Site icon Vistara News

Doctor death | ಡಾ. ರೂಪಾ ಸಾವಿಗೆ ಟ್ವಿಸ್ಟ್‌: ಕಾಲು ಜಾರಿ ಬಿದ್ದದ್ದಲ್ಲ, ತಲೆಯಲ್ಲಿದೆ ಗುಂಡಿನ ಗಾಯ: ಪೋಸ್ಟ್‌ ಮಾರ್ಟಂ ವರದಿ

Doctor Roopa

ಚಿತ್ರದುರ್ಗ: ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ರೂಪಾ (Doctor death) ಅವರು ಸೋಮವಾರ ಬೆಳಗ್ಗೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಆರಂಭದಲ್ಲಿ ಅವರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ಸಂಶಯಿಸಲಾಗಿತ್ತು. ಆದರೆ, ಇದು ತಲೆಗೆ ಗುಂಡು ಬಿದ್ದು ಸಂಭವಿಸಿದ ಸಾವು ಎನ್ನುವುದು ಈಗ ಬಯಲಾಗಿದೆ.

ಡಾ. ರೂಪಾ ಅವರ ತಲೆಗೆ ಗುಂಡು ಬಿದ್ದಿರುವುದು ಪೋಸ್ಟ್‌ ಮಾರ್ಟಂ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಚಿತ್ರದುರ್ಗದ ವಿ.ಪಿ ಎಕ್ಸ್‌ಟೆನ್ಷನ್ ಬಡಾವಣೆಯ‌ ಮನೆಯಲ್ಲಿ ಘಟನೆ ನಡೆದಿದ್ದು, ಡಾ.ರೂಪಾ ಪತಿ ಡಾ. ರವೀಂದ್ರ ಅವರು ಪೊಲೀಸರಿಗೆ ನೀಡಿದ ಪ್ರಾಥಮಿಕ ಮಾಹಿತಿಯಲ್ಲಿ ಅವರು ಕಾಲು ಜಾರಿ ಬಿದ್ದು ತಲೆಗೆ ಗಾಯವಾಗಿ ಮೃತಪಟ್ಟಿರಬಹುದು ಎಂದು ಸಂಶಯಿಸಲಾಗಿತ್ತು. ಆದರೆ, ಈಗ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ರೂಪಾ ಅವರು ತಲೆಗೆ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದು ಪೋಸ್ಟ್‌ ಮಾರ್ಟಂ ವೇಳೆ ತಿಳಿದುಬಂದಿದೆ. ಇದರ ಜತೆಗೆ ಅವರು ಬರೆದಿಟ್ಟಿರುವ ಡೆತ್‌ ನೋಟ್‌ ಕೂಡಾ ಲಭ್ಯವಾಗಿದ್ದು, ಇದರಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಹೇಳಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಕೆ.ಪರಶುರಾಮ್ ಮಾಹಿತಿ ನೀಡಿದ್ದಾರೆ. ಚಿತ್ರದುರ್ಗ ನಗರ ಠಾಣೆ ಪೊಲೀಸರಿಂದ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ತನಿಖೆಗೆ ಸಂಪೂರ್ಣ ಸಹಕಾರ ಎಂದ ಡಾ. ರವಿ
ವಿಧಿ ವಿಜ್ಞಾನ ಇಲಾಖೆಯ ವಿಶೇಷ ತಂಡವನ್ನು ಬೆಂಗಳೂರಿನಿಂದ ಕರೆಸಲಾಗಿದ್ದು, ಅವರ ವರದಿ ಬಳಿಕ ಸಾವಿನ ನಿಜವಾದ ಕಾರಣ ಬಯಲಾಗಲಿದೆ. ಈ ಸಾವು ತನಗೂ ಶಾಕ್‌ ನೀಡಿದ್ದು, ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವುದಾಗಿ ಡಾ. ರೂಪಾ ಅವರ ಪತಿ ಡಾ. ರವಿ ಹೇಳಿದ್ದಾರೆ.

ಕೋಟ್ಯಂತರ ರೂ. ನಷ್ಟವಾಗಿತ್ತಾ?
ಡಾ. ರೂಪಾ ಅವರು ಮನೆಯಲ್ಲಿ ರಿವಾಲ್ವರ್‌ ಇಟ್ಟುಕೊಂಡಿದ್ದು ಯಾಕೆ ಎಂಬ ಪ್ರಶ್ನೆ ಇಲ್ಲಿ ಪ್ರಮುಖವಾಗಿದೆ. ಈ ನಡುವೆ, ಅವರು ತುಂಬಾ ಸಾಲ ಹೊಂದಿದ್ದರು ಎಂಬ ಮಾಹಿತಿಯೂ ಇದೆ. ಅವರು 25 ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆ‌ ಬೆಳೆದು ಕೋಟ್ಯಾಂತರ ರೂಪಾಯಿ ಸಾಲ‌ ಮಾಡಿ ಕೈ ಸುಟ್ಟುಕೊಂಡಿದ್ದರೆನ್ನಲಾಗಿದೆ. ಇತ್ತೀಚೆಗೆ ಒಂದು ಹೋಟೆಲ್‌ ಖರೀದಿ ನಷ್ಟ ಅನುಭವಿಸಿದ್ದರು ಎಂಬ ಮಾಹಿತಿ ಇದೆ.

ಪತಿ-ಪತ್ನಿ ಸಾರ್ವಜನಿಕವಾಗಿ ಚೆನ್ನಾಗಿದ್ದರು. ಉಳಿದಂತೆ ಜೀವನ ಇಷ್ಟೊಂದು ಕಷ್ಟಕರವಾಗಿದೆ ಎಂದು ಹೊರಜಗತ್ತಿಗೆ ತಿಳಿಯುತ್ತಿರಲಿಲ್ಲ ಎನ್ನಲಾಗಿದೆ.

ಇದನ್ನೂ ಓದಿ | Doctor death | ಚಿತ್ರದುರ್ಗ ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ. ರೂಪಾ ಅಸಹಜ ಸಾವು, ಕಾಲು ಜಾರಿ ಬಿದ್ದರೇ?

Exit mobile version