Site icon Vistara News

Drought Relief: ಬರ ಪರಿಹಾರ ನೀಡಲು ಕೇಂದ್ರ ಒಪ್ಪಿಗೆ; ನಮ್ಮ ಹೋರಾಟಕ್ಕೆ ಮೊದಲ ಹಂತದ ಜಯ ಎಂದ ಸಿಎಂ

Drought Relief

ಬೆಂಗಳೂರು: ಒಂದು ವಾರದಲ್ಲೇ ಕರ್ನಾಟಕಕ್ಕೆ ಬರ ಪರಿಹಾರ (Drought Relief) ನೀಡುವ ಕುರಿತು ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ಇದು, ನಾಡಿನ ರೈತರಿಗೆ ಸಿಗಬೇಕಿದ್ದ ನ್ಯಾಯಯುತ ಪರಿಹಾರ ಕೊಡಿಸುವ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಹಂತದ ಜಯ ಎಂದು ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಸಂಬಂಧ ಒಂದು ವಾರದೊಳಗೆ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಹೇಳಿದೆ. ಪರಿಹಾರ ಬಿಡುಗಡೆಗೆ ಚುನಾವಣಾ ಆಯೋಗ ಕೂಡ ಸಮ್ಮತಿಸಿದೆ ಎಂದು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಬರಪರಿಹಾರಕ್ಕಾಗಿ ಮನವಿ ನೀಡಿ ಐದು ತಿಂಗಳುಗಳು ಕಳೆದರೂ ಕೇಂದ್ರ ಸರ್ಕಾರವು ಯಾವುದೇ ನಿರ್ಣಯ ಕೈಗೊಳ್ಳದೆ, ನ್ಯಾಯಾಲಯದ ಮೆಟ್ಟಿಲೇರುವಂತಹ ಅನಿವಾರ್ಯತೆಯನ್ನು ಸೃಷ್ಟಿಸಿತ್ತು. ಇದು ನಾಡಿನ ರೈತರಿಗೆ ಸಿಗಬೇಕಿದ್ದ ನ್ಯಾಯಯುತ ಪರಿಹಾರವನ್ನು ಕೊಡಿಸುವ ನಮ್ಮ ಹೋರಾಟಕ್ಕೆ ಸಿಕ್ಕ ಮೊದಲ ಹಂತದ ಜಯ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕಕ್ಕೆ ನ್ಯಾಯಯುತ ಜಯ ಸಿಕ್ಕಿದೆ ಎಂದು ದಿನೇಶ್‌ ಗುಂಡೂರಾವ್

ಬೆಂಗಳೂರು: ಬರ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಆಗಿರುವ ಬೆಳವಣಿಗೆಯಲ್ಲಿ ಕರ್ನಾಟಕ ಸರ್ಕಾರದ ಪ್ರಯತ್ನಕ್ಕೆ ನ್ಯಾಯಯುತವಾದ ಜಯ ಸಿಕ್ಕಿದೆ. ಪರಿಹಾರ ಕೊಡುವಂತೆ ಮೂರು ಬಾರಿ ನಾವು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಕೇಂದ್ರ ಸರ್ಕಾರ ಒಂದು ತಿಂಗಳ ಒಳಗೆ ಪರಿಹಾರ ಕೊಡಬೇಕಾಗಿತ್ತು. ಆದ್ರೆ ಪರಿಹಾರ ಕೊಟ್ಟಿರಲಿಲ್ಲ, ಹೀಗಾಗಿ ನಾವು ಅನಿವಾರ್ಯವಾಗಿ ಕೋರ್ಟ್‌ಗೆ ಹೋಗಿದ್ದೇವೆ. ನಾವು ಕೋರ್ಟ್‌ಗೆ ಹೋಗಿದ್ದು, ಕೇಂದ್ರದ ವಿರುದ್ಧ ಸಂಘರ್ಷಕ್ಕಲ್ಲ, ಬೇರೆ ದಾರಿ ಇಲ್ಲದೇ ಹೋಗಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಬರ ಪರಿಹಾರದ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿ, ಪರಿಹಾರ ನೀಡುವ ಕುರಿತು ಒಂದು ವಾರ ಕೇಂದ್ರ ಸಮಯ ತೆಗೆದುಕೊಂಡಿದೆ. ಇದರಿಂದ ಕೇಂದ್ರಕ್ಕೆ ಮುಖಭಂಗವಾಗಿದ್ದು, ಕರ್ನಾಟಕಕ್ಕೆ ನ್ಯಾಯಯುತ ಜಯ ಸಿಕ್ಕಿದೆ. ಇದು ಕರ್ನಾಟಕದ ಜನತೆಗೆ ಸಿಕ್ಕ ಜಯವಾಗಿದೆ ಎಂದರು.

ಕೇಂದ್ರದ ಬರ ಅಧ್ಯಯನ ತಂಡ ಬಂದು ವರದಿ ಕೂಡ ಕೊಟ್ಟಿತ್ತು. ವರದಿ ಕೊಟ್ಟ ಮೇಲೆ ಒಂದು ತಿಂಗಳಲ್ಲಿ ಪರಿಹಾರ ಕೊಡಬೇಕಿತ್ತು, ಆದರೆ ಕೊಟ್ಟಿರಲಿಲ್ಲ. ನಮ್ಮ ಮಾತಿಗೆ ಕೇಂದ್ರ ಕಿವಿಗೊಡಲಿಲ್ಲ, ನಾವು ಸಂಘರ್ಷ ಮಾಡಲು ಕೋರ್ಟ್‌ಗೆ ಹೋಗಿಲ್ಲ, ಕರ್ನಾಟಕದ ಜನರ ಪರವಾಗಿ ಕೋರ್ಟ್‌ಗೆ ಹೋಗಬೇಕಾಯ್ತು. ಕೋರ್ಟ್ ಕೂಡ ಕೇಂದ್ರ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಹೀಗಾಗಿ ಇನ್ನಷ್ಟು ಮುಖಭಂಗ ಆಗಬಾರದು ಅಂತ ಪರಿಹಾರ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ ಎಂದರು.

ಇದನ್ನೂ ಓದಿ Drought Relief: ಒಂದು ವಾರದಲ್ಲಿ ಕರ್ನಾಟಕಕ್ಕೆ ಬರ ಪರಿಹಾರ; ಸುಪ್ರೀಂಗೆ ಕೇಂದ್ರ ಮಹತ್ವದ ಮಾಹಿತಿ

ನಮ್ಮ ಬೇಡಿಕೆ 18 ಸಾವಿರ ಕೋಟಿ ಪರಿಹಾರ ಬರಬೇಕು. ಅದರಲ್ಲಿ ಎಷ್ಟು ಕೊಡುತ್ತಾರೋ ನೋಡಬೇಕು. ಇವರು ನಮಗೆ ಖಾಲಿ ಚೊಂಬನ್ನು ಕೊಟ್ಟಿದ್ರಲ್ಲ ಅದರಲ್ಲಿ ಸ್ವಲ್ಪ ತುಂಬಿಸುವಂಥ ಕೆಲಸ ಸುಪ್ರೀಂ ಕೋರ್ಟ್ ಮಾಡಿದೆ. ಇನ್ನೂ ಅನೇಕ ವಿಚಾರಗಳಲ್ಲಿ ನ್ಯಾಯ ಒದಗಿಸುವ ಕೆಲಸ ಸರ್ಕಾರ ಮಾಡಲಿದೆ. ಮುಂದೆ ಯಾವುದೇ ಹೋರಾಟಕ್ಕೂ ನಾವು ರೆಡಿ ಇದ್ದೇವೆ, ಯಾವುದೇ ತ್ಯಾಗಕ್ಕೂ ಸಿದ್ಧ ಇದ್ದೇವೆ ಎಂದು ಹೇಳಿದರು.

Exit mobile version