ಬೆಂಗಳೂರು: ದೇಶದಲ್ಲೇ ಅತ್ಯುತ್ತಮ ಸಾರಿಗೆ ಸೇವೆ ನೀಡುವ ರಾಜ್ಯಗಳಲ್ಲಿ ಮೊದಲಿಗೆ ನಿಲ್ಲುವುದು ಕರ್ನಾಟಕ. ಅದರಲ್ಲೂ ಕಾಂಗ್ರೆಸ್ ಗ್ಯಾರಂಟಿ ಯೋಜನೆಯಲ್ಲೊಂದಾದ (Congress Guarantee Scheme) ಶಕ್ತಿ ಯೋಜನೆ (Shakti Scheme) ಬಂದಾಗಿನಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ (KSRTC Bus) ಪ್ರಯಾಣಕ್ಕೆ ಎಲ್ಲಿಲ್ಲದ ಬೇಡಿಕೆ ಬಂದುಬಿಟ್ಟಿದೆ. ನಿತ್ಯವೂ ಲಕ್ಷಾಂತರ ಮಹಿಳೆಯರು ಉಚಿತ ಸೇವೆ ಪಡೆಯುತ್ತಿದ್ದು, ಸೀಟ್‌ಗಾಗಿ ಜಗಳವು ಸಾಮಾನ್ಯವಾಗಿದೆ. ಈ ನಡುವೆ ಸಾರಿಗೆ ಸಚಿವರು ಹೊಸದೊಂದು ಆದೇಶ ಹೊರಡಿಸಿದ್ದು, ಮಹಿಳಾ ಪ್ರಯಾಣಿಕರನ್ನು ನಿಂದನೆ ಮಾಡಿದರೆ ಅಂತಹ ಚಾಲಕ, ನಿರ್ವಾಹಕರನ್ನು ಅಮಾನತು ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಬಸ್‌ನಲ್ಲಿರುವ ಸಿಬ್ಬಂದಿ ಗಲಾಟೆ ಮಾಡುವುದು, ಹಲ್ಲೆ ಮಾಡುತ್ತಿರುವ ಪ್ರಕರಣಗಳೂ ಕೇಳಿ ಬರುತ್ತಿವೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿರುವುದರಿಂದ ಅಸಮಾಧಾನಗೊಂಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು ಇಂತಹ ಪ್ರಕರಣ ಮರುಕಳಿಸದಂತೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: KSRTC Package Tour : ಜೋಗ, ಭರಚುಕ್ಕಿ ಸಹಿತ ಜಲಪಾತ ವೀಕ್ಷಣೆಗೆ ಕೆಎಸ್‌ಆರ್‌ಟಿಸಿ ಪ್ಯಾಕೇಜ್ ಟೂರ್
ಬಸ್‌ಗಳಲ್ಲಿ ಪ್ರಯಾಣಿಸುವ ವೇಳೆ ಬಸ್‌ನ ಸಿಬ್ಬಂದಿ ಮಹಿಳೆಯರ ಮೇಲೆ ಗಲಾಟೆ, ಹಲ್ಲೆ ಮಾಡಿದರೆ ಕೂಡಲೇ ಅಮಾನತು ಮಾಡಲಾಗುತ್ತದೆ ಎಂಬ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ಶಕ್ತಿ ಯೋಜನೆಯು ಜೂನ್ 11ಕ್ಕೆ ಜಾರಿಯಾಗಿದ್ದು, ಆಗಸ್ಟ್ 11ಕ್ಕೆ ಎರಡು ತಿಂಗಳು ಪೂರೈಸುತ್ತಿದೆ. ಇದಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಆದರೆ, ಕಳೆದ ಎರಡು ತಿಂಗಳಿಂದ ಸಂಚಾರದ ವಿಚಾರವಾಗಿ ಮಹಿಳೆಯರ ನಡುವೆ ಗಲಾಟೆ ಪ್ರಕರಣಗಳು ಸಾಕಷ್ಟು ಕೇಳಿ ಬಂದಿವೆ. ಇದರ ನಡುವೆ ನಮ್ಮ ಸಿಬ್ಬಂದಿಯಿಂದಲೂ ಹಲ್ಲೆಯಾಗಿರುವ ವಿಚಾರವಾಗಿ ಐದಾರು ಪ್ರಕರಣ ಸಾರಿಗೆ ಇಲಾಖೆಯಲ್ಲಿ ದಾಖಲಾಗಿದೆ. ಇದರ ಬಗ್ಗೆ ಆಯಾ ಎಂಡಿಗಳಿಗೆ ಸೂಚನೆಯನ್ನು ನೀಡಿದ್ದೇನೆ. ಎಲ್ಲೆಲ್ಲಿ , ಯಾವ ಸಮಯಕ್ಕೆ ಪ್ರಕರಣ ನಡೆದಿದೆ ಎಂಬ ವಿವರಣೆಯನ್ನೂ ಪಡೆದಿದ್ದೇನೆ. ಇದರ ಸಮರ್ಪಕ ವಿಚಾರಣೆ ನಡೆಸುವಂತೆ ಸೂಚಿಸಿದ್ದೇನೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಆರೋಪ ಸಾಬೀತಾದರೆ ಅವರು ಅಮಾನತು ಶಿಕ್ಷೆಗೆ ಗುರಿಯಾಗಲಿದ್ದಾರೆ.
ಇದನ್ನೂ ಓದಿ: Tweet war : ಸಿದ್ದರಾಮಯ್ಯ ನಕಲಿ ಸಂವಿಧಾನ ತಜ್ಞ ಎಂದ HDK, ಅವರಿಗೆ ಮಾನಸಿಕ ಸ್ಥಿಮಿತತೆ ಇಲ್ಲ ಎಂದ ಸಿಎಂ
ಆಗಾಗ ನಡೆಯುತ್ತಿದ್ದ ವಾಗ್ವಾದ
ಬಸ್‌ನಲ್ಲಿ ಕೆಲವೊಮ್ಮೆ ಮಹಿಳೆಯರು ಸೀಟ್ ವಿಚಾರಕ್ಕೋ ಅಥವಾ ಇನ್ಯಾವುದೋ ವಿಚಾರಕ್ಕೋ ಚಾಲಕ ಇಲ್ಲವೇ ನಿರ್ವಾಹಕರ ಬಳಿ ಜಗಳ ಮಾಡುವ ಪ್ರಕರಣಗಳು ಆಗಾಗ ನಡೆಯುತ್ತಿದ್ದವು. ಇನ್ನು ಮೇಲೆ ಮಹಿಳೆಯರು ನಮ್ಮ ಬಳಿ ಗಲಾಟೆ ಮಾಡಿದರೂ ನಾವು ಏನೂ ಹೇಳದ ಸ್ಥಿತಿ ನಿರ್ಮಾಣವಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಚಾಲಕ, ನಿರ್ವಾಹಕರು ಅಳಲು ತೋಡಿಕೊಂಡಿದ್ದಾರೆ.