ಬೆಂಗಳೂರು: ರಾಜ್ಯದಲ್ಲಿ 195 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಿ ರಾಜ್ಯ ಸರ್ಕಾರ ಈಗಾಗಲೇ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಬರ ಸ್ಥಿತಿ ಅಧ್ಯಯನ ನಡೆಸಲು ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಆಗಮಿಸಿದೆ. ಶನಿವಾರ ಕೂಡ ವಿಜಯನಗರ, ಚಿತ್ರದುರ್ಗ, ಧಾರವಾಡ, ಬಾಗಲಕೋಟೆ ಸೇರಿ ಹಲವು ಜಿಲ್ಲೆಗಳಲ್ಲಿ ಅಧಿಕಾರಿಗಳು ಬರ ಅಧ್ಯಯನ (Drought Study) ನಡೆಸಿದರು. ಈ ವೇಳೆ ಮಳೆ ಇಲ್ಲದೆ ಬೆಳೆ ನಷ್ಟವಾಗಿದ್ದು, ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳ ಬಳಿ ರೈತರು ಅಂಗಲಾಚಿದರು.
ಕೈಮುಗಿದು ಬೇಡಿಕೊಂಡ ವೃದ್ಧ ಮಹಿಳೆ
ವಿಜಯನಗರ: ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಕೇಂದ್ರ ಕುಡಿಯುವ ನೀರು ಹೆಚ್ಚುವರಿ ಸಲಹೆಗಾರ ಡಿ. ರಾಜಶೇಖರ್ ನೇತೃತ್ವದ ಬರ ಅಧ್ಯಯನ ತಂಡ ವಿವಿಧೆಡೆ ಪರಿಶೀಲನೆ ನಡೆಸಿತು. ಅಧಿಕಾರಿಗಳ ಭೇಟಿ ವೇಳೆ ಕಂದಾಯ, ತೋಟಗಾರಿಕೆ, ಕೃಷಿ ಅಧಿಕಾರಿಗಳಿಂದ ಮಳೆಯ ವಾಸ್ತವದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಜಿಲ್ಲೆಯ ಹಲವು ಕಡೆ ಸಂಪೂರ್ಣ ಬೆಳೆ ಹಾನಿಯಾಗಿದೆ. ಕೆಲವೆಡೆ ಬೆಳೆ ಇದ್ದರೂ ಉಂಟಾಗಿರುವ ತೀವ್ರ ಇಳುವರಿ ಕುಸಿತದ ಬಗ್ಗೆ ಮಾಹಿತಿ ನೀಡಲಾಯಿತು.
ಹೊಸಪೇಟೆ ತಾಲೂಕಿನ ನಂದಿಬಂಡಿ ಗ್ರಾಮದಲ್ಲಿ ವೃದ್ಧ ಮಹಿಳೆಯೊಬ್ಬರು ರೈತರ ಸ್ಥಿತಿ ಶೋಚನೀಯವಾಗಿದೆ, ಪರಿಹಾರ ನೀಡಿ ಎಂದು ಕೈಮುಗಿದು ಬೇಡಿಕೊಂಡು ಅಳಲು ತೋಡಿಕೊಂಡರು. ಬೆಳೆ ಎಲ್ಲಾ ಒಣಗಿ ಹೋಗಿದೆ ಸರ್, ಎಕರೆಗೆ 30 ಸಾವಿರ ಕರ್ಚು ಮಾಡಿದ್ದೇವೆ. ತುಂಗಭದ್ರಾ ಡ್ಯಾಂ ಪಕ್ಕದಲ್ಲೇ ಇದ್ದರೂ ನಮಗೆ ನೀರಿಲ್ಲ. ಸರ್ಕಾರ ನಮ್ಮ ಕೆರೆಗಳಿಗೆ ನೀರು ತುಂಬಿಸಬೇಕು. ಆಗ ಬೋರ್‌ವೆಲ್‌ಗಳಲ್ಲಿ ನೀರು ಬರುತ್ತದೆ. ರೈತರ ಸ್ಥಿತಿ ಶೋಚನೀಯವಾಗಿದೆ. ರೈತರಿಗೆ ಪರಿಹಾರ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ ಎಂದು ಮನವಿ ಮಾಡಿದರು.
ಇದನ್ನೂ ಓದಿ | Karnataka Weather : ನಾಳೆ ಇಲ್ಲೆಲ್ಲ ಸೂರ್ಯ ಮರೆಯಾಗಿ ಧರೆಗೆ ಅಪ್ಪಳಿಸುವ ಮಳೆ
ಹೊಸಪೇಟೆ ತಾಲೂಕಿನ ಹಂಪಾಪಟ್ಟಣದ ರೈತರೊಬ್ಬರು ಮಾತನಾಡಿ, ಪ್ರತಿ ವರ್ಷ ಮಳೆ – ಬೆಳೆ ಚೆನ್ನಾಗಿ ಆಗುತ್ತಿತ್ತು. ಈ ವರ್ಷ ಸಮರ್ಪಕವಾಗಿ ಮಳೆ ಬರಲೇ ಇಲ್ಲ. ಬಿತ್ತನೆ ಮಾಡಿದ ಮೇಲೆ ಮಳೆ ಬಾರಲೇ ಇಲ್ಲ. ಹೀಗಾಗಿ ಮೆಕ್ಕೆಜೋಳ ಎಲ್ಲಾ ಒಣಗಿ ಹೋಗಿದೆ. ಸಾಲ ಮಾಡಿ ಎಕರೆಗೆ 30 ರಿಂದ 35 ಸಾವಿರ ರೂ. ಖರ್ಚು ಮಾಡಿದ್ದೇವೆ. ಈಗ ಸಾಲ ತೀರಿಸೋದು ಹೇಗೆ ಅನ್ನೋದೇ ಗೊತ್ತಾಗುತ್ತಿಲ್ರೀ… ಬಹಳ ಕಂಕಷ್ಟದ ಸ್ಥಿತಿಗೆ ಬಂದಿದ್ದೇವೆ. ಸರ್ಕಾರ ಹೆಚ್ಚಿನ ಪರಿಹಾರ ಕೊಟ್ಟು ರೈತರನ್ನು ಉಳಿಸಬೇಕು ಎಂದು ಕೋರಿದರು.
ಚಿತ್ರದುರ್ಗದಲ್ಲಿ ವೀಕ್ಷಣೆ
ಚಿತ್ರದುರ್ಗ: ಜಿಲ್ಲೆಯ ವಿಜಾಪುರದ ಬಳಿಯಿರುವ ಸೌಭಾಗ್ಯಮ್ಮ, ಮಲ್ಲಿಕಾರ್ಜುನಯ್ಯ ಎಂಬುವವರ ಮೆಕ್ಕೆಜೋಳ, ರಾಗಿ ಬೆಳೆಯನ್ನು ಬರ ಅಧ್ಯಯನ ತಂಡ ವೀಕ್ಷಿಸಿತು. ಲಕ್ಷ್ಮಿ ಸಾಗರದ ರೈತ ಕುಬೆಂದ್ರ ಹೊಲಗಳಿಗೆ ಭೇಟಿ ನೀಡಿತ್ತು. 8 ಎಕರೆಯಲ್ಲಿದ್ದ ಮೆಕ್ಕೆಜೋಳ, ಮಳೆ ಇಲ್ಲದೆ ಸಂಪೂರ್ಣ ಒಣಗಿತ್ತು. ಹೀಗಾಗಿ ಕೇಂದ್ರ ಜಲ ಆಯೋಗದ ನಿರ್ದೇಶಕ ಅಶೋಕ್ ಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿತು.
ಬಾಗಲಕೋಟೆ ಜಿಲ್ಲೆಯ ಹಲವೆಡೆ ಭೇಟಿ
ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿತ್ತು. ಹೊಸೂರು ಗ್ರಾಮದ ದಾವಲಸಾಬ್ ಹುಸೇನ್ ಸಾಬ್ ಕಾಸಿನಕುಂಟೆ ಅವರ ಜಮೀನಿನಲ್ಲಿ ಎರಡು ಎಕರೆಯಲ್ಲಿ ಬೆಳೆದಿರುವ ಕಬ್ಬು ಬೆಳೆ ಮಳೆಯಿಲ್ಲದೆ ನಾಶವಾಗಿದೆ. ಹೀಗಾಗಿ ಕೇಂದ್ರ ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಜಿತ್ ಕುಮಾರ್ ಸಾಹು ನೇತೃತ್ವದ ತಂಡ ಕಮರಿರುವ ಕಬ್ಬು ಬೆಳೆ ವೀಕ್ಷಣೆ ಮಾಡಿತು. ನಂತರ ಇನ್ನು ಚಿಟಗಿನಕೊಪ್ಪದ ಶಿವರಾಯಪ್ಪ ಮುಳ್ಳೂರು ಎಂಬುವರ ಎರಡು ಎಕರೆ ಜಮೀನಿನಲ್ಲಿ ಬೆಳೆದಿರುವ ತೊಗರಿ ಬೆಳೆಯನ್ನು ಅಧಿಕಾರಿಗಳು ವೀಕ್ಷಿಸಿದರು.
ಬಳಿಕ ಹುನಗುಂದ್ ತಾಲೂಕಿನ ಕಂಗಾಲ ಕಡಪಟ್ಟಿ ಗ್ರಾಮದ ರಡ್ಯಾರ ಕೆರೆಗೆ ಬರ ಸಮೀಕ್ಷೆ ತಂಡ ಭೇಟಿ ನೀಡಿ, ಕೂಲಿ ಕಾರ್ಮಿಕರಿಂದ ಕೆರೆ ಹೂಲೆತ್ತುವ ಕಾರ್ಯವನ್ನು ವೀಕ್ಷಣೆ ಮಾಡಿತು. ಅದೇ ರೀತಿ ಜಗಳೂರು ತಾಲೂಕಿನ ದೊಣ್ಣೆಹಳ್ಳಿ ಸೇರಿ ಹಲವು ಕಡೆ ಅಧಿಕಾರಿಗಳು ವೀಕ್ಷಿಸಿದರು. ಜಿಲ್ಲಾಧಿಕಾರಿ ವೆಂಕಟೇಶ್, ಕೃಷಿ, ತೋಟಗಾರಿಕೆ ಇಲಾಖೆ ಸೇರಿ ಹಲವು ಅಧಿಕಾರಿಗಳು ಸಾಥ್ ನೀಡಿದರು.
ಆತ್ಮಹತ್ಯೆ ಶರಣಾಗಿದ್ದ ರೈತನ ಕುಟುಂಬಕ್ಕೆ ಸಾಂತ್ವನ
ಬಳ್ಳಾರಿ: ಸಾಲದ ಹೊರೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಸಂಡೂರು ತಾಲೂಕಿನ ಶ್ರೀರಾಮಶೆಟ್ಟಿ ಹಳ್ಳಿಯ ರೈತ ಕಾಂತಪ್ಪ ಅವರ ಮನೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿತು.
ಮೃತರ ರೈತನ ಕುಟುಂಬಕ್ಕೆ ಧೈರ್ಯ ಹೇಳಿದ ಕೇಂದ್ರ ಬರ ಅಧ್ಯಯನ ತಂಡ, ನಿಮ್ಮ ಜತೆಗೆ ಸರ್ಕಾರ ಇದೆ. ಆತುರದ ನಿರ್ಧಾರ ಕೈಗೊಳ್ಳಬೇಡಿ. ನಿಮ್ಮ ಸಮಸ್ಯೆ ಕುರಿತು ಸರ್ಕಾರಕ್ಕೆ ವರದಿ ನೀಡುತ್ತೇವೆ. ನೀವು ಧೈರ್ಯವಾಗಿ ಇರಿ, ಪರಿಹಾರ ಸಿಗುತ್ತದೆ ಎಂದು ಅಧಿಕಾರಿಗಳು ರೈತನ ಕುಟುಂಬಕ್ಕೆ ಧೈರ್ಯ ಹೇಳಿದರು.
ಇದನ್ನೂ ಓದಿ | CM Siddaramaiah : ನವೆಂಬರ್‌ನಲ್ಲಿ ಜಾತಿ ಗಣತಿ ವರದಿ ಸಲ್ಲಿಕೆ, ಜಾರಿ ಬಗ್ಗೆ ಮುಂದೆ ನಿರ್ಧಾರ ಎಂದ ಸಿಎಂ
ಸಾಲ ಮಾಡಿ ರೈತ ಕಾಂತಪ್ಪ ಬೋರ್‌ವೇಲ್ ಕೊರೆಸಿದ್ದರು. 5 ಲಕ್ಷ ರೂ ಖಾಸಗಿ ಸಾಲ, 1.5 ಲಕ್ಷ ರೂ. ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದರು. ಬೋರ್‌ವೆಲ್‌ನಲ್ಲಿ ನೀರು ಸಿಗದ ಹಿನ್ನೆಲೆಯಲ್ಲಿ ವಿಷ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದರು.