಾಪಕ ಟೀಕೆ ಮತ್ತು ವಿವಾದಗಳಿಗೆ ಗುರಿಯಾಗಿವೆ. ಅಲ್ಲದೆ ಇಡೀ ಕಾರ್ಯಕಾರಿ ಸಮಿತಿಯೂ ಕೂಡ ತೀವ್ರ ನಿಂದನೆಗೆ ಒಳಗಾಗುತ್ತಿದೆ.
ಏಕಪಕ್ಷೀಯ ನಿರ್ಧಾರವನ್ನು ಕೈಬಿಡಿ
1915 ರಿಂದ 2018ರವರೆಗಿನ ವರ್ಷಗಳಲ್ಲಿ 6 ಬಾರಿ ಕಾಲಕ್ಕೆ ತಕ್ಕಂತೆ ಕೆಲವು ತಿದ್ದುಪಡಿಗಳನ್ನು ಕಂಡಿದ್ದ ಕಸಾಪದ ನಿಬಂಧನೆಗಳಿಗೆ ಸದರಿ ಅವಧಿಯಲ್ಲಿಯೂ ಕೆಲವೇ ಕೆಲವು ತಿದ್ದುಪಡಿಗಳನ್ನು ಮಾಡಲು ಕಾರ್ಯಕಾರಿ ಸಮಿತಿಯ ಒಪ್ಪಿಗೆ ಪಡೆದಿರಿ. ಆದರೆ, ನಿಬಂಧನೆಗಳ ತಿದ್ದುಪಡಿ ಸಲಹಾ ಸಮಿತಿಯ ಸಲಹೆಯ ಮೇರೆಗೆ ಎಂದು ನಿಬಂಧನೆಗಳಿಗೆ ಆಮೂಲಾಗ್ರ / ಕ್ರಾಂತಿಕಾರಿ ಬದಲಾವಣೆ ಎಂಬ ಹೆಸರಿನಲ್ಲಿ ತಿದ್ದುಪಡಿಗಳನ್ನು ಮಾಡಿದಿರಿ. ಸಲಹಾ ಸಮಿತಿಯಲ್ಲಿದ್ದ ಕಾರ್ಯಕಾರಿ ಸಮಿತಿಯ ಪ್ರತಿನಿಧಿಗಳಿಂದ, ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯರಿಂದ, ಸಾಹಿತ್ಯಿಕ ಮತ್ತು ಸಾರ್ವಜನಿಕ ವಲಯದವರಿಂದ ತೀವ್ರ ಟೀಕೆ, ಆರೋಪಗಳಿಗೆ ಗುರಿಯಾದರೂ, ರಾಜ್ಯಾಧ್ಯಕ್ಷರಾದ ತಾವೇ ನಡೆಸಿದ ಸಮಾಲೋಚನಾ ಸಭೆಯಲ್ಲಿ ಕೆಲವು ಹಿರಿಯರು ಸೂಚಿಸಿದ ಸಲಹೆಗಳನ್ನೂ ಪರಿಗಣಿಸಲಿಲ್ಲ. ಮುಂದುವರಿದು, ದುಬಾರಿ ವೆಚ್ಚದಲ್ಲಿ ಮುದ್ರಿಸಿರುವ ನಿಬಂಧನೆಗಳ ಪುಸ್ತಕದ ಮೇಲೆ ನ್ಯಾಯಾಲಯದಲ್ಲಿ ದಾಖಲಾಗಿರುವ ಮೂಲ ದಾವೆಯ ತೀರ್ಪಿಗೆ ಒಳಪಟ್ಟ ಅನುಮೋದನೆ ಅಡಿಯಲ್ಲಿ ನೋಂದಾಯಿಸಿರುವ ನಿಬಂಧನೆಗಳನ್ನು ಕಾನೂನುಬಾಹಿರವಾಗಿ ಅನುಷ್ಠಾನಗೊಳಿಸುತ್ತಿರುವಿರಿ. ಸದಸ್ಯತ್ವದ ಅಮಾನತು, ಚುನಾಯಿತ ಕಾರ್ಯಕಾರಿ ಸಮಿತಿಗೆ ಕಟ್ಟುಪಾಡುಗಳ ಸುತ್ತೋಲೆ, ಹಣಕಾಸಿನ ನಿರ್ವಹಣೆ ಮುಂತಾದ ವಿಷಯಗಳಲ್ಲಿ ಕಾರ್ಯಕಾರಿ ಸಮಿತಿಯ ಚುನಾಯಿತ ಪ್ರತಿನಿಧಿಗಳೊಂದಿಗೆ ಚರ್ಚಿಸಿರುವುದಿಲ್ಲ. ಚುನಾಯಿತ ಸದಸ್ಯರುಗಳ ಸಲಹೆ, ಸೂಚನೆ, ಮನವಿಗಳನ್ನು ಪರಿಗಣಿಸದೇ, ರಾಜ್ಯಾಧ್ಯಕ್ಷರಾದ ತಮಗೇ ಪರಮಾಧಿಕಾರವಿದೆ ಎಂದು ಪ್ರತಿನಿಧಿಗಳ ಸ್ವಾಯತ್ತತೆಗಳೆಲ್ಲವನ್ನೂ ಹತ್ತಿಕ್ಕಿ, ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಾ ಬಂದಿರುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸುತ್ತೇನೆ.
ಇದನ್ನೂ ಓದಿ: Anil Shetty: ಬಿಜೆಪಿಯ ಅನಿಲ್ ಶೆಟ್ಟಿಗೆ ಕುಕ್ಕರ್ ʻಪ್ರೆಶರ್ʼ; ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು
ಪ್ರಶ್ನೆ ಮಾಡಿದವರಿಗೆ ಹೆದರಿಸುತ್ತೀರಿ
ತಾವು “ಸಂತ ಶಿಶುನಾಳ ಷರೀಫರ ಗುರು ಗೋವಿಂದಭಟ್ಟರ ಮರಿಮೊಮ್ಮಗ” ಎಂದೂ, “ಮುಖ್ಯಮಂತ್ರಿ ನನಗೆ ಹೋಗೋ ಬಾರೊ ಗೆಳೆಯ” ಎಂಬಿತ್ಯಾದಿ ಅನೇಕ ವೈಯಕ್ತಿಕ ಹಿನ್ನೆಲೆಯ (ಅತಿರೇಕದ) ವಿಚಾರಗಳನ್ನು ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಮಾತನಾಡುತ್ತಾ, ವೃಥಾ ಸಮಯ ವ್ಯರ್ಥ ಮಾಡುತ್ತಾ, ವಿಷಯಾಂತರ ಮಾಡುವ ತಂತ್ರಗಳನ್ನು ಹೂಡುತ್ತಾ, “ನಾವೆಲ್ಲರೂ ಗಾಜಿನ ಮನೆಯಲ್ಲಿ ಇರುವವರೇ… ಎಚ್ಚರವಿರಲಿ”, “ನಿಮ್ಮಗಳ ಮೇಲೆ ದೂರು ಬಂದಿವೆ” ಎನ್ನುವ ನೀವು, ದೂರುಗಳ ಪ್ರತಿ ಕೇಳಿದಾಗ “ಬೇಕಿದ್ದರೆ ಆರ್‌ಟಿಐ ಮೂಲಕ ಅರ್ಜಿ ಸಲ್ಲಿಸಿ” ಎಂದು ಹೇಳುತ್ತೀರಿ. “ನನ್ನ ವಿರುದ್ಧ ಯಾವುದೇ ರೀತಿಯಲ್ಲಿ ಟೀಕಿಸಿದರೂ ದೇಶದ ನಾನಾ ಭಾಗದಲ್ಲಿರುವ ನನ್ನ ಸ್ನೇಹಿತ ನ್ಯಾಯವಾದಿಗಳು, ನಿವೃತ್ತ ನ್ಯಾಯಾಧೀಶರ ಮೂಲಕ ಎಲ್ಲಿ ಬೇಕಾದರೂ ದಾವೆ ಹೂಡಿಸಿ, ಕೋರ್ಟಿಗೆ ಅಲೆಯುವಂತೆ ಮಾಡಿ ಹೈರಾಣಾಗಿಸುತ್ತೇನೆ”, “ನಿಮಗ್ಯಾರಿಗೂ ವಿವೇಕವೇ ಇಲ್ಲ; ನಿಬಂಧನೆಗಳನ್ನು ಮತ್ತು ನಡಾವಳಿಗಳನ್ನು ಸರಿಯಾಗಿ ಓದಿಕೊಂಡೇ ಬರುವುದಿಲ್ಲ” ಎಂಬ ಅನೇಕ ಬೆದರಿಕೆಯ ಮತ್ತು ಮೂದಲಿಕೆಯ ಮಾತುಗಳನ್ನಾಡುತ್ತಾ, ವಾಸ್ತವ ಹಾಗೂ ಅಗತ್ಯ ವಿಚಾರಗಳ ಬಗೆಗೆ ಪ್ರಶ್ನೆ ಮಾಡುವವರನ್ನು ಹತ್ತಿಕ್ಕುತ್ತಾ, “ನೀವೆಲ್ಲರೂ ಅದ್ಹೇಗೆ ಒಗ್ಗಟ್ಟಾಗಿರುವಿರಿ ನೋಡುತ್ತೇನೆ” ಎಂಬ ಒಡೆದಾಳುವ ನೀತಿಯನ್ನು ಅನುಸರಿಸುತ್ತಾ, ಪ್ರಶ್ನೆ ಮಾಡುವವರನ್ನು ಏರುಧ್ವನಿಯಲ್ಲಿ ಮಾತನಾಡುತ್ತೀರಿ. ಪದೇ ಪದೆ ಪ್ರಶ್ನೆ ಕೇಳುತ್ತೀರಿ, ಬೇರೆಯವರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ. ನೀವಷ್ಟೇ ಬುದ್ದಿವಂತರೇ?” ಎಂಬಿತ್ಯಾದಿ ಮಾತುಗಳಿಂದ ಸಭೆಯ ಉದ್ದೇಶದ ದಿಕ್ಕು ತಪ್ಪಿಸುತ್ತಾ, ಅಸಂಬದ್ಧ ತೀರ್ಮಾನಗಳನ್ನು ಕೈಗೊಂಡು ಮಾಧ್ಯಮಗಳ ಮೂಲಕ ಸಮಾಜಕ್ಕೆ ಸಿಹಿಲೇಪಿತ ಕಹಿ ವಿಚಾರಗಳನ್ನು ಉಣಬಡಿಸುತ್ತಿರುವುದನ್ನೂ ಕೈಬಿಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ.
ಸಾರ್ವಜನಿಕವಾಗಿ ಬರುವ ಸಲಹೆ-ಸೂಚನೆ, ಟೀಕೆ ಟಿಪ್ಪಣಿಗಳಿಗೆ ತಮ್ಮ ವಿತಂಡವಾದದ ಮೂಲಕ ಸಮರ್ಥನೆಗಳನ್ನು ಮಾಡುತ್ತಾ, ಕನ್ನಡದ ನೈಜ ಸಾಹಿತಿಗಳನ್ನೂ, ಲೇಖಕರನ್ನೂ, ಚಿಂತಕರನ್ನೂ, ಚಳವಳಿಗಾರರನ್ನೂ, ಹೋರಾಟಗಾರರನ್ನೂ, ಸಂಘಟಕರನ್ನೂ, ಸಾಂಸ್ಕೃತಿಕ ಲೋಕದ ಪ್ರತಿಭಾವಂತರನ್ನೂ ಸಾಹಿತ್ಯ ಪರಿಷತ್ತಿನಿಂದ ದೂರ ಮಾಡುತ್ತಿರುವುದನ್ನು ಇಲ್ಲಿಗೇ ನಿಲ್ಲಿಸಬೇಕೆಂದು ಕೋರುತ್ತೇನೆ.
ಇದುವರೆಗೆ ನಡೆದಿರುವ 8 ಕಾರ್ಯಕಾರಿ ಸಮಿತಿ ಸಭೆಗಳು, ಒಂದು ವಿಶೇಷ ಸರ್ವ ಸದಸ್ಯರ ಸಭೆ, ಒಂದು ವಾರ್ಷಿಕ ಸಾಮಾನ್ಯ ಸಭೆ ಇವುಗಳನ್ನು ನಿಯಮಾನುಸಾರ ನಡೆಸದೆ, ಕ್ರಿಯಾಲೋಪ ಎಸಗಿರುವುದರಿಂದ ಅನೇಕ ಕಾನೂನಾತ್ಮಕ ಎಡವಟ್ಟುಗಳಾಗುತ್ತಿರುವುದರ ಹೊಣೆಯನ್ನು ತಾವೇ ಹೊರಬೇಕೆಂದು ಒತ್ತಾಯಿಸುತ್ತೇನೆ.
ಇದನ್ನೂ ಓದಿ: Bangalore horror : 19ರ ಯುವತಿಯನ್ನು ಎಳೆದೊಯ್ದು ಚಲಿಸುವ ಕಾರಿನಲ್ಲೇ ನಾಲ್ಕು ಗಂಟೆ ಕಾಲ ನಿರಂತರ ಅತ್ಯಾಚಾರ
ಇವೆಲ್ಲದರ ನಡುವೆ ಪ್ರಾರಂಭದಿಂದಲೂ ಬೆಂಗಳೂರು ನಗರ ಜಿಲಾಧ್ಯಕ್ಷನಾದ ನಾನು ರಾಜ್ಯದ ಇತರ ಜಿಲ್ಲೆಗಳ ಅಧ್ಯಕ್ಷರ ಸ್ಥಿತಿ, ಸಂದರ್ಭ ಸನ್ನಿವೇಶಗಳೇ ಬೇರೆ, ರಾಜಧಾನಿ ಬೆಂಗಳೂರು ನಗರದ ಸ್ಥಿತಿ-ಸಂದರ್ಭ-ಸನ್ನಿವೇಶಗಳೇ ಬೇರೆ ಎಂದು ಪದೇ ಪದೆ ನೆನಪಿಸುತ್ತಾ, ಜನರು ನ್ಯಾಯಾಲಯಗಳಿಗೆ ಮೊರೆ ಹೋಗಬಹುದಾದ ಸಾಧ್ಯತೆ, ಟೀಕೆ ಟಿಪ್ಪಣಿಗಳು ಬರುವ ಸಾಧ್ಯತೆ, ಪ್ರತಿಭಟನೆಗಳಾಗುವ ಸಾಧ್ಯತೆಗಳನ್ನು ಎಲ್ಲ ಸಭೆಗಳಲ್ಲಿಯೂ ಗಮನಕ್ಕೆ ತಂದರೂ, ಅವುಗಳನ್ನು ನಿರ್ಲಕ್ಷಿಸಿ, ಮುಂದುವರಿದು ತಮ್ಮ ಮೇಲಿನ ಮತ್ತು ನಮ್ಮೆಲ್ಲರ ಮೇಲಿನ ಜನರ ವಿಶ್ವಾಸ ಹಾಳಾಗುವಂತೆ ಮಾಡುವುದರೊಂದಿಗೆ ಪರಿಷತ್ತಿನ ಘನತೆ ಮತ್ತು ಪಾವಿತ್ರ್ಯತೆಗಳನ್ನು ಮಣ್ಣು ಪಾಲು ಮಾಡುತ್ತಿರುವುದನ್ನು ನಿಲ್ಲಿಸಿ.
16 ತಿಂಗಳ ಈವರೆಗಿನ ಚರ್ಚೆಗಳಲ್ಲಿ ನನ್ನ ಜವಾಬ್ದಾರಿಗಳನ್ನು ತಮ್ಮ ಗಮನಕ್ಕೆ ತರುತ್ತಾ, ಪ್ರಶ್ನೆಗಳನ್ನು ಮತ್ತು ಸಲಹೆ ಸೂಚನೆ, ಮನವಿಗಳನ್ನು ಸೂಕ್ತ ರೀತಿಯಲ್ಲಿ, ಸೂಕ್ತ ವೇದಿಕೆಯಲ್ಲಿ ಮಾಡುತ್ತಿದ್ದ ಕಾರಣದಿಂದ ನನ್ನ ಬಗೆಗೆ ತಾವು ತಾತ್ಸಾರ ಮತ್ತು ಸಿನಿಕತನವನ್ನು ಹೊಂದಿ ಎರಡು ಬಾರಿ ಬೆಂಗಳೂರು ನಗರ ಜಿಲ್ಲಾ ಕಸಾಪ ಕಚೇರಿಯನ್ನು ತೆರವುಗೊಳಿಸಲು ಪತ್ರ ನೀಡಿಸಿದ್ದೀರಿ. ಎರಡನೇ ಬಾರಿಯ ಪತ್ರದಲ್ಲಿ ಬೀಗವನ್ನು ತೆರೆಸಿ, ಕಚೇರಿಯನ್ನು ವಶಪಡಿಸಿಕೊಳ್ಳುವುದಾಗಿ ತಿಳಿಸಿದ್ದೀರಿ. ಬೆಂ.ನ.ಜಿ. ಕಸಾಪದ ಕಾರ್ಯಕ್ರಮಗಳಿಗೆ ಸಭಾಂಗಣಗಳನ್ನು ನೀಡುವ ಬಗ್ಗೆ ಅಡಚಣೆಗಳನ್ನು ಉಂಟುಮಾಡಿದ್ದೀರಿ.
ನಮ್ಮ ಪತ್ರಗಳಿಗಿಲ್ಲ ಸ್ವೀಕೃತಿ
ಕಾರ್ಯಕಾರಿ ಸಮಿತಿಯ ಸಭೆಯ ನಡಾವಳಿಗಳಲ್ಲಿ ದಾಖಲಾಗಬೇಕಿದ್ದ ನನ್ನ ಮತ್ತು ಒಡನಾಡಿ ಜಿಲ್ಲಾಧ್ಯಕ್ಷರ ಮಾತುಗಳನ್ನು ಸರಿಯಾಗಿ ದಾಖಲಿಸದೇ, ತಮಗೆ ಸರಿ ಎನಿಸುವ ರೀತಿಯಲ್ಲಿ ದಾಖಲಿಸುತ್ತಿದ್ದೀರಿ. ನನ್ನ ಮಾತುಗಳನ್ನು ಸೇರಿಸದಿರುವುದು ಮತ್ತು ತಿರುಚಿರುವುದನ್ನು ಕುರಿತು ತಿದ್ದುಪಡಿಗೆ ಪತ್ರ ನೀಡಿದರೂ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ನಾವು ನೀಡುವ ಯಾವುದೇ ಪತ್ರಗಳಿಗೆ ಕಚೇರಿಯಲ್ಲಿ ಸ್ವೀಕೃತಿ ನೀಡದಂತೆ ಸೂಚಿಸಿದ್ದೀರೆಂದು ತಿಳಿದು ಬಂದಿದೆ.
ದುಂದು ವೆಚ್ಚ ಮಾಡಿದ್ದೀರಿ
ಕಾಲಕಾಲಕ್ಕೆ ಅನುದಾನವನ್ನು ಬಿಡುಗಡೆ ಮಾಡದೆ, ಅನುದಾನಗಳನ್ನು ಬಿಡುಗಡೆ ಮಾಡುವಲ್ಲಿ ಕಡಿತ ಮಾಡಿ ಕನ್ನಡದ ಕೆಲಸದ ಬದಲು ಕಟ್ಟಡದ ಕೆಲಸ ಮಾಡುತ್ತಿದ್ದೀರಿ. ಅತ್ಯಾಧುನಿಕವಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟುವ ಹೆಸರಿನಲ್ಲಿ ತಂತ್ರಾಂಶ ಅಭಿವೃದ್ಧಿ, ಕಟ್ಟಡಗಳ ನವೀಕರಣ, ವಾಹನ ಖರೀದಿ, ಸಿ.ಸಿ. ಕ್ಯಾಮೆರಾ ಅಳವಡಿಕೆ, ಕಚೇರಿ ನವೀಕರಣ ಮತ್ತಿತ್ಯಾದಿಗಳನ್ನು ಅಗತ್ಯಕ್ಕೂ ಮೀರಿ ಸರ್ಕಾರದಿಂದ ಬರುವ ಅನುದಾನವನ್ನು ದುಂದುವೆಚ್ಚ ಮಾಡಿದ್ದೀರೇ ವಿನಃ ಮೂಲಭೂತವಾಗಿ ಆಗಬೇಕಿದ್ದ ಗ್ರಂಥಾಲಯದ ಉನ್ನತೀಕರಣ, ನಿಘಂಟು ವಿಭಾಗದ ಅಭಿವೃದ್ಧಿ, ವಿವಿಧ ಜಿಲ್ಲೆಗಳಲ್ಲಿರುವ ಕಚೇರಿಗಳ ನವೀಕರಣ ಮತ್ತು ನಿರ್ವಹಣೆ, ಜಿಲ್ಲಾ ಮಟ್ಟದ ವಿಶೇಷ ಕಾರ್ಯಕ್ರಮಗಳಿಗೆ ಉತ್ತೇಜನ ಮೊದಲಾದ ಕನ್ನಡದ ರಚನಾತ್ಮಕ ಕೆಲಸಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರುತ್ತೀರಿ ಏಕೆ?
ಕುವೆಂಪು ಸಭಾಂಗಣವನ್ನು ಸ್ಥಗಿತಗೊಳಿಸಿರುವುದಲ್ಲದೆ, ಮೊದಲ ಮಹಡಿಯಲ್ಲಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ತೆರವುಗೊಳಿಸಿರುವುದೇಕೆ? ಪಂಪ ಮಹಾಕವಿ ರಸ್ತೆಯ ಹೆಸರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ರಸ್ತೆ ಎಂದು ಹೆಸರು ಬದಲಾಯಿಸುವುದಾಗಿ ಹೇಳಿದ್ದೀರಲ್ಲದೆ, ಮಹಾದ್ವಾರದ ಕಮಾನಿನ ಫಲಕದ ಒಳಭಾಗದಲ್ಲಿದ್ದ ಆದಿಕವಿ ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಕನ್ನಡ ಸಾಹಿತ್ಯ ಘೋಷವಾಕ್ಯವನ್ನು ತೆಗೆದಿರುವುದರ ಹಿಂದಿನ ಉದ್ದೇಶವೇನು?
ಇದನ್ನೂ ಓದಿ: Karnataka Election 2023: ಮುಗಿಯದ ಹಾಸನ ಜೆಡಿಎಸ್ ಅಭ್ಯರ್ಥಿ ಗೊಂದಲ; ಹೊಸ ಹೆಸರು ಹರಿಬಿಟ್ಟ ರೇವಣ್ಣ!
ನನ್ನ ಹಿಂದಿನ ಪ್ರಶ್ನೆಗಳಿಗೂ ಉತ್ತರಿಸಿ
ಕೆಲವು ಸಾಮಾಜಿಕ ಕಾರ್ಯಕರ್ತರು ಕಾನೂನು ಬದ್ಧವಾಗಿ ಕೇಳಿರುವ ಯಾವುದೇ ಮಾಹಿತಿಗಳನ್ನು ನೀಡದಿರುವುದರಿಂದ ಮಾಹಿತಿ ಹಕ್ಕು ಆಯೋಗದ ಮೊರೆ ಹೋಗಿರುವುದಾಗಿ ಪತ್ರದ ಮೂಲಕ ತಿಳಿಸಿದ್ದಾರೆ. ಇವೆಲ್ಲದರಿಂದ ಕಸಾಪದಲ್ಲಿ ಪಾರದರ್ಶಕತೆ ಇಲ್ಲವೆಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಂತಾಗಿದೆ. ಈ ಹಿಂದಿನ (ದಿನಾಂಕ: 23.03.2023ರ) ಪತ್ರದಲ್ಲಿ 26.03.2023ರ ಕಾರ್ಯಕಾರಿ ಸಮಿತಿಯಲ್ಲಿ ಪ್ರಶ್ನಿಸಬೇಕೆಂದಿದ್ದ ಪ್ರಶ್ನೆಗಳಿಗೆ ಕಾರ್ಯಕಾರಿ ಸಮಿತಿಯಲ್ಲಿ ತಾವು ಉತ್ತರಿಸದಿರುವ ಹಿನ್ನೆಲೆಯಲ್ಲಿ ಈಗ ಕೇಳುತ್ತಿರುವ ಪ್ರಶ್ನೆಗಳ ಜತೆಗೆ ಹಿಂದಿನ ಪ್ರಶ್ನೆಗಳಿಗೂ ಉತ್ತರಗಳನ್ನು ಬಯಸುತ್ತೇನೆ.
ನೀವೇ ಕರೆದಿದ್ದ ಸಮಾಲೋಚನಾ ಸಭೆಗಳಲ್ಲಿ ನಿಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳಲು ಕೆಲವು ಹಿರಿಯರು ನೀಡಿರುವ ಸಲಹೆ ಸೂಚನೆಗಳನ್ನು ಬಹಿರಂಗಪಡಿಸದಿರುವುದು, ನಿಮ್ಮ ಅಸಂಬದ್ಧ ತೀರ್ಮಾನ-ನಡೆ-ನುಡಿಗಳ ಬಗೆಗೆ ನಮಗೆ ಬರುವ ಪತ್ರಗಳು, ನಿಮಗೆ ಕಳುಹಿಸುವ ನೋಟಿಸ್‍ಗಳು, ಹೂಡಿರುವ ದಾವೆಗಳು ಇವಾವುಗಳನ್ನು ಕಾರ್ಯಕಾರಿ ಸಮಿತಿ ಸಭೆಗಳಲ್ಲಿ ಪ್ರಸ್ತಾಪಿಸದೆ, ಸಮಸ್ಯೆಗಳ ಪರಿಹಾರಕ್ಕೆ ಮಾರ್ಗೋಪಾಯಗಳನ್ನು ಕಾರ್ಯಕಾರಿ ಸಮಿತಿಯ ಮುಂದೆ ಚರ್ಚಿಸದಿರುವುದು ಎಷ್ಟು ಸರಿ?
ದೂರವಾಣಿ ಕರೆ ಸ್ವೀಕರಿಸಿ
ತಾವು ತಮ್ಮ ಮನೋಭೂಮಿಕೆಗೆ ಅನುಕೂಲವಾಗುವಂತೆ ಹೊರಡಿಸುವ ಸುತ್ತೋಲೆಗಳೊಂದಿಗೆ ಸಂವೇದನೆಯನ್ನೂ, ನಿಯಮಗಳೊಂದಿಗೆ ನೈತಿಕತೆಯನ್ನೂ ಅಳವಡಿಸಿಕೊಳ್ಳಬೇಕಾಗಿರುವ ಅಗತ್ಯತೆಯನ್ನು ಮನಗಾಣಬೇಕೆಂದು ಕೋರುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ “ನಾನು ಅಣ್ಣನಿದ್ದಂತೆ, ತಂದೆಯಿದ್ದಂತೆ” ಎಂದು ಉವಾಚಿಸುವ ತಾವು ಚುನಾಯಿತ ಪ್ರತಿನಿಧಿಗಳಾದ ನಾವು ಕರೆ ಮಾಡಿದಾಗ ಕರೆ ಸ್ವೀಕರಿಸುವುದು, ಸಂದೇಶಗಳಿಗೆ ಪ್ರತಿಕ್ರಿಯೆ ನೀಡುವುದು, ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಲು ಬಂದಾಗ ಸೌಜನ್ಯದಿಂದ ನಡೆಸಿಕೊಳ್ಳುವುದು ತಮ್ಮ ಕರ್ತವ್ಯವೆಂದು ಭಾವಿಸಬೇಕೆಂದು ಒತ್ತಾಯಿಸುತ್ತೇನೆ.
ಸಿಬ್ಬಂದಿ, ಸಾರಿಗೆ, ಸವಲತ್ತು, ಭತ್ಯೆಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ತಾವು “ನಾನು ಆಡಳಿತ ನಡೆಸಲು ಬಂದಿರುವುದು, ನೀವು ತಳಮಟ್ಟದಲ್ಲಿ ಕನ್ನಡದ ಕೆಲಸ ಮಾಡಲು ಬಂದಿರುವುದು” ಎಂದು ಹಿಂದೊಮ್ಮೆ ಹೇಳಿದ್ದಿರಿ. ನಿಮ್ಮಂತೆಯೇ ಚುನಾಯಿತರಾಗಿರುವ ನಾವುಗಳೂ ನಿಮ್ಮ ಹಾಗೆಯೇ ಹೇಳಿದರೆ ಕನ್ನಡದ ಕೆಲಸ ಸಾಗುವುದಾದರೂ ಹೇಗೆ? ಈ ಸಂದರ್ಭದಲ್ಲಿ ನಮಗೆ-ನಿಮಗೆಲ್ಲ ಈ ಹಿಂದೆ ಅಧ್ಯಕ್ಷರಾಗಿದ್ದ ಎಂ.ಆರ್. ಶ್ರೀನಿವಾಸಮೂರ್ತಿ ಅಂತಹವರು ಆದರ್ಶವಾಗಬೇಕು. ಕಸಾಪದ ಕಾರ್ಯಕ್ರಮದ ಸಿದ್ಧತೆಗಾಗಿ ಕಸ ಗುಡಿಸುತ್ತಿದ್ದ ಕಸಾಪ ಅಧ್ಯಕ್ಷರನ್ನು ಕಂಡು ತಡವಾಗಿ ಓಡಿಬಂದ ಸಿಬ್ಬಂದಿ “ಗುಡಿಸುತ್ತೇನೆ ಬಿಡಿ ಸ್ವಾಮಿ” ಎಂದಾಗ, ಎಂ.ಆರ್.ಶ್ರೀ ಅವರು ಹೇಳಿದ ಮಾತು: “ನಾನು ದೊಡ್ಡ ಕೂಲಿ, ನೀನು ಸಣ್ಣ ಕೂಲಿ, ಜನ ನನ್ನನ್ನು ಪ್ರಶ್ನಿಸುತ್ತಾರೆಯೇ ವಿನಃ ನಿನ್ನನ್ನಲ್ಲ!” ಎಂದು ಹೇಳುವ ಮೂಲಕ ತಮ್ಮ ಕಾಯಕದ ಕರ್ತೃತ್ವವನ್ನು ಮೆರೆದಿದ್ದರು. ಸಾಹಿತ್ಯ ಪರಿಷತ್ತಿನಂತಹ ಸಂಸ್ಥೆಗೆ ಎಂ.ಆರ್.ಶ್ರೀ ಅಂತಹ ಹಿರಿಯರು ಆದರ್ಶವಾಗಬೇಕೇ ವಿನಃ, ಅಧಿಕಾರಸ್ಥ ನೆಲೆಯಲ್ಲಿ ಆಲೋಚಿಸುವ ಮನಸ್ಥಿತಿಯಲ್ಲ.
ಇದನ್ನೂ ಓದಿ: Aadhaar Update: ಆನ್‌ಲೈನ್‌ನಲ್ಲಿ ಆಧಾರ್ ಅಪ್‌ಡೇಟ್ ಉಚಿತ; ಈ ಸೌಲಭ್ಯ ಜೂನ್ 14ರವರೆಗೆ ಮಾತ್ರ
ಕನ್ನಡ ಸಾಹಿತ್ಯ ಪರಿಷತ್ತಿನ ಮೇಲಿನ ಗೌರವದಿಂದ ಈವರೆಗೆ ಈ ಮೇಲಿನ ಎಲ್ಲವನ್ನೂ ಸಹಿಸಿಕೊಳ್ಳುತ್ತಲೇ ಬರುತ್ತಾ, ಆಂತರ್ಯದಲ್ಲಿಯೇ ನಿಮ್ಮ ಏಕಪಕ್ಷಿಯ ಹಾಗೂ ಅಧಿಕಾರ ಕೇಂದ್ರಿತ ಧೋರಣೆಗಳನ್ನು ತಿದ್ದುಕೊಳ್ಳಲು ತೀವ್ರ ಹಾಗೂ ವಿನಮ್ರ ಮನವಿ ಮಾಡುತ್ತಾ ಬಂದಿದ್ದಾಗ್ಯೂ, 21.11.2021ರಿಂದ ಈವರೆಗಿನ ಸಭೆಗಳಲ್ಲಿ ನಡೆದಿರುವ ವಿದ್ಯಮಾನಗಳಿಂದ, ಸಾರ್ವಜನಿಕ ವಲಯಗಳಲ್ಲಿ ಉಂಟಾಗಿರುವ ಟೀಕೆ-ಟಿಪ್ಪಣಿಗಳಿಂದ ಬೇಸತ್ತು ನನ್ನ ಜವಾಬ್ದಾರಿಯ ಭಾಗವಾಗಿ ಈ ಹಿಂದಿನ ಪತ್ರದಲ್ಲಿ ತಿಳಿಸಿರುವಂತೆ, ಈ ಎಲ್ಲ ಪ್ರಶ್ನೆಗಳನ್ನು ತಮಗೆ ಬಹಿರಂಗವಾಗಿ ಕೇಳಲೇಬೇಕಾದ ಅನಿವಾರ್ಯತೆಯಿಂದ ಪ್ರಶ್ನಿಸುತ್ತಿದ್ದೇನೆಯೇ ಹೊರತು ಬೇರಾವುದೇ ಉದ್ದೇಶದಿಂದಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾ, ಸದ್ಯಕ್ಕೆ ಈ ಪತ್ರವನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ ಎಂದು ಪ್ರಕಾಶ್‌ಮೂರ್ತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.