Site icon Vistara News

Drowned in canal : ಹೇಮಾವತಿ ನಾಲೆಯಲ್ಲಿ ಕೊಚ್ಚಿ ಹೋದ ಇಬ್ಬರು ಮಕ್ಕಳು, ಮತ್ತೊಬ್ಬ ಪಾರು

drowned in hemavati canal

ತುಮಕೂರು: ಗುಬ್ಬಿ ತಾಲೂಕಿನ ಇಸ್ಲಾಂಪುರ ಗ್ರಾಮದ ಬಳಿ ಹೇಮಾವತಿ ನಾಲೆಗೆ (Hemavathi Canal) ಬಿದ್ದು ಇಬ್ಬರು ಮಕ್ಕಳು ದುರ್ಮರಣ (Drowned in canal) ಹೊಂದಿದ್ದಾರೆ. ಮಹಮ್ಮದ್ ನಯೀಮ್ (7) ಮಿಸ್ಬಾ ಬಾನು (9) ಮೃತ ದುರ್ದೈವಿಗಳು.

ಮಹಮ್ಮದ್‌ ನಯೀಮ್‌, ಮಿಸ್ಬಾ ಬಾನು, ಮಹ್ಮದ್ ಬಿಲಾಲ್ ಈ ಮೂವರು ಮಕ್ಕಳು ನಾಲೆಗೆ ಬಿದ್ದಿದ್ದರು. ಮೂವರು ಮಕ್ಕಳು ನಾಲೆಗೆ ಬಿದ್ದಿದ್ದನ್ನು ಗಮನಿಸಿದ ಯುವಕನೊಬ್ಬ ಕೂಡಲೇ ಮಹ್ಮದ್ ಬಿಲಾಲ್‌ನನ್ನು ರಕ್ಷಣೆ ಮಾಡಿದ್ದಾನೆ. ಇನ್ನಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.

ಮಕ್ಕಳ ಸಾವಿನ ಸುದ್ದಿ ಕೇಳಿ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

ಮಹ್ಮದ್ ಬಿಲಾಲ್ (10) ಪ್ರಾಣಾಪಾಯದಿಂದ ಪಾರಾಗಿದ್ದು, ನಾಲೆಯಲ್ಲಿ ಕೊಚ್ಚಿ ಹೋಗಿರುವ ಮಿಸ್ಬಾ ಬಾನುವಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಗುಬ್ಬಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಶಾಲಾ ವಾಹನದಿಂದ ಇಳಿದ ವಿದ್ಯಾರ್ಥಿ ಅದೇ ವಾಹನಕ್ಕೆ ಬಲಿ

ಆನೇಕಲ್: ಶಾಲಾ ಬಸ್ ಹರಿದು ವಿದ್ಯಾರ್ಥಿಯೊಬ್ಬ ದಾರುಣ ಸಾವು ಕಂಡ ಘಟನೆ (student death) ಆನೇಕಲ್ ತಾಲೂಕಿನ ಎಂ.ಮೇಡಹಳ್ಳಿ ಗ್ರಾಮದಲ್ಲಿ ನಡೆದಿದೆ. ದಿವ್ಯಾಂಶು ಸಿಂಗ್ ಎಂಬ ಎಂಟು ವರ್ಷದ ಬಾಲಕ ಮೃತ ದುರ್ದೈವಿ. ಈತ ಆನೇಕಲ್ ತಾಲೂಕಿನ ಬಿದರಗೆರೆಯ ಎಸ್ಎಸ್ವಿ ಶಾಲೆಯಲ್ಲಿ 2ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ನಿನ್ನೆ ಸಂಜೆ 6 ಗಂಟೆಗೆ ಶಾಲೆಯಿಂದ ಟ್ಯೂಷನ್ ಮುಗಿಸಿ ಮನೆಗೆ ಬರುವಾಗ ದುರ್ಘಟನೆ ನಡೆದಿದೆ.

ಮೇಡಹಳ್ಳಿಯ ಸಾಯಿ ಪ್ಯಾರಡೈಸ್ ಬಡಾವಣೆಯಲ್ಲಿ ಬಾಲಕನ ಕುಟುಂಬ ವಾಸವಿದೆ. ಎಂದಿನಂತೆ ಶಾಲೆಗೆ ಹೋಗಿ ಸಂಜೆ ಶಾಲಾ ಬಸ್‌ನಲ್ಲಿಯೇ ಈತ ಹಿಂತಿರುಗುತ್ತಿದ್ದ. ನಿನ್ನೆ ಸಂಜೆ 6 ಗಂಟೆಯ ಸುಮಾರಿಗೆ ಶಾಲಾ ವಾಹನದಲ್ಲಿ ಮನೆ ಸಮೀಪ ಇಳಿದಿದ್ದ ಬಾಲಕ, ಆ ವಾಹನದ ಮುಂಭಾಗದಿಂದಲೇ ರಸ್ತೆ ದಾಟಿ ಮನೆಯ ಕಡೆಗೆ ಹೋಗಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಚಾಲಕ ಅಜಾಗರೂಕತೆಯಿಂದ ವಾಹನವನ್ನು ಮುಂದೆ ಚಲಿಸಿದ್ದು, ಮುಂದಿದ್ದ ಬಾಲಕನ ಮೇಲೆ ಬಸ್‌ ಹರಿದಿದೆ. ಚಕ್ರಕ್ಕೆ ಸಿಲುಕಿ ಬಾಲಕ ದಾರುಣ ಸಾವು ಕಂಡಿದ್ದಾನೆ.

ಇದನ್ನೂ ಓದಿ: Missing Case : ಇದ್ದಕ್ಕಿದ್ದಂತೆ ಬಸದಿಯಿಂದ ಜೈನ ಮುನಿ ನಾಪತ್ತೆ! ಭಕ್ತರಲ್ಲಿ ಆತಂಕ

ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವಾಹನಕ್ಕೆ ಕಂಡಕ್ಟರ್‌ ನೇಮಿಸದೆ ಶಾಲಾ ಆಡಳಿತ ಮಂಡಳಿ ನಿರ್ಲಕ್ಷ್ಯ ತೋರಿದೆ ಎಂದು ಪೋಷಕರು ಆಪಾದಿಸಿದ್ದಾರೆ. ಕಿರಿಯ ಪ್ರಾಥಮಿಕ ಶಾಲಾ ಮಕ್ಕಳನ್ನು ಜೋಪಾನವಾಗಿ ವಾಹನದಿಂದ ಇಳಿಸಿ, ಅವರು ರಸ್ತೆಯ ಇನ್ನೊಂದು ಕಡೆಗೆ ಹೋಗುವುದಿದ್ದರೆ ಜಾಗರೂಕತೆಯಿಂದ ವಾಹನ ಸಿಬ್ಬಂದಿ ರಸ್ತೆ ದಾಟಿಸಿ ಬರಬೇಕು. ಆದರೆ ಈ ಶಾಲಾ ಬಸ್‌ನಲ್ಲಿ ಡ್ರೈವರ್ ಹೊರತುಪಡಿಸಿ ಕ್ಲೀನರ್ ಸೇರಿದಂತೆ ಬೇರೆ ಯಾವ ಸಿಬ್ಬಂದಿಯೂ ಇರಲಿಲ್ಲ. ಶಾಲಾ ಆಡಳಿತ ಮಂಡಳಿ ಹಾಗೂ ಚಾಲಕನ ಬೇಜವಾಬ್ದಾರಿಗೆ ಕಂದಮ್ಮ ಬಲಿಯಾಗಿದೆ. ಬಾಲಕನ ಮೃತದೇಹವನ್ನು ಅತ್ತಿಬೆಲೆ ಆಕ್ಸ್‌ಫರ್ಡ್ ಆಸ್ಪತ್ರೆಗೆ ರವಾನಿಸಲಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ (accident case) ದಾಖಲಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version