Site icon Vistara News

Water Crisis: ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ; ಚಳಿಗಾಲದಲ್ಲೇ ಬಂತಾ ಬರ?

Water Crisis in Bangalore

ಬೆಂಗಳೂರು: ರಾಜಧಾನಿ ಬೆಂಗಳೂರು ದಿನದಿಂದ ದಿನಕ್ಕೆ ವಿಶಾಲವಾಗುತ್ತಿದೆ. ಆದರೆ, ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ. ಇನ್ನು ನೀರಿನ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಜಲಮಂಡಳಿ ಕಾವೇರಿ ನೀರನ್ನೇ ನಂಬಿಕೊಂಡಿದ್ದು, ಈ ವರ್ಷಾರಂಭದಲ್ಲಿಯೇ ನೀರಿಗೆ ಹಾಹಾಕಾರ ಎದುರಾಗುವ (Bengaluru Water Crisis) ಆತಂಕ ಸೃಷ್ಟಿಯಾಗಿದೆ.

ಬೆಂಗಳೂರಿನ ಜನಸಂಖ್ಯೆಯು 1.30 ಕೋಟಿಯನ್ನು ಮೀರಿದ್ದು, ಮೂಲಭೂತ ಸೌಕರ್ಯಗಳನ್ನು ಒದಗಿಸುವುದೇ ಸವಾಲಾಗಿ ಪರಿಣಮಿಸಿದೆ. ಅದರಲ್ಲಿಯೂ ನೀರಿನ ಪೂರೈಕೆಯ ಮಹತ್ವದ ಜವಾಬ್ದಾರಿ ಹೊತ್ತಿರುವ ಜಲಮಂಡಳಿಯು ಕಾವೇರಿ ನೀರನ್ನೇ ಪ್ರಧಾನವಾಗಿ ಅವಲಂಬಿಸಿದೆ. ರಾಜ್ಯದಲ್ಲಿ ಮಳೆಯ ಎಲ್‌ನಿನೋ ಸ್ವರೂಪವನ್ನೇ ಬದಲಿಸಿದ್ದು, ಕಳೆದ ವರ್ಷ ವಾಡಿಕೆಗಿಂತ ಮಳೆ ಸಾಕಷ್ಟು ಕಡಿಮೆಯಾದ ಹಿನ್ನೆಲೆಯಲ್ಲಿ ತೀವ್ರ ಬರಗಾಲ ಎದುರಾಯಿತು. ಇದರಿಂದ ಜಲಾಶಯಗಳು ಬರಿದಾಗುತ್ತಿವೆ.

ಇನ್ನು ಶೀಘ್ರದಲ್ಲಿಯೇ ಕಾವೇರಿ 5ನೇ ಹಂತದ ಯೋಜನೆ ಮೂಲಕ ಹೆಚ್ಚುವರಿ 110 ಹಳ್ಳಿಗಳಿಗೆ ಕುಡಿಯುವ ನೀರನ್ನು ನೀಡುವುದಾಗಿ ಹೇಳಿರುವ ಜಲಮಂಡಳಿ ಪ್ರತಿ ತಿಂಗಳು 2.42 ಟಿಎಂಸಿ ನೀರು ಅಂದರೆ ವಾರ್ಷಿಕವಾಗಿ 29 ಟಿಎಂಸಿ ನೀರನ್ನ ಕಾಯ್ದಿರಿಸುವಂತೆ ಕಾವೇರಿ ನೀರಾವರಿ ನಿಗಮಕ್ಕೆ ಪತ್ರ ಬರೆದು ಮನವಿ ಮಾಡಿದೆ. ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ 20 ಟಿಎಂಸಿ ಸಂಗ್ರಹ ಇದ್ದು, 5 ಟಿಎಂಸಿ ಡೆಡ್‌ ಸ್ಟೋರೇಜ್‌ ಇರಲಿದೆ. ಉಳಿದ ನೀರನ್ನ ಎತ್ತಿಟ್ಟರೂ 6 ತಿಂಗಳಿಗೆ ಮಾತ್ರ ಸರಿಹೋಗಲಿದ್ದು, ನಿರೀಕ್ಷಿತ ಮಳೆಯಾಗದಿದ್ದಲ್ಲಿ ಬೆಂಗಳೂರಿನ ಸ್ಥಿತಿ ಏನಾಗಲಿದೆ ಎಂಬ ಆತಂಕ ಮೂಡಿದೆ.

ಇದನ್ನೂ ಓದಿ | Lokayukta Raid : ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ಮಾಡಾಳು ವಿರೂಪಾಕ್ಷಪ್ಪ ರಾಜೀನಾಮೆ, ಸಿಎಂ ಸೂಚನೆ ಬೆನ್ನಲ್ಲೇ ರಿಸೈನ್‌

ರಾಜಧಾನಿಯ ಅನಾಗರಿಕ ನಗರೀಕರಣದ ಬಗ್ಗೆ ಖ್ಯಾತ ಪರಿಸರ ವಿಜ್ಞಾನಿ ಟಿ.ವಿ. ರಾಮಚಂದ್ರ ಕಳವಳ ವ್ಯಕ್ತಪಡಿಸಿದ್ದಾರೆ. 1973ರಿಂದ 2023ರವರೆಗಿನ ನಗರದ ಸ್ಥಿತಿಗತಿಯನ್ನು ಸರ್ವೆ ಮೂಲಕ ಬಿಚ್ಚಿಟ್ಟಿರುವ ಅವರು ನಗರದ ಶೇ. 98ರಷ್ಟು ಕೆರೆಗಳೂ ಕೈಗಾರಿಕೆ & ಗೃಹ ಬಳಕೆಯಿಂದಾಗಿ ವಿಷಮಯ ಆಗಿರುದಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸರ್ಕಾರಕ್ಕೆ ಹಲವು ಮಹತ್ವದ ಸಲಹೆಗಳನ್ನ ನೀಡಿದ್ದಾರೆ.

ಪರಿಹಾರದ ಮಾರ್ಗಗಳೇನು

  1. ನಗರದಲ್ಲಿ ಹಸಿರು ವಲಯಗಳನ್ನು ಹೆಚ್ಚಿಸುವುದು
  2. ಸಂಸ್ಕರಿಸಿದ ತ್ಯಾಜ್ಯ ನೀರಿನ ಸಮರ್ಪಕ ಬಳಕೆ
  3. ಮಳೆ ನೀರು ಕೊಯ್ಲು ಪದ್ಧತಿಯ ಕಟ್ಟುನಿಟ್ಟಿನ ಅನುಷ್ಠಾನ
  4. ಜಲಮಂಡಳಿಯ ವ್ಯಾಪ್ತಿಯ ನೀರಿಕೆ ಸೋರಿಕೆಗೆ ಕಡಿವಾಣ

ಇದನ್ನೂ ಓದಿ | Coronavirus News: 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ; ರಾಜ್ಯ ಸರ್ಕಾರ ಸಲಹೆ

ಕೆರೆ-ಕುಂಟೆಗಳನ್ನು ಕರಗಿಸುತ್ತಾ, ಹಸಿರು ಮಾಯಮಾಡುತ್ತಾ, ಕಾಂಕ್ರೀಟ್ ಕಾಡಾಗಿಸುತ್ತಿರುವ ನಮಗೆ ಭವಿಷ್ಯದ ಬೆಂಗಳೂರಿನ ಅರಿವಿರಬೇಕಿದೆ. ಮಳೆ ನೀರು ಕೊಯ್ಲು ಸಮರ್ಪಕ ಆಗದಿದ್ದರೆ, ನಗರದಲ್ಲಿ ಅಂತರ್ಜಲ ಪಾತಾಳಕ್ಕೆ ಸೇರಲಿದೆ. ಇನ್ನು ಜಲಮಂಡಳಿ ಬರೀ ಕಾವೇರಿ ನೀರನ್ನೇ ಕಾದು ಕುಳಿತರೆ ಕೆಲವೇ ತಿಂಗಳಲ್ಲಿ ಬೆಂಗಳೂರು ನಗರದಲ್ಲೂ ಕುಡಿವ ನೀರಿಗೆ ಹಾಹಾಕಾರ ಶುರುವಾಗುವುದು ನಿಶ್ಚಿತ ಎಂದು ಪರಿಸರ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

Exit mobile version