Site icon Vistara News

ಕೆರೆಗೆ ಕೈ ಕಾಲು ತೊಳೆದುಕೊಳ್ಳಲು ಹೋಗಿದ್ದ ವಿಶೇಷಚೇತನ; ಕಾಲು ಜಾರಿ ಬಿದ್ದು ಸಾವು

#image_title

ಆನೇಕಲ್: ಇಲ್ಲಿನ ಬಿದರಗೆರೆ ಕೆರೆಯಲ್ಲಿ ವಿಶೇಷಚೇತನ ಯುವಕನೊಬ್ಬ ಕಾಲು ಜಾರಿ ಕೆರೆಗೆ (Drowned) ಬಿದ್ದು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಬಿದರಗೆರೆ ಗ್ರಾಮದ ನಿವಾಸಿ ಮಹೇಶ್ ಮೃತ ದುರ್ದೈವಿ.

ಮಹೇಶ್‌ ಕೆರೆ ದಡದಲ್ಲಿ ಚಪ್ಪಲಿ ಬಿಟ್ಟು ಕೈಕಾಲು ತೊಳೆದುಕೊಳ್ಳಲು ಹೋಗಿದ್ದ. ಈ ವೇಳೆ ಕಾಲು ಜಾರಿ ಕೆರೆಗೆ ಬಿದ್ದಿದ್ದಾನೆ. ನೀರಿನಿಂದ ಹೊರಬರಲು ಆಗದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಗ್ರಾಮಸ್ಥರು ಕೆರೆಯ ದಡದಲ್ಲಿದ್ದ ಚಪ್ಪಲಿಯನ್ನು ಕಂಡು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರ ಸಹಾಯದಿಂದ ಮೃತದೇಹವನ್ನು ಹೊರತೆಗೆದಿದ್ದು, ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಆನೇಕಲ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ಸ್ನೇಹಿತರೊಂದಿಗೆ ತಲಕಾಡಿಗೆ ಹೋಗಿದ್ದ ಬಾಲಕರಿಬ್ಬರು ನೀರುಪಾಲು

ಮೈಸೂರು: ತಿ.ನರಸೀಪುರ ತಾಲೂಕಿನ ತಲಕಾಡಿನ ಕಾವೇರಿ ನಿಸರ್ಗ ಧಾಮದಲ್ಲಿ ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರ ಮೃತಪಟ್ಟಿದ್ದಾರೆ. ಜತೆಗಿದ್ದ ಆರು ಮಂದಿಯನ್ನು ರಕ್ಷಣೆ ಮಾಡಲಾಗಿದೆ.

ಲೋಹಿತ್ (15), ಯತೀಶ್ (13) ಮೃತ ಬಾಲಕರು ಎಂದು ಗುರುತಿಸಲಾಗಿದೆ. ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ರವಿಗೌಡ ಎಂಬುವರ ಪುತ್ರರು ಇವರಾಗಿದ್ದಾರೆ. ಈ ಬಾಲಕರು ಸ್ನೇಹಿತರ ಜತೆ ಬೆಂಗಳೂರಿನಿಂದ ತಲಕಾಡಿಗೆ ಆಗಮಿಸಿದ್ದರು. ಈ ವೇಳೆ ಈಜಲು ನದಿಗೆ ಇಳಿದಿದ್ದ ಬಾಲಕರು, ಆಳವಿದ್ದ ಕಡೆ ತೆರಳಿದ್ದೇ ಅವಘಡಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಈ ವೇಳೆ ಅಲ್ಲೇ ಇದ್ದ ಅಂಬಿಗರಿಂದ 6 ಬಾಲಕರನ್ನು ರಕ್ಷಣೆ ಮಾಡಲಾಗಿದೆ. ಕೊನೆಗೆ ಈ ಇಬ್ಬರು ಬಾಲಕರು ಪತ್ತೆಯಾಗಿರಲಿಲ್ಲ. ಬಳಿಕ ಶವವಾಗಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸವಕಲ್ಯಾಣದಲ್ಲಿ ಬೀದಿನಾಯಿ ಹಾವಳಿ; 15ಕ್ಕೂ ಹೆಚ್ಚು ಜನರಿಗೆ ಗಾಯ

ಬಸವಕಲ್ಯಾಣ: ಬೀದಿನಾಯಿಯೊಂದರ ಹಾವಳಿ (Stray dog) ಮಿತಿಮೀರಿದ್ದು, ತಾಲೂಕಿನ ವಿವಿಧೆಡೆ ಕಳೆದ ಎರಡು ವಾರದಲ್ಲಿ 15ಕ್ಕೂ ಹೆಚ್ಚು ಜನರಿಗೆ ಕಚ್ಚಿ (Bitten) ಗಾಯಗೊಳಿಸಿರುವ ಘಟನೆ ಸೋಮವಾರ ಬೆಳಕಿಗೆ ಬಂದಿದೆ.

ತಾಲೂಕಿನ ನಾರಾಯಣಪುರ, ನಾರಾಯಣಪುರವಾಡಿ ಶಿವಪುರ‌ ಸೇರಿದಂತೆ ಐದಕ್ಕೂ ಹೆಚ್ಚು ಗ್ರಾಮಗಳ ಸುಮಾರು 15ಕ್ಕೂ ಹೆಚ್ಚು ಜನರಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದ್ದು, ಗಾಯಗೊಂಡವರು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಕಳೆದ ಎರಡು ವಾರದಿಂದ ದಿನಕ್ಕೆ ಇಬ್ಬರನ್ನಾದರೂ ಬೀದಿ ನಾಯಿಯು ಕಚ್ಚಿ ಗಾಯಗೊಳಿಸುತ್ತಿದ್ದು, ನಾಯಿಗೆ ಹುಚ್ಚು ಹಿಡಿದಿರುವ ಹಿನ್ನೆಲೆಯಲ್ಲಿ ಈ ರೀತಿ ವರ್ತಿಸುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಬೀದಿ ನಾಯಿ ಉಪಟಳವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೂ ಕೂಡಾ ಬೀದಿ ನಾಯಿಗಳ ನಿಯಂತ್ರಣಕ್ಕೆ ಬಸವಕಲ್ಯಾಣ ನಗರ‌ಸಭೆ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮುಂದಾಗದಿರುವುದಕ್ಕೆ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಮನೆ ಬಳಿ ಆಟವಾಡುವ ಚಿಕ್ಕ ಮಕ್ಕಳ ಮೇಲೂ ದಾಳಿ ನಡೆಸಿ ಕಚ್ಚಿ ಗಾಯಗೊಳಿಸುತ್ತಿದೆ, ನಾಯಿಯ ಕಾಟದಿಂದಾಗಿ ರಸ್ತೆಯಲ್ಲಿ ಮಹಿಳೆಯರು, ವೃದ್ಧರು ಓಡಾಡಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.

ಇದನ್ನೂ ಓದಿ: UPSC Result 2022 : ಯುಪಿಎಸ್‌ಸಿ ಫಲಿತಾಂಶ ಪ್ರಕಟ; ಇಷಿತಾ ಕಿಶೋರ್‌ ಟಾಪರ್

ಜಾನುವಾರುಗಳನ್ನು ಬಿಡದ ಬೀದಿನಾಯಿಯು ಏಕಾಏಕಿ ದಾಳಿ ನಡೆಸುತ್ತಿರುವುದರಿಂದ ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಜನರ ಮೇಲೆ ದಾಳಿ ನಡೆಸುತ್ತಿರುವ ಬೀದಿ ನಾಯಿ ನಿಯಂತ್ರಣಕ್ಕೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.‌

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version