Site icon Vistara News

ಮಳೆಗಾಲ ಬಂದ್ರೂ ನೀರಿಲ್ಲ! ಬಾಲಕನೇ ಇಲ್ಲಿ ನೀರಿನ ಟ್ರ್ಯಾಕ್ಟರ್‌ ಚಾಲಕ; ಅಪಘಾತಕ್ಕೆ ನೀರುಗಂಟಿ ಸಾವು

Driving a tractor by boy in hosanagara

ಶಿವಮೊಗ್ಗ: ಜೂನ್‌ ತಿಂಗಳು ಬಹುತೇಕ ಮುಗಿಯುತ್ತಾ ಬಂದಿದೆ. ಇನ್ನು 10 ದಿನ ಕಳೆದರೆ ಜುಲೈ ತಿಂಗಳಿಗೆ ಕಾಲಿಡುತ್ತಿದ್ದೇವೆ. ಆದರೆ, ಇನ್ನೂ ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಸುರಿಯುತ್ತಲೇ ಇಲ್ಲ. ದುರ್ಬಲ ಮುಂಗಾರಿನಿಂದ ಜನರು ತತ್ತರಿಸಿ ಹೋಗಿದ್ದಾರೆ. ಕೆಲವು ಕಡೆ ಕುಡಿಯಲೂ ನೀರಿಲ್ಲದ (Drinking Water) ಪರಿಸ್ಥಿತಿ ತಲೆದೋರಿದೆ. ಈ ಕಾರಣಕ್ಕಾಗಿ ಹೊಸನಗರ ತಾಲೂಕಿನ ಬಿದನೂರಿನಲ್ಲಿ ಕುಡಿಯುವ ನೀರು ಹೊತ್ತೊಯ್ಯುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ (Road Accident) ನೀರುಗಂಟಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಬಿದನೂರು ನಗರದ ಚಿಕ್ಕಪೇಟೆ ನಿವಾಸಿ ತುಕಾರಾಮ (46) ಮೃತ ದುರ್ದೈವಿ. ಇವರು ನಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರುಗಂಟಿ ಕೆಲಸ ಮಾಡುತ್ತಿದ್ದರು. ಆದರೆ, ಬಿದನೂರು ಗ್ರಾಪಂ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸಲಾಗಿದೆ.

ಇದನ್ನೂ ಓದಿ: KRS Dam: ಖಾಲಿಯಾಗಿದೆ ಕೆಆರ್‌ಎಸ್‌! ಕುಡಿಯಲು ನೀರು ಸಿಗುವುದು ಇನ್ನೆಷ್ಟು ದಿನ? ಮಳೆ ಬಾರದೇ ಇದ್ದರೆ ಏನ್‌ ಕಥೆ!

ಆದರೆ, ನೀರು ಪೂರೈಸುವ ಟ್ರ್ಯಾಕ್ಟರ್ ಅನ್ನು ಬಾಲಕನೊಬ್ಬ ಚಲಾಯಿಸಿಕೊಂಡು ಹೋಗಿದ್ದಾನೆ. ಹೀಗೆ ಹೋಗುವಾಗ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ ಪಲ್ಟಿಯಾಗಿದೆ. ಟ್ರ್ಯಾಕ್ಟರ್‌ ಅಡಿ ಸಿಲುಕಿದ ನೀರುಗಂಟಿ ತುಕಾರಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಸ್ಥಳೀಯರ ವ್ಯಾಪಕ ಆಕ್ರೋಶ

ಒಬ್ಬ ಬಾಲಕನ ಕೈಯಲ್ಲಿ ಟ್ರ್ಯಾಕ್ಟರ್‌ ಕೊಟ್ಟು ಕಳುಹಿಸಿರುವುದು ಎಷ್ಟು ಸರಿ? ಇದು ಕಾನೂನು ಪ್ರಕಾರ ಅಪರಾಧ ಎಂದು ತಿಳಿದಿಲ್ಲವೇ? ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕಿರುವ ಸ್ಥಳೀಯ ಆಡಳಿತವಾದ ಗ್ರಾಮ ಪಂಚಾಯಿತಿಯು ನಿರ್ಲಕ್ಷ್ಯ ವಹಿಸಿದೆ. ಅಲ್ಲದೆ, ಗುತ್ತಿಗೆದಾರರಾದವರು ಹಣ ಉಳಿತಾಯಕ್ಕಾಗಿ ಇಂತಹ ಕೆಲಸ ಮಾಡಬಾರದು. ಚಾಲನಾ ಪರವಾನಗಿ ಇರುವ ಚಾಲಕನನ್ನು ನೇಮಿಸಿಕೊಳ್ಳಬೇಕು. ಈಗ ಹೋಗಿರುವ ಜೀವಕ್ಕೆ ಹೊಣೆ ಯಾರು ಎಂದು ಸ್ಥಳೀಯರು ಆಕ್ರೋಶವನ್ನು ಹೊರಹಾಕಿದ್ದಾರೆ.

ಇದನ್ನೂ ಓದಿ: Free Bus Service: KSRTC ಬಸ್ ಫುಲ್ ರಶ್; ನೇತಾಡುತ್ತಾ ನಿಂತಿದ್ದ ವ್ಯಕ್ತಿ ಆಯತಪ್ಪಿ ಬಿದ್ದು ಸಾವು!

ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.

Exit mobile version