ಗದಗ/ತುಮಕೂರು: ಪ್ರತ್ಯೇಕ ಕಡೆಗಳಲ್ಲಿ ಯುವಕರು ನೀರುಪಾಲಾದ ಘಟನೆ ನಡೆದಿದೆ. ಜಾನುವಾರು ಮೈ ತೊಳೆಯಲು ಹೋಗಿದ್ದ ಯುವಕ ನೀರುಪಾಲಾದ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಶಿರೋಳ ಗ್ರಾಮದಲ್ಲಿ ನಡೆದಿದೆ.
ಅನಿಲ್ ದ್ಯಾಮಪ್ಪ ರಂಗನ್ನವರ್ (22) ಎಂಬಾತ ನೀರುಪಾಲಾದ ಯುವಕನಾಗಿದ್ದಾನೆ. ಅನಿಲ್ ಜಾನುವಾರು ತೊಳೆಯಲೆಂದು ಮಲಪ್ರಭಾ ನದಿಗೆ ಇಳಿದಿದ್ದ. ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಹಸೀಲ್ದಾರ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿದ್ದು, ಮೃತದೇಹವನ್ನು ಹೊರತೆಗೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನದಿ ಸಮೀಪ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ.
ಇದನ್ನೂ ಓದಿ: Murder Case : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತನ ಬರ್ಬರ ಹತ್ಯೆ
ನೀರಲ್ಲಿ ಕೊಚ್ಚಿ ಹೋದ ಬಾಲಕರು
ತುಮಕೂರು ತಾಲೂಕಿನ ಅರೆಯೂರು ಬಳಿಯ ದೇವರಹಟ್ಟಿಯಲ್ಲಿ ಎಮ್ಮೆ ತೊಳೆಯಲು ಹೋಗಿ ಇಬ್ಬರು ಬಾಲಕರು ನೀರುಪಾಲಾಗಿದ್ದಾರೆ. ಮನೋಜ್ (12) ಹಾಗೂ ಚಿರಂತ್ (14) ಮೃತ ದುರ್ದೈವಿಗಳು.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಮೃತದೇಹವನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಹೆಬ್ಬೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ.
ಮುರುಡೇಶ್ವರ ಕಡಲತೀರದಲ್ಲಿ ಕೊಚ್ಚಿ ಹೋಗುತ್ತಿದ್ದ ಮೂವರ ರಕ್ಷಣೆ
ಕಾರವಾರ: ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಮುರುಡೇಶ್ವರಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಹೀಗೆ ಪ್ರವಾಸಕ್ಕೆ ಬಂದಿದ್ದ ಯುವಕರು ಸಮುದ್ರದಲ್ಲಿ ಈಜಲು ಹೋಗಿ (Youths Drowned) ನೀರುಪಾಲಾಗುತ್ತಿದ್ದವರನ್ನು ರಕ್ಷಣೆ ಮಾಡಲಾಗಿದೆ. ಬಸವನಗೌಡ ಪಾಟೀಲ್(22), ಶರಣು ಇಂಚಲ್(21), ರವಿಚಂದ್ರನ್(22) ಅಪಾಯದಿಂದ ಪಾರಾದವರು.
ದಸರಾ ರಜೆ ಹಿನ್ನೆಲೆ ಪ್ರವಾಸಕ್ಕೆಂದು ಬಾಗಲಕೋಟೆಯಿಂದ ಮುರುಡೇಶ್ವರಕ್ಕೆ ಬಂದಿದ್ದರು. ಈ ವೇಳೆ ಸಮುದ್ರಕ್ಕಿಳಿದಿದ್ದ ಯುವಕರು ಅಪಾಯಕ್ಕೆ ಸಿಲುಕು ನೀರುಪಾಲಾಗುತ್ತಿದ್ದರು, ಇದನ್ನೂ ಗಮನಿಸಿದ ಲೈಫ್‌ಗಾರ್ಡ್ ಸಿಬ್ಬಂದಿ ಶಶಿ, ಪಾಂಡು, ರಾಮಚಂದ್ರ ಕೂಡಲೇ ಅವರನ್ನು ರಕ್ಷಣೆ ಮಾಡಿದ್ದಾರೆ.
ಅಸ್ವಸ್ಥಗೊಂಡಿದ್ದ ಯುವಕನಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಅದೃಷ್ಟವಶಾತ್ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ