ಬೆಂಗಳೂರು: ಕೋರಮಂಗಲದ ಉದ್ಯಮಿ ರಾಜಗೋಪಾಲ ರೆಡ್ಡಿ ಮನೆಯಲ್ಲಿ ನಡೆದ ಜೋಡಿ ಕೊಲೆ ಮತ್ತು ದರೋಡೆ ಕೇಸ್ಗೆ ಸಂಬಂಧಪಟ್ಟಂತೆ ಹೊಸದೊಂದು ವಿಚಾರ ಬೆಳಕಿಗೆ ಬಂದಿದೆ. ಈ ಕೃತ್ಯದ ಹಿಂದೆ ಆ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡಿದ್ದ ಜಗದೀಶ್ ಎಂಬಾತನ ಕೈವಾಡ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ.
ರಾಜಗೋಪಾಲ ರೆಡ್ಡಿ ಮತ್ತು ಕುಟುಂಬದವರೆಲ್ಲ ಮದುವೆಗಾಗಿ ಅನಂತಪುರಕ್ಕೆ ಹೋಗಿದ್ದಾಗ, ಇವರ ಮನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಕರಿಯಪ್ಪ ಮತ್ತು ಮನೆಕೆಲಸದವನಾದ, ಆಸ್ಸಾಂ ಮೂಲದ ಬಹದ್ದೂರ್ ಹತ್ಯೆಯಾಗಿದ್ದಲ್ಲದೆ, ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಲಾಗಿದೆ. ಮೊದಲು ಕರಿಯಪ್ಪನ ಮೃತದೇಹ ಸಿಕ್ಕಿತ್ತು. ಆಗ ಬಹದ್ದೂರ್ನೇ ಈ ಹತ್ಯೆ ಮಾಡಿ ಓಡಿಹೋಗಿದ್ದಾನೆ ಎಂಬ ಅನುಮಾನದ ಮೇರೆಗೆ ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದರು. ಆದರೆ ನಂತರ ಮನೆಯ ನೀರಿನ ತೊಟ್ಟಿಯಲ್ಲಿ ಬಹದ್ದೂರ್ ಮೃತದೇಹ ಕೂಡ ಸಿಕ್ಕಿ, ಹೊಸದೊಂದು ಟ್ವಿಸ್ಟ್ ಸಿಕ್ಕಿತ್ತು.
ಇದೀಗ ಈ ಜೋಡಿ ಕೊಲೆ ಮಾಡಿದ ಅನುಮಾನ ಮನೆಯ ಹಳೇ ಡ್ರೈವರ್ ಜಗದೀಶ್ ಎಂಬುವನತ್ತ ತಿರುಗಿದೆ. ಜಗದೀಶ್ ಮೊದಲು ರಾಜಗೋಪಾಲ ರೆಡ್ಡಿ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಆತನಿಗೆ ಹುಡುಗಿಯರ ಶೋಕಿ ಇತ್ತು. ತನ್ನ ವೈಯಕ್ತಿಕ ಕೆಲಸಕ್ಕೂ ಅವನು ರಾಜಗೋಪಾಲರೆಡ್ಡಿ ಕಾರನ್ನೇ ತೆಗೆದುಕೊಂಡು ಹೋಗುತ್ತಿದ್ದ. ಇವರ ಐಷಾರಾಮಿ ಕಾರುಗಳಲ್ಲಿ ಹುಡುಗಿಯರನ್ನು ಸುತ್ತಾಡಿಸುತ್ತಿದ್ದ. ಹೀಗೆ ಒಂದು ಸಲ ಆಡಿ ಕಾರನ್ನು ಜಗದೀಶ್ ತೆಗೆದುಕೊಂಡು ಹೋಗಿದ್ದಾಗ ಅದು ಅಪಘಾತಕ್ಕೀಡಾಗಿತ್ತು. ಆಗ ರಾಜಗೋಪಾಲ್ ರೆಡ್ಡಿ ಅವರು ಜಗದೀಶನಿಗೆ ಬೈದು, ಅವನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಈಗ ಇವರ ಮನೆ ದರೋಡೆ ಮತ್ತು ಜೋಡಿ ಕೊಲೆ ಕೃತ್ಯ ಇವನದ್ದೇ ಎಂಬ ಅನುಮಾನ ಬಲವಾಗಿದೆ. ಕಾಲ್ ಡೀಟೇಲ್ಸ್ ರೆಕಾರ್ಡ್ ಪರಿಶೀಲನೆ ಮಾಡಿದಾಗ, ಅದರಲ್ಲಿ ಸಿಕ್ಕ ಕೆಲವು ಪುರಾವೆಗಳು ಜಗದೀಶ್ನತ್ತ ಬೊಟ್ಟು ಮಾಡಿವೆ. ಸದ್ಯ ಕೋರಮಂಗಲ ಪೊಲೀಸರು ಜಗದೀಶ್ಗಾಗಿ ಹುಡುಕುತ್ತಿದ್ದಾರೆ.