ಮೈಸೂರು: ರಾಜ್ಯಕ್ಕೆ 17,900 ಕೋಟಿ ರೂ.ಗಳ ಬರ ಪರಿಹಾರ (Karnataka Drought) ನೀಡುವಂತೆ ಮನವಿ ಸಲ್ಲಿಸಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಪರಿಶೀಲನೆ ನಡೆಸಿ ಒಂದು ತಿಂಗಳಾದರೂ ವರದಿ ನೀಡಿಲ್ಲ. ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಇದುವರೆಗೂ ಸ್ಪಂದಿಸಿಲ್ಲ. ಬರ ಪರಿಹಾರ ರಾಜ್ಯಕ್ಕೆ ನೀಡುವ ಭಿಕ್ಷೆಯಲ್ಲ. ಎನ್‌ಡಿಆರ್‌ಎಫ್‌ನಡಿ ಪರಿಹಾರವನ್ನು ನೀಡಬೇಕಿದ್ದು, ಅದು ರಾಜ್ಯ ನೀಡಿರುವ ತೆರಿಗೆಯ ಮೊತ್ತವೇ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ರಾಜ್ಯ ಸರ್ಕಾರ ಬರ ಪರಿಹಾರ ನೀಡುವ ಸಂಬಂಧ ಕೇಂದ್ರಕ್ಕೆ ಒಂದು ವಾರದ ಗಡುವು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಬರಪರಿಹಾರಕ್ಕೆ ಸಂಬಂಧಿಸಿದಂತೆ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಗಂಭೀರ ಚರ್ಚೆಗಳನ್ನು ನಡೆಸಲಾಗಿದೆ ಎಂದು ಹೇಳಿದರು.
ಜಿಎಸ್‌ಟಿಯ ರಾಜ್ಯದ ಪಾಲು ಕೇಂದ್ರದಿಂದ ನೀಡುವ ಬಗ್ಗೆ ಪ್ರತಿಕ್ರಿಯೆ ನೀಡಿ, 15ನೇ ಹಣಕಾಸಿನ ಆಯೋಗದ ಅವಧಿ ಮುಗಿಯುತ್ತಾ ಬಂದಿದೆ. ಮುಂಬರುವ 16ನೇ ಹಣಕಾಸಿನ ಆಯೋಗದಲ್ಲಿಯೂ ರಾಜ್ಯಕ್ಕೆ ಅನ್ಯಾಯವಾದರೆ, ಸರ್ಕಾರದ ಮುಂದಿನ ಹೆಜ್ಜೆಯ ಬಗ್ಗೆ ನಿರ್ಧರಿಸಲಾಗುವುದು ಎಂದರು.
ಕಾಂಗ್ರೆಸ್ ಪರವಾಗಿ ಜನಾದೇಶ ಬಂದರೆ ಲೋಕಸಭಾ ಚುನಾವಣೆ ಮುಂದೂಡಲಾಗುವುದೇ ಎಂಬ ಬಗ್ಗೆ ಉತ್ತರಿಸಿ, ಪಂಚ ರಾಜ್ಯಗಳ ಚುನಾವಣೆಯಲ್ಲಿ ತೆಲಂಗಾಣ, ಛತ್ತಿಸ್‍ಗಡ, ಮಧ್ಯಪ್ರದೇಶ ಹಾಗೂ ರಾಜಾಸ್ಥಾನದಲ್ಲಿಯೂ ನಾವೇ ಗೆಲ್ಲುತ್ತೇವೆ. ನನಗೆ ಬಂದಿರುವ ಮಾಹಿತಿಯ ಪ್ರಕಾರ ಮೂರು ರಾಜ್ಯಗಳಲ್ಲಿ ಗೆಲ್ಲುತ್ತೇವೆ. ಲೋಕಸಭಾ ಚುನಾವಣೆ ಮುಂದೂಡಲಾಗುವುದಿಲ್ಲ ಏಕೆಂದರೆ ಈಗಾಗಲೇ ನವೆಂಬರ್ ಕೊನೆಯಲ್ಲಿದ್ದೇವೆ, ಚುನಾವಣಾ ನೀತಿ ಸಂಹಿತೆ ಮಾರ್ಚ್ ಅಂತ್ಯಕ್ಕೆ ಆಗಬಹುದು ಎಂಬ ನಿರೀಕ್ಷೆ ಇದೆ ಎಂದರು.
ಇದನ್ನೂ ಓದಿ | HD Kumaraswamy : ಹುಷಾರ್…! ಏನೇನೋ ಮಾತಾಡಬೇಡಿ, ಪೆನ್‌ಡ್ರೈವ್ ಠುಸ್ ಆಗಿಲ್ಲ ಎಂದ ಎಚ್‌ಡಿಕೆ
ರಾಮ ಮಂದಿರ ಕಟ್ಟಲು ನಮ್ಮದೇನು ವಿರೋಧವಿಲ್ಲ
ಜನವರಿ 22 ರಂದು ರಾಮಮಂದಿರ ಉದ್ಘಾಟನೆಗೊಳ್ಳಲಿದ್ದು, ಇದರ ಲಾಭವನ್ನು ಬಿಜೆಪಿ ಪಡೆಯಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಅದೇನು ಹೊಸದಲ್ಲ. ವಿವಾದ ಬಹಳ ವರ್ಷಗಳಿಂದ ಇದ್ದು, ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ. ರಾಮಮಂದಿರ ಕಟ್ಟಲು ನಮ್ಮದೇನೂ ವಿರೋಧವಿಲ್ಲ. ಅದರಿಂದ ಮತದಾರರು ಬದಲಾಗುತ್ತಾರೆ ಎನ್ನುವುದು ಸುಳ್ಳು. ನಮ್ಮ ದೇಶದ ಜನ ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡುಕೊಂಡಿದ್ದಾರೆ. ಬ್ರಿಟಿಷರ ಹಾಗೂ ಮೊಘಲರ ದಾಳಿಯಾದರೂ ಒಂದು ದೇಶವಾಗಿ ನಾವು ಉಳಿದುಕೊಂಡಿದ್ದೇವೆ. ಈ ದೇಶದಲ್ಲಿ ಅನೇಕ ಜಾತಿ, ಭಾಷೆಗಳು ಹಾಗೂ ಧರ್ಮಗಳಿದ್ದರೂ ದೇಶವಾಗಿ ಒಂದಾಗಿದ್ದು, ಐಕ್ಯತೆ, ಒಗ್ಗಟ್ಟಿನಿಂದ. ಉಳಿದುಕೊಂಡು ಬಂದಿದ್ದೇವೆ. ಒಳಗೊಳ್ಳುವಿಕೆಯಲ್ಲಿ ನಂಬಿಕೆ ಇಟ್ಟವರು ದೇಶದಲ್ಲಿ ಹೆಚ್ಚಿದ್ದಾರೆ ಎಂದರು.
ರಾಜಕೀಯ ಇಬ್ಬಂದಿತನ
ಬೇರೆ ರಾಜ್ಯಗಳ ಚುನಾವಣೆಯಲ್ಲಿ ಕರ್ನಾಟಕವನ್ನು ಬಿಜೆಪಿ ಟೀಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕರ್ನಾಟಕ ಹಾಗೂ ಸಿದ್ದರಾಮಯ್ಯನ ಬಗ್ಗೆ ಅವರಿಗೆ ಭಯ. ಅದಕ್ಕೆ ಅವರು ಮಧ್ಯ ಪ್ರದೇಶದಲ್ಲಿ ನನ್ನ ಹಾಗೂ ಕರ್ನಾಟಕದ ಬಗ್ಗೆ ಮಾತನಾಡಿದ್ದಾರೆ. ಪ್ರಧಾನಮಂತ್ರಿಗಳು ನಮ್ಮ ಗ್ಯಾರಂಟಿಗಳಿಗೆ ವಿರೋಧ ಮಾಡಿದ್ದರು. ಈಗ ವಿಕಸಿತ್ ಭಾರತ್ ಎಂದು ವ್ಯಾನ್ ಕಳಿಸಿ ಅದರಲ್ಲಿ ಪ್ರಧಾನಮಂತ್ರಿಗಳ ಗ್ಯಾರಂಟಿ ಎಂದು ಬರೆದಿದ್ದಾರೆ. ಅದನ್ನು ಭಾರತದ ಸರ್ಕಾರ ಕಳುಹಿಸಿದೆ. ಮೊದಲು ನಮ್ಮ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸಿ ಈಗ ಅವರು ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಪರಿಕಲ್ಪನೆಯನ್ನು ಪ್ರಧಾನಿಗಳೇ ವಿರೋಧಿಸಿದ್ದರು. ಈಗ ಖುದ್ದು ಅವರೇ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಇದನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯಬೇಕು ಎಂದರು.
ರಾಜಕೀಯ ಮಾತುಗಳು
ಪ್ರಧಾನಿ ಗ್ಯಾರಂಟಿಯ ಜತೆ ಭ್ರಷ್ಟಾಚಾರದ ಬಗ್ಗೆಯೂ ಮಾತನಾಡಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಗುತ್ತಿಗೆದಾರರ ಸಂಘವು ಶೇ. 40 ಸರ್ಕಾರ ಎಂದು ಕರೆದಿದ್ದು ಬಿಜೆಪಿ ಸರ್ಕಾರವನ್ನು. ಸಮ್ಮನೇ ರಾಜಕೀಯವಾಗಿ ಮಾತನಾಡುತ್ತಾರೆ. ನಾವು 5 ಗ್ಯಾರಂಟಿಗಳನ್ನು ಕೊಟ್ಟವರು, ನುಡಿದಂತೆ ನಡೆದಿದ್ದೇವೆ. 4 ಗ್ಯಾರಂಟಿ ಜಾರಿಯಾಗಿದೆ. ಬಾಕಿ ಒಂದು ಗ್ಯಾರಂಟಿಯನ್ನು ಜನವರಿಯಲ್ಲಿ ಅನುಷ್ಠಾನ ಮಾಡುತ್ತೇವೆ ಎಂದರು.
ಅಧಿವೇಶನದಲ್ಲಿ ಉತ್ತರ ಕೊಡುತ್ತೇವೆ
ಮಾಜಿ ಮುಖ್ಯಮತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿ, ವಿಧಾನಸಭಾ ಅಧಿವೇಶನದಲ್ಲಿ ಅವರು ಚರ್ಚೆ ಮಾಡಲಿ, ಉತ್ತರ ಕೊಡುತ್ತೇವೆ. ಸರ್ಕಾರ ಓಡಿಹೋಗುವುದಿಲ್ಲ. ಕುಮಾರಸ್ವಾಮಿಯವರು ಯಾವಾಗ ಸತ್ಯ ಹೇಳಿದ್ದಾರೆ. ಯಾವಾಗಲೂ ಹಿಟ್ ಆ್ಯಂಡ್ ರನ್ ಕೇಸ್ ಅವರದ್ದು ಎಂದು ತಿಳಿಸಿದರು. ಸುಳ್ಳನ್ನೆಲ್ಲಾ ತನಿಖೆ ಮಾಡಿಸಲು ಆಗುವುದಿಲ್ಲ. ಏನಾದರೂ ಆಧಾರ ಇದ್ದರೆ, ದಾಖಲಾತಿ ಇದ್ದರೆ ತನಿಖೆ ಮಾಡಬಹುದು ಎಂದರು.
ಎಚ್.ಡಿ.ಕೆ ಸರ್ಕಾರದ ಭ್ರಷ್ಟಾಚಾರದ ತನಿಖೆಗೆ ಹಿಂದೇಟು ಹಾಕಲ್ಲ
ಭ್ರಷ್ಟಾಚಾರಗಳ ಬಗ್ಗೆ ತನಿಖೆ ಮಾಡುವಂತೆ ಎಚ್.ಡಿ ಕುಮಾರಸ್ವಾಮಿ ಸವಾಲು ಬಗ್ಗೆ ಪ್ರತಿಕ್ರಿಯೆ ನೀಡಿ, ಮುಖ್ಯಮಂತ್ರಿಗಳು ಮಾಡಬೇಕಾಗಿ ಬಂದರೆ ಮಾಡುತ್ತೇವೆ. ಅದರಲ್ಲಿ ಹಿಂದೆ ಹೋಗುವ ಪ್ರಶ್ನೆಯೇ ಇಲ್ಲ. ಕುಮಾರಸ್ವಾಮಿಯಾಗಲಿ, ನಮ್ಮ ಪಕ್ಷದವರಾಗಲಿ ತಪ್ಪು ಮಾಡಿದರೆ ಶಿಕ್ಷೆ ಅನುಭವಿಸಲೇಬೇಕು. ಕುಮಾರಸ್ವಾಮಿ ಬಗ್ಗೆ ತನಿಖೆ ನಡೆಸಲು ಸರ್ಕಾರ ಹಿಂಜರಿಯುವುದಿಲ್ಲ ಎಂದರು.
ದಂಡ ಕಟ್ಟುವ ಮೂಲಕ ತಪ್ಪು ಒಪ್ಪಿಕೊಂಡಿದ್ದಾರೆ
ಹೆಚ್ಚಿನ ಮೊತ್ತದ ವಿದ್ಯುತ್ ಬಿಲ್ಲನ್ನು ಅನಗತ್ಯವಾಗಿ ನನ್ನ ಮೇಲೆ ಹೇರಲಾಗಿದೆ ಎಂಬ ಕುಮಾರಸ್ವಾಮಿಯವರ ಹೇಳಿಕೆಯ ಬಗ್ಗೆ ಉತ್ತರಿಸುತ್ತಾ, ವಿದ್ಯುತ್ ಬಿಲ್ಲನ್ನು ಬೆಸ್ಕಾಂನವರು ನೀಡುತ್ತಾರೆ. ಕುಮಾರಸ್ವಾಮಿಯವರು ಮೊದಲು ತಪ್ಪನ್ನೇ ಮಾಡಿಲ್ಲ ಎಂದವರು ನಂತರ ದಂಡವನ್ನು ಕಟ್ಟಿರುವುದು, ಅವರು ಅಪರಾಧ ಮಾಡಿರುವುದನ್ನು ಒಪ್ಪಿಕೊಂಡಂತಾಗಿದೆ ಎಂದರು.
ಕುಮಾರಸ್ವಾಮಿಯವರದು ದ್ವೇಷ, ಅಸೂಯೆಗಳ ರಾಜಕಾರಣ
ಜೆಡಿಎಸ್‌ನಿಂದ ಮತ್ತಷ್ಟು ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಜೆಡಿಎಸ್ ಅಥವಾ ಬಿಜೆಪಿಯ ನಾಯಕರು, ಕಾಂಗ್ರೆಸ್‌ನ ಸಿದ್ಧಾಂತ ಹಾಗೂ ನಾಯಕತ್ವವನ್ನು ಒಪ್ಪಿ ಬಂದರೆ ಸ್ವಾಗತಿಸಲಾಗುವುದು. ರಾಜ್ಯದ ಒಟ್ಟು 224 ಸ್ಥಾನದಲ್ಲಿ 136 ಅನ್ನು ಕಾಂಗ್ರೆಸ್ ಪಡೆದಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಕಾಂಗ್ರೆಸ್‌ನ ಶಕ್ತಿಯನ್ನು ವಿಸ್ತರಿಸಬೇಕಿದೆ. ಕೋಮುವಾದಿ ಪಕ್ಷಗಳು ಮತ್ತೆ ಅಧಿಕಾರಕ್ಕೆ ಬರಬಾರದು. ಜೆಡಿಎಸ್‌ನ ಕುಮಾರಸ್ವಾಮಿಯವರು ಕೇವಲ ದ್ವೇಷ ಹಾಗೂ ಅಸೂಯೆಗಳ ರಾಜಕಾರಣ ಮಾಡುತ್ತಾರೆ. ನನ್ನ ಮಗ ಯತೀಂದ್ರ ಆಶ್ರಯ ಸಮಿತಿ ಅಧ್ಯಕ್ಷನಾಗಿದ್ದು, ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೆ, ಅವರ ಮೇಲೆ ವೃಥಾ ಆರೋಪ ಮಾಡುವ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ನನ್ನ ರಾಜಕೀಯ ಜೀವನದಲ್ಲಿ ಇದುವರೆಗೂ ದ್ವೇಷದ ರಾಜಕಾರಣವನ್ನು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ. ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು ಎಂದರು.
ಹಗರಣಗಳ ತನಿಖೆ
ಹಿಂದಿನ ಸರ್ಕಾರದ ಹಗರಣಗಳ ತನಿಖೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಶೇ. 40 ಕಮಿಷನ್, ಕೋವಿಡ್, ಬಿಟ್ ಕಾಯಿನ್ ಸೇರಿದಂತೆ ಇತರೆ ಹಗರಣಗಳ ತನಿಖೆಗೆ ಆಯೋಗಗಳನ್ನು ರಚಿಸಲಾಗಿದ್ದು, ವರದಿಯನ್ನು ನಿರೀಕ್ಷಿಸಲಾಗಿದೆ ಎಂದರು.
ಇದನ್ನೂ ಓದಿ | Exam Scam : ಸರ್ಕಾರಿ ನೇಮಕಾತಿ ಅಕ್ರಮ ತಡೆಯಲು ವಿಧೇಯಕ; ಅಧಿವೇಶನದಲ್ಲಿ ಮಂಡನೆ
ಭಾರತ ವಿಶ್ವಕಪ್ ಗೆಲ್ಲುವ ವಿಶ್ವಾಸವಿದೆ
ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ವಿಶ್ವಕಪ್ ಅಂತಿಮ ಪಂದ್ಯ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ನವೆಂಬರ್ 19 ರಂದು ಫೈನಲ್ ಪಂದ್ಯ ನಡೆಯಲಿದೆ. ಭಾರತದ ತಂಡ ಅಜೇಯರಾಗಿ ಕೊನೆಯ ಹಂತದವರೆಗೆ ತಲುಪಿದ್ದು, ಭಾರತದ ತಂಡ ಒಗ್ಗಟ್ಟಿನಿಂದ ತಂಡ ಸ್ಫೂರ್ತಿಯಿಂದ ಆಡಿದಾಗ ಮಾತ್ರ ಗೆಲುವು ನಮ್ಮದಾಗುತ್ತದೆ. ಭಾರತ ತಂಡ ಈ ಬಾರಿಯ ವಿಶ್ವಕಪ್ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿಗಳು, ತಂಡಕ್ಕೆ ಶುಭ ಹಾರೈಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ