ಕೊಪ್ಪಳ: ಕಂಡಕ್ಟರ್ನನ್ನೇ ಮರೆತು ಸರ್ಕಾರಿ ಬಸ್ ಚಾಲಕ 5 ಕಿಲೋ ಮೀಟರ್ ಬಸ್ ಚಲಾಯಿಸಿಕೊಂಡು ಹೋದ ಪ್ರಸಂಗ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ಕೊಪ್ಪಳದಿಂದ ಕುಷ್ಟಗಿಗೆ ನಿತ್ಯ ಸಂಚರಿಸುವ ಕೆಎ-37, ಎಫ್0678 ಸಂಖ್ಯೆಯ ಸಾರಿಗೆ ಸಂಸ್ಥೆಯ ಬಸ್ ಇದಾಗಿದ್ದು, ಮಂಗಳವಾರ (ಜು.12) ಮಧ್ಯಾಹ್ನ 1 ಗಂಟೆ ಸುಮಾರಿಗೆ ಕೊಪ್ಪಳದ ಬಸ್ ನಿಲ್ದಾಣದಿಂದ ಕುಷ್ಟಗಿಗೆ ಹೊರಟಿತ್ತು. ಈ ವೇಳೆ ಬಸ್ ಹೊರಡುವ ಮುಂಚೆ ಕಂಡೆಕ್ಟರ್ ಡಿಪೋದಲ್ಲಿ ಎಂಟ್ರಿ ಮಾಡಿಸಿಕೊಳ್ಳಲು ಹೋದಾಗ ಬಸ್ ಚಾಲಕ ಕಂಡೆಕ್ಟರ್ ಹತ್ತಿದ್ದಾರೋ ಇಲ್ಲವೋ ಎಂಬುದನ್ನು ಗಮನಿಸದೇ ನಿಲ್ದಾಣದಿಂದ ಬಸ್ ಚಲಾಯಿಸಿಕೊಂಡು ಹೋಗಿದ್ದಾರೆ.
ಸುಮಾರು 5 ಕಿಲೋ ಮೀಟರ್ ಹೋಗುವವರೆಗೂ ಬಸ್ ಚಾಲಕನಿಗೆ ಕಂಡೆಕ್ಟರ್ ಹತ್ತಿದ್ದಾರೋ ಇಲ್ಲವೋ ಎಂಬುದು ಗಮನಕ್ಕೆ ಬಂದಿಲ್ಲ. ಬಳಿಕ ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳಲು ನೋಡಿದಾಗ ಕಂಡೆಕ್ಟರ್ ಇಲ್ಲದೆ ಇರುವುದು ಗಮನಕ್ಕೆ ಬಂದಿದೆ. ಕೂಡಲೇ ಚಾಲಕನಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಬಸ್ ಚಾಲಕ ಓಜಿನಹಳ್ಳಿ ಕ್ರಾಸ್ ಬಳಿ ಬಸ್ ನಿಲ್ಲಿಸಿ ಸುಮಾರು 15 ನಿಮಿಷಗಳ ಕಾಲ ಕಂಡಕ್ಟರ್ಗಾಗಿ ಕಾದಿದ್ದಾರೆ. ಹೀಗಾಗಿ ಪ್ರಯಾಣಿಕರೂ ಸಹ ಕಾದು ಕುಳಿತುಕೊಳ್ಳುವಂತಾಗಿದೆ. ಬಳಿಕ ಕಂಡೆಕ್ಟರ್ ಬೇರೊಂದು ಬಸ್ನಲ್ಲಿ ಬಂದು ತಮ್ಮ ಬಸ್ ಹತ್ತಿ ಕರ್ತವ್ಯದಲ್ಲಿ ನಿರತರಾಗಿದ್ದಾರೆ.
ಇದನ್ನು ಓದಿ| ಸರ್ಕಾರಿ ಶಾಲಾ ಮಕ್ಕಳ ಕರೆತರಲು ಬರಲಿವೆ ಸ್ಕೂಲ್ ಬಸ್!