ಬೆಂಗಳೂರು: “ಮಾಲ್ ಸೇರಿದಂತೆ ಯಾವುದೇ ಸ್ಥಳಗಳಿಗೆ ಭೇಟಿ ನೀಡುವವರ ನಿರ್ದಿಷ್ಟ ವಸ್ತ್ರಗಳಿಗೆ ನಿರ್ಬಂಧ ಹೇರದಂತೆ ಮಾರ್ಗಸೂಚಿಯನ್ನು ಹೊರಡಿಸಲಾಗುವುದು. ಪಂಚೆ ನಮ್ಮ ಸಂಸ್ಕೃತಿ. ಇದಕ್ಕೆ ಪೂರಕವಾಗಿ ನಿಯಮ ತರಲಾಗುವುದು. ಇಡೀ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಈ ರೀತಿಯ ಘಟನೆಗಳು ನಡೆಯದಂತೆ ನಿಯಮಾವಳಿ ರೂಪಿಸಲಾಗುವುದು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು.
ವಿಧಾನಸಭೆಯಲ್ಲಿ ಸೋಮವಾರ ಮಾತನಾಡಿದ ಅವರು, “ಮಾಲ್‌ಗೆ ಪಂಚೆ ಧರಿಸಿ ಬಂದ ರೈತನನ್ನು ತಡೆದ ವಿಚಾರವಾಗಿ ಶುಕ್ರವಾರ (ಜುಲೈ 19) ವಿಧಾನಸಭೆಯಲ್ಲಿ ಪ್ರಸ್ತಾವನೆ ಮೇಲೆ ಚರ್ಚೆ ನಡೆಸಲಾಗಿತ್ತು. ಈ ವಿಚಾರವಾಗಿ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರು ಹೇಳಿಕೆ ನೀಡಿದ್ದರು. ನಾನು ಶುಕ್ರವಾರ ಗೈರಾಗಿದ್ದ ಕಾರಣ ಈಗ ನನ್ನ ಹೇಳಿಕೆ ನೀಡುತ್ತಿದ್ದೇನೆ” ಎಂದು ಹೇಳಿದರು.
“ಜಿ.ಟಿ ಮಾಲ್‌ಗೆ ಪಂಚೆ ಉಟ್ಟುಕೊಂಡು ಬಂದ ರೈತನಿಗೆ ಪ್ರವೇಶ ನೀಡದೆ ಇದ್ದ ಕಾರಣ ಮಾಲ್ ಮಾಲೀಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಯಿತು ಹಾಗೂ ತೆರಿಗೆ ಬಾಕಿ ಇದ್ದ ಕಾರಣ ಬೀಗ ಹಾಕಲಾಯಿತು. ಅವರು ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ. ಈಗ ಚೆಕ್ ಮುಖಾಂತರ ಬಾಕಿ ತೆರಿಗೆ ಪಾವತಿ ಮಾಡಿದ್ದಾರೆ” ಎಂದರು.
ಇದನ್ನೂ ಓದಿ | Suraj Revanna Case: ಸೂರಜ್ ರೇವಣ್ಣಗೆ ಬಿಗ್ ರಿಲೀಫ್; 2ನೇ ಕೇಸ್‌ನಲ್ಲೂ ಜಾಮೀನು, ನಾಳೆ ರಿಲೀಸ್!
“ಕೆಲವು ಕ್ಲಬ್ ಗಳಲ್ಲಿ ಪಂಚೆ ಹಾಕಿದ್ದರೆ, ಶೂ ಹಾಕದೆ ಇದ್ದರೆ ಒಳಗೆ ಬಿಡುವುದಿಲ್ಲ. ಇದರ ಬಗ್ಗೆಯೂ ಗಮನ ಹರಿಸಿ” ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು ಮನವಿ ಮಾಡಿದರು.
ತಮಿಳುನಾಡಿಗೆ 30 ಟಿಎಂಸಿ ನೀರು ಹರಿಸಲಾಗಿದೆ: ಡಿಸಿಎಂ ಡಿ.ಕೆ.ಶಿವಕುಮಾರ್
ಮಂಡ್ಯ/ಬೆಂಗಳೂರು: “ಬಿಳಿಗುಂಡ್ಲುವಿನಲ್ಲಿ ದಾಖಲಾದಂತೆ ಇದುವರೆಗು ತಮಿಳುನಾಡಿಗೆ 30 ಟಿಎಂಸಿ ನೀರನ್ನು ಹರಿಸಲಾಗಿದೆ. 10 ಟಿಎಂಸಿ ನೀರನ್ನು ಹರಿಸಿದರೆ ಸಾಮಾನ್ಯ ವರ್ಷದಲ್ಲಿ 40 ಟಿಎಂಸಿ ನೀರು ಹರಿಸಿದಂತಾಗುತ್ತದೆ. ನಿತ್ಯ 51 ಸಾವಿರ ಕ್ಯೂಸೆಕ್ಸ್ ನೀರನ್ನು ಕಾವೇರಿ ಜಲಾನಯನ ಪ್ರದೇಶದಿಂದ ಹರಿಸಲಾಗುತ್ತಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಕೆಆರ್‌ಎಸ್ ಅಣೆಕಟ್ಟು ವೀಕ್ಷಣೆ ನಂತರ ಅಣೆಕಟ್ಟೆ ಬಳಿ ಮತ್ತು ವಿಧಾನಸೌಧದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಸೋಮವಾರ ಮಾತನಾಡಿದ ಡಿಸಿಎಂ ಅವರು, “ಕಾವೇರಿ ಜಲಾನಯನ ಪ್ರದೇಶಗಳಲ್ಲಿ 1,657 ಕೆರೆಗಳಿವೆ. ಮುಂಜಾಗ್ರತ ಕ್ರಮವಾಗಿ ಎಲ್ಲಾ ಕೆರೆಗಳನ್ನು ತುಂಬಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೃಷಿ ಸಚಿವರ ನೇತೃತ್ವದಲ್ಲಿ 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. 5.90 ಲಕ್ಷ ಕ್ವಿಂಟಾಲ್ ಬಿತ್ತನೆ ಬೀಜ, 27 ಲಕ್ಷ ಟನ್ ರಸಗೊಬ್ಬರ ಸಂಗ್ರಹ, 30 ಲಕ್ಷ ರೈತರಿಗೆ ಸಹಕಾರಿ ಸಂಘಗಳಿಂದ ತಲಾ 25 ಸಾವಿರ ಕೋಟಿ ರೂ. ಸಾಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.
“ನಮ್ಮ ಸರ್ಕಾರ ರೈತರ ಬದುಕಿಗೆ ಪೂರಕವಾಗಿದೆ. ರೈತರ ಹಿತ ಕಾಯಲು ಬದ್ದತೆ ಹೊಂದಿದ್ದೇವೆ. ನಮ್ಮದು ಬೂಟಾಟಿಕೆಯ ಮಾತಲ್ಲ. ಪ್ರಚಾರಕ್ಕೆ ಮಾಡುವುದಲ್ಲ, ನಮ್ಮ ವಿಚಾರ, ಆಚಾರ ಎಲ್ಲವೂ ರೈತರ ಪರ. ಕಾವೇರಿ ನೀರು ನಿರ್ವಹಣಾ ಸಮಿತಿಯು ಜುಲೈ 11 ರಿಂದ 30 ರ ತನಕ 20 ಟಿಎಂಸಿ ನೀರನ್ನು ಹರಿಸಬೇಕು ಎಂದು ಆದೇಶ ನೀಡಿತ್ತು. ಆದರೆ ನಾವು ನೀರನ್ನು ಹರಿಸಲಿಲ್ಲ. ನಮ್ಮ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡು ಸರ್ವಪಕ್ಷ ಸಭೆ ಕರೆದು ಚರ್ಚೆ ನಡೆಸಿತ್ತು” ಎಂದರು.
ಕಾವೇರಿ ಆರತಿ ಆರಂಭಿಸಲು ಚಿಂತನೆ
“ವಾರಾಣಸಿಯಲ್ಲಿ ಗಂಗಾ ಆರತಿ ನಡೆಸಿದಂತೆ, ಕಾವೇರಿ ಆರತಿ ಕಾರ್ಯಕ್ರಮ ಪ್ರಾರಂಭಿಸುವ ಆಲೋಚನೆ ಇದೆ. ಕೊಡಗು, ಮೈಸೂರು ಹಾಗೂ ಕಾವೇರಿ ಪ್ರದೇಶದ ಶಾಸಕರು ಹಾಗು ಅಧಿಕಾರಿಗಳು ಸೇರಿದ 20 ಜನರ ಸಮಿತಿಯನ್ನು ರಚನೆ ಮಾಡಿ, ವಾರಣಾಸಿಯಲ್ಲಿ ನಡೆಯುವ ಗಂಗಾ ಆರತಿ ಹೇಗೆ ನಡೆಯುತ್ತದೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗುವುದು. ಅಲ್ಲಿಂದ ಒಂದು ತಂಡವನ್ನು ಕರೆದುಕೊಂಡು ಬಂದು ಯಾವ ಜಾಗದಲ್ಲಿ ಕಾವೇರಿ ಆರತಿ ನಡೆಸಬಹುದು ಎಂದು ಜಾಗ ಗುರುತಿಸಲಾಗುವುದು. ಒಂದು ತಿಂಗಳ ಒಳಗಾಗಿ ಈ ಕಾರ್ಯಕ್ರಮ ಮಾಡಲಾಗುವುದು. ಧಾರ್ಮಿಕ ದತ್ತಿ ಇಲಾಖೆ, ಕಾವೇರಿ ನೀರಾವರಿ ನಿಗಮ ಹಾಗೂ ಇತರೇ ಇಲಾಖೆಗಳು ಜಂಟಿಯಾಗಿ ಈ ಕಾರ್ಯಕ್ರಮ ರೂಪಿಸುತ್ತವೆ” ಎಂದು ಹೇಳಿದರು.
ಪಿಪಿಪಿ ಮಾದರಿಯಲ್ಲಿ ಬೃಂದಾವನಕ್ಕೆ ಹೊಸ ರೂಪ
“ಕಾವೇರಿ ಬೃಂದಾವನ ಅಮ್ಯೂಸ್ ಮೆಂಟ್ ಉದ್ಯಾನಕ್ಕೆ ಹೊಸ ರೂಪ ನೀಡಲಾಗುವುದು. ಪಿಪಿಪಿ ಮಾದರಿಯಲ್ಲಿ ಇದರ ಅಭಿವೃದ್ದಿ ಮಾಡಲಾಗುವುದು. ಈ ವಿಚಾರ ಇನ್ನೆರಡು ದಿನಗಳಲ್ಲಿ ಕ್ಯಾಬಿನೆಟ್ ಮುಂದೆ ಚರ್ಚೆಗೆ ಬರುತ್ತದೆ. ಈ ಯೋಜನೆಯಿಂದ ಈ ಭಾಗದ 8-10 ಸಾವಿರ ಜನರಿಗೆ ಉದ್ಯೋಗ ಲಭಿಸಲಿದೆ. ಕಳೆದ ಬಜೆಟ್ ನಲ್ಲಿ ಯೋಜನೆ ರೂಪಿಸಲಾಗಿತ್ತು. ಕಾರ್ಯರೂಪಕ್ಕೆ ಬಂದಿರಲಿಲ್ಲ. ಸುಮಾರು 10 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ದಿನಕ್ಕೆ ಬರುವ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಬೇಕು. ಪ್ರವಾಸಕ್ಕೆ ಬಂದವರು ಒಂದೆರಡು ದಿನ ಇಲ್ಲಿ ಉಳಿದುಕೊಂಡು ಹೋಗುವಂತಹ ವ್ಯವಸ್ಥೆ ಮಾಡಬೇಕು. ಬೆಂಗಳೂರಿನಿಂದ ಒಂದೂವರೆ ತಾಸಿನಲ್ಲಿ ಬರಬಹುದು. ಇಲ್ಲಿಂದ ಸುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಬಹುದು” ಎಂದು ತಿಳಿಸಿದರು.
ಮೇಕೆದಾಟು ವಿಚಾರವನ್ನು ಮುಂದುವರೆಸುತ್ತೀರಾ ಎಂದು ಕೇಳಿದಾಗ “ಸದ್ಯಕ್ಕೆ ಈ ಬಗ್ಗೆ ಉತ್ತರ ನೀಡುವುದಿಲ್ಲ. ಕಾಲವೇ ಅದಕ್ಕೆ ಉತ್ತರ ಕೊಡುತ್ತದೆ. ನಾವು ಸಲ್ಲಿಸಿರುವ ದಾಖಲೆಗಳು ಈ ಯೋಜನೆಗೆ ಭದ್ರ ಅಡಿಪಾಯ ಹಾಕಿದ್ದು, ನ್ಯಾಯಾಲಯವೇ ಈ ವಿಚಾರವಾಗಿ ತೀರ್ಮಾನ ಮಾಡಲಿದೆ” ಎಂದರು.
ಬಾಗಿನ ಯಾವಾಗ ಅರ್ಪಣೆ ಮಾಡಲಾಗುತ್ತೆ ಎಂದು ಕೇಳಿದಾಗ “ಶುಭ ಮುಹೂರ್ತ, ಶುಭ ಗಳಿಗೆ ನೋಡಿ, ವಿಧಾನಸಭೆ ಮುಗಿದ ನಂತರ ದಿನಾಂಕ ತೀರ್ಮಾನ ಮಾಡಲಾಗುವುದು” ಎಂದು ತಿಳಿಸಿದರು.
ಇದನ್ನೂ ಓದಿ | Actor Darshan: ನಟ ದರ್ಶನ್‌ಗೆ ಇನ್ನೂ 3 ದಿನ ಜೈಲೂಟವೇ ಗತಿ; ಜು.25ಕ್ಕೆ ಆದೇಶ ಕಾಯ್ದಿರಿಸಿದ ಕೋರ್ಟ್
ಐಟಿ ನೌಕರರ ಕೆಲಸದ ವೇಳೆ ಹೆಚ್ಚಿಸುವ ಕುರಿತು ಕೇಳಿದಾಗ, “ನಾನು ಮತ್ತು ನೀವು ವಿರೋಧಿಸಬಹುದು. ಆದರೆ ಅಂತರರಾಷ್ಟೀಯ ಮಟ್ಟದಲ್ಲಿ ಬೇರ, ಬೇರೆ ಕೆಲಸದ ಸಮಯವಿದೆ. ಈ ಕಾರಣಕ್ಕೆ ಒಂದು ಸಭೆ ಕರೆದು ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದರು.