ಬೆಂಗಳೂರು: ಡಗ್ಸ್ ದಂಧೆಯು (Drug Case) ಟೆರರಿಸಂ ರೀತಿಯಲ್ಲಿ ಬೇರೂರಿದೆ. ಬೆಂಗಳೂರಿಗರನ್ನು ನಶೆಗೆ ತಳ್ಳಿ ಮಾದಕಲೋಕವನ್ನು ಸೃಷ್ಟಿ ಮಾಡುತ್ತಿರುವವರ ವಿರುದ್ಧ ಖಾಕಿ ಪಡೆ ತೊಡೆ ತಟ್ಟಿ ನಿಂತಿದೆ. ಸದ್ಯ ಸಿಸಿಬಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬಿಹಾರ್ ಮೂಲದ ಡ್ರಗ್ ಪೆಡ್ಲರ್ ಅರೆಸ್ಟ್ ಆಗಿದ್ದಾನೆ.
ಸಿಸಿಬಿಯ ನಾರ್ಕೋಟಿಕ್ ವಿಂಗ್ ಅಧಿಕಾರಿಗಳು ಡ್ರಗ್ ಪೆಡ್ಲರ್ ಅಖಿಲೇಶ್ ಕುಮಾರ್ ಎಂಬಾತನನ್ನು ಬಂಧನ ಮಾಡಿದ್ದಾರೆ. ಅಂದಹಾಗೇ ರಿಮೋಟ್ ರೌಡಿಸಂನಂತೆ ಈತ ರಿಮೋಟ್ ಡ್ರಗ್ ಪೆಡ್ಲರ್ ಆಗಿ ಕೆಲಸ ಮಾಡುತ್ತಿದ್ದ. ಕಸ್ಟಮರ್ ಟು ಡ್ರಗ್ ಪೆಡ್ಲರ್ ಕಾನ್ಸೆಪ್ಟ್‌ನಲ್ಲಿ ಪೆಡ್ಲರ್‌ನ ಜಾಲ ಹುಡುಕುತ್ತಾ ಹೊರಟ ಸಿಸಿಬಿ ತಂಡ ಬಿಹಾರ್‌ಗೆ ತಲುಪಿತ್ತು.
ಬಿಹಾರದ ಗಲ್ಲಿಯಲ್ಲಿ ಕೂತು ಬೆಂಗಳೂರು ನಗರದಲ್ಲಿ ಅಖಿಲೇಶ್ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ. ಈತ ಇದೇ ಮೊದಲೇನಲ್ಲ ಹಲವರು ಬಾರಿ ಪೊಲೀಸರಿಗೆ ಸಿಕ್ಕಿ ಬಿದ್ದು, ಜೈಲಿಗೆ ಹೋಗಿ ಹೊರ ಬಂದಿದ್ದ. ಆದರೆ ಪೊಲೀಸರ ಭಯ ಇಲ್ಲದೆ ತನ್ನ ದಂಧೆಯನ್ನು ಮುಂದುವರೆಸಿದ್ದ.
ಈ ಅಖಿಲೇಶ್ 2018ರಿಂದಲೂ ನಿರಂತರವಾಗಿ ಡ್ರಗ್ ಪೆಡ್ಲಿಂಗ್ ಮಾಡಿಕೊಂಡು ಬಂದಿದ್ದ ಹಿನ್ನೆಲೆಯಲ್ಲಿ ರೂಢಿಗತ ಅಪರಾಧಿ (Habitual Offender) ಎನಿಸಿಕೊಂಡಿದ್ದ. ಹೀಗಾಗಿ ಎನ್‌ಡಿಪಿಎಸ್ ಆಕ್ಟ್‌ನ ಜತೆ ವಿಶೇಷ ಪಿಟ್ ಕಾಯ್ದೆಯನ್ನೂ ಸೇರಿಸಿ ಸಿಸಿಬಿ ಅಧಿಕಾರಿಗಳು ಜೈಲಿಗಟ್ಟಿದ್ದಾರೆ .
ಕೆಲಸಗಾರರನ್ನು ಹೊಂದಿದ್ದ ಅಖಿಲೇಶ್
ಬಿಹಾರದಲ್ಲಿಯೇ ಕೂತು ಕಾರ್ಯ ನಿರ್ವಹಿಸುವ ಅಖಿಲೇಶ್ ಈತನ ಕಾರ್ಯ ವೈಖರಿಯೇ ಬೇರೆ. ಈತ ಸಂಬಳಕ್ಕೆ ಎಂಟು ಜನರನ್ನು ಇಟ್ಟುಕೊಂಡಿದ್ದ. ಒಬ್ಬೊಬ್ಬರಿಗೂ ತಿಂಗಳಿಗೆ 30 ಸಾವಿರ ಸಂಬಳ ಕೊಡುತ್ತಿದ್ದ. ಮಾತ್ರವಲ್ಲದೆ ಬಾಗಲೂರು ಬಳಿ ಬಾಡಿಗೆ ಮನೆ ಕೂಡ ಮಾಡಿ ಕೊಟ್ಟಿದ್ದ. ಆ ಎಂಟು ಮಂದಿ ಅಖಿಲೇಶ್ ಹೇಳಿದ ಕಡೆಗೆ ಡ್ರಗ್ ಸಪ್ಲೈ ಮಾಡುತ್ತಿದ್ದರು.
ಕೆಲಸಗಾರರು ಯಾರಿಗೆ ಯಾವ ಸ್ಥಳದಲ್ಲಿ ಡ್ರಗ್ಸ್ ಕೊಡಬೇಕು, ಕೋಡ್ ವರ್ಡ್ ಏನು ಎಂಬುದನ್ನು ಅಖಿಲೇಶ್ ನಿರ್ಧರಿಸುತ್ತಿದ್ದ. ಇನ್ನು ಪೊಲೀಸರಿಗೆ ತಿಳಿಯಬಾರೆಂದು ಫುಡ್ ಡೆಲಿವರಿ ಬಾಯ್‌ಗಳಂತೆ ಹೋಗಿ ಡ್ರಗ್ ಸಪ್ಲೈ ಮಾಡುತ್ತಿದ್ದರು. ಜತೆಗೆ ಅಖಿಲೇಶ್ ಬಿಹಾರದಿಂದ ಬೆಂಗಳೂರಿಗೆ ಗಾಂಜಾ ಹಾಗೂ ಎಂಡಿಎಂಎ ಕಳುಹಿಸುತ್ತಿದ್ದ. ಜತೆಗೆ ಲೋಕಲ್ ಹುಡುಗರನ್ನು ಬಿಟ್ಟು ಡ್ರಗ್ ಸಿಂಡಿಕೇಟ್ ನಡೆಸುತ್ತಿದ್ದ. ಸದ್ಯ ಸಿಸಿಬಿ ಬಲೆಗೆ ಬಿದ್ದಿರುವ ಈತನ ವಿರುದ್ಧ ತನಿಖೆಯನ್ನು ನಡೆಸಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.