ಯಲಹಂಕ: ನಾಟಕದಲ್ಲಿ ಅಭಿನಯಿಸುತ್ತಿರುವಾಗಲೇ ವೇದಿಕೆಯಲ್ಲೇ ಕುಸಿದು ಬಿದ್ದು ಕಲಾವಿದರೊಬ್ಬರು ಮೃತಪಟ್ಟಿದ್ದಾರೆ. ಎನ್.ಮುನಿಕೆಂಪಣ್ಣ (72) ಅವರು ಯಲಹಂಕದ ಸಾತನೂರು ಗ್ರಾಮದಲ್ಲಿ ʼಕುರುಕ್ಷೇತ್ರʼ ನಾಟಕ ಪ್ರದರ್ಶಿಸುತ್ತಿದ್ದ ವೇಳೆ ನಿಧನ ಹೊಂದಿದ್ದಾರೆ.
ʼಕುರುಕ್ಷೇತ್ರʼ ನಾಟಕದಲ್ಲಿ ಮುನಿಕೆಂಪಣ್ಣ ಅವರು ಶಕುನಿ ಪಾತ್ರ ನಿರ್ವಹಿಸುತ್ತಿದ್ದರು. ಮಧ್ಯರಾತ್ರಿಯವರೆಗೂ ಅದ್ಬುತ ಪ್ರದರ್ಶನ ನೀಡಿದ ಅವರು ಒಂದು ಗಂಟೆಯ ವೇಳೆಗೆ ಇದ್ದಕ್ಕಿದ್ದಂತೆ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದಾರೆ. ಸದ್ಯ ಅವರು ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಹಿಂದೆ ಉಪನ್ಯಾಸಕರಾಗಿದ್ದ ಮುನಿಕೆಂಪಣ್ಣ ಅವರು ನಾಟಕದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಆಗಾಗ ವೇಷ ಹಚ್ಚುತ್ತಿರುತ್ತಾರೆ. ದೇವನಹಳ್ಳಿಯಲ್ಲಿ ನಡೆದ 28ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಹೃದಯಾಘಾತದಿಂದ ಮೃತಪಟ್ಟ ಮುನಿಕೆಂಪಣ್ಣ ಅವರ ಅಂತ್ಯ ಸಂಸ್ಕಾರ ಅವರ ಹುಟ್ಟೂರು ಅರದೇಶನಹಳ್ಳಿಯಲ್ಲಿ ನಡೆಯಲಿದೆ. ಇದಕ್ಕಾಗಿ ಸಿದ್ಧತೆ ಕೈಗೊಳ್ಳಲಾಗಿದೆ.
ವೇಷ ಕಳಚುತ್ತಿರುವಾಗಲೇ ಹೃದಯ ಸ್ತಬ್ಧ; ಯಕ್ಷಗಾನ ಕಲಾವಿದ ಇನ್ನಿಲ್ಲ
ಮಂಗಳೂರು: ವೇಷ ಕಳಚುತ್ತಿರುವಾಗಲೇ ಹೃದಯಾಘಾತದಿಂದ ಧರ್ಮಸ್ಥಳ ಯಕ್ಷಗಾನ ಮೇಳದ ಸವ್ಯಸಾಚಿ ಕಲಾವಿದ ಗಂಗಾಧರ ಪುತ್ತೂರು(60) ಅವರು ಇಹಲೋಕ ತ್ಯಜಿಸಿದ್ದಾರೆ. ಮೇ 1ರಂದು ರಾತ್ರಿ ಕೋಟ ಗಾಂಧಿಮೈದಾನದ ಬಳಿ ಶ್ರೀ ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಯಕ್ಷಗಾನದಲ್ಲಿ ಅವರು ಕುಕ್ಕಿಂತ್ತಾಯ ದೈವದ ವೇಷವನ್ನು ನಿರ್ವಹಿಸಿದ್ದರು. ಬಳಿಕ ಚೌಕಿಗೆ ಆಗಮಿಸಿ ಕಿರೀಟ, ಯಕ್ಷಗಾನದ ಆಭರಣ ತೆಗೆದಿಟ್ಟು, ಮುಖದ ಬಣ್ಣವನ್ನು ಅಳಿಸುತ್ತಿರುವಾಗ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಪುತ್ತೂರಿನ ಸೇಡಿಯಾಪು ನಿವಾಸಿಯಾಗಿರುವ ಇವರು ಏಳನೇ ತರಗತಿಯವರೆಗೆ ವಿದ್ಯಾಭ್ಯಾಸ ಹೊಂದಿದ್ದರು. ತಮ್ಮ 18ನೇ ವಯಸ್ಸಿಗೆ ಯಕ್ಷಗಾನ ತಿರುಗಾಟ ಆರಂಭಿಸಿದ ಗಂಗಾಧರ ಪುತ್ತೂರು ಸುದೀರ್ಘ 40 ವರ್ಷಗಳಷ್ಟು ಕಾಲ ಯಕ್ಷಗಾನ ರಂಗದಲ್ಲಿ ವ್ಯವಸಾಯ ಮಾಡಿದ್ದರು. ಕರ್ಗಲ್ಲು ವಿಶ್ವೇಶ್ವರ ಭಟ್ ಹಾಗೂ ಕೆ.ಗೋವಿಂದ ಭಟ್ ಅವರಿಂದ ನಾಟ್ಯಾಭ್ಯಾಸ ಮಾಡಿದರು.
ಯಕ್ಷಗಾನ ರಂಗದ ಸವ್ಯಸಾಚಿ ಕಲಾವಿದರಾದ ಇವರು ಸ್ತ್ರೀವೇಷದಿಂದ ಹಿಡಿದು ಪುಂಡುವೇಷ, ರಾಜವೇಷ, ಹೆಣ್ಣುಬಣ್ಣ ಸಮರ್ಥವಾಗಿ ನಿರ್ವಹಿಸುತ್ತಿದ್ದರು. 30 ವರ್ಷಗಳಿಗಿಂತಲೂ ಅಧಿಕ ಕಾಲದಿಂದ ಗಂಗಾಧರ ಪುತ್ತೂರು ಧರ್ಮಸ್ಥಳ ಮೇಳದಲ್ಲಿಯೇ ಕಲಾವಿದರಾಗಿ ತಿರುಗಾಟ ಮಾಡಿದ್ದರು.
ಇದನ್ನೂ ಓದಿ: Srinivas Prasad: ತೀವ್ರ ಹೃದಯಾಘಾತದಿಂದ ಹಿರಿಯ ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ