ಮಂಡ್ಯ: ಪಠ್ಯಪುಸ್ತಕ ಪರಿಷ್ಕರಣೆ ಸಮರ್ಥನೆ ಮಾಡಿದರೆ ಹುಡುಗರನ್ನು ಕರೆಯಿಸಿ ಹಲ್ಲೆ ಮಾಡಿಸುವ ಹಾಗೂ ಕೊಲೆ ಮಾಡಿಸುವುದಾಗಿ ಸತೀಶ್‌ಗೌಡ ಎಂಬ ವ್ಯಕ್ತಿ ಬೆದರಿಕೆ ಹಾಕಿದ್ದಾನೆ ಎಂದು ಸಂವಿಧಾನ ತಜ್ಞ, ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಅಧ್ಯಕ್ಷ ಡಾ. ಸುಧಾಕರ್ ಹೊಸಹಳ್ಳಿ ಹೇಳಿದ್ದಾರೆ.
ಪಠ್ಯಪುಸ್ತಕ ವಿವಾದದ ಕುರಿತು ಚರ್ಚೆ ಮಾಡದಂತೆ, ಸಮರ್ಥನೆ ನಿಲ್ಲಿಸುವಂತೆ ಒತ್ತಡ ಹೇರಲಾಗಿದೆ. ಸಂವಿಧಾನ ತಿಳಿದುಕೊಂಡ ನನಗೆ ಕೊಲೆ ಬೆದರಿಕೆ ಬರುತ್ತಿದೆ ಎಂದರೆ ಇನ್ನು ಸಾಮಾನ್ಯ ಜನರ ಪರಿಸ್ಥಿತಿ ಹೇಗೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕುವೆಂಪು ಪಠ್ಯ ಕೈಬಿಟ್ಟ ಬರಗೂರು ವಿರುದ್ಧ ಹೋರಾಟ ನಡೆಯಬೇಕಿತ್ತು, ಆದರೆ ಕುವೆಂಪು ಪಠ್ಯ ಹೆಚ್ಚಿಸಿ ಗೌರವಿಸಿದ ರೋಹಿತ್ ಚಕ್ರತೀರ್ಥ ವಿರುದ್ಧ ಹೋರಾಟ ಮಾಡಲಾಗುತ್ತಿದೆ. ಇದು ಒಂದು ಜನಾಂಗವನ್ನು ಎತ್ತಿಕಟ್ಟುವ ಪ್ರಯತ್ನವಾಗಿದೆ. ನನಗೆ ಕೊಲೆ ಬೆದರಿಕೆ ಬಂದ ಕುರಿತು ಪೊಲೀಸರಿಗೆ ದೂರು ನೀಡಲಿದ್ದೇನೆ ಹಾಗೂ ಕಾನೂನು ಹೋರಾಟ ನಡೆಸಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ.
ಕೆಲವರು ವಿವಾದದ ಕುರಿತು ಚರ್ಚೆಗೆ ಆಹ್ವಾನಿಸಿದರೆ ಬರುವುದಿಲ್ಲ, ಆದರೆ ಹುಡಗರನ್ನ ಕಟ್ಟಿಕೊಂಡು ಬಂದು ಹೊಡೆಸುವ ಬೆದರಿಕೆ ಹಾಕುತ್ತಾರೆ, ಇವರ ಗೊಡ್ಡು ಬೆದರಿಕೆಗೆ ನಾನು ಬಗ್ಗುವುದಿಲ್ಲ, ಕಾನೂನು ಹೋರಾಟದ ಮೂಲಕ ತಕ್ಕ ಉತ್ತರ ನೀಡಲಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ | Textbook controversy: ಪಠ್ಯ ಪುಸ್ತಕ ಪರಿಷ್ಕರಣೆ ಸ್ಥಗಿತಗೊಳಿಸಲು ನಿರಂಜನಾರಾಧ್ಯ ಒತ್ತಾಯ