ಬೆಂಗಳೂರು: ಇಲ್ಲಿನ ಹಲಸೂರು ಸಮೀಪ ಪ್ರೀತಿಸಿದ ಹುಡುಗಿ ತನ್ನನ್ನು ಪೊಲೀಸರಿಗೆ ಹಿಡಿದುಕೊಟ್ಟಳು ಎಂಬ ಕಾರಣಕ್ಕೆ ಪಾಗಲ್ ಪ್ರೇಮಿಯೊಬ್ಬ (Drug peddler revenge) ಸೇಡು ತೀರಿಸಿಕೊಂಡಿದ್ದಾನೆ. ಪ್ರೇಯಸಿಯ ಸ್ಕೂಟರ್‌ಗೆ ಬೆಂಕಿ ಹಾಕುವ ಮೂಲಕ ಆಕ್ರೋಶ ಹೊರಹಾಕಿದ್ದಾನೆ.
ವಿಕ್ರಂ ಎಂಬಾತ ಮೂರು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಜತೆಗೆ ಮಡಿವಾಳ ಸುತ್ತಮುತ್ತ ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ವಿಷಯವೂ ಪ್ರೇಯಸಿಗೆ ತಿಳಿದಿತ್ತು. ಹೀಗಾಗಿ ಕೆಲವು ತಿಂಗಳ ಹಿಂದೆ ವಿಕ್ರಂನನ್ನು ಮಡಿವಾಳ ಪೊಲೀಸರು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳಿಸಿದ್ದರು. ಆದರೆ, ಜೈಲಿಗೆ ಹೋಗಿದ್ದ ವಿಕ್ರಂ ತಾನು ಪೊಲೀಸರಿಗೆ ಸಿಕ್ಕಿ ಬೀಳಲು ತನ್ನ ಪ್ರೇಯಸಿಯೇ ಕಾರಣ. ಆಕೆಯೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆಂದು ಕೋಪಗೊಂಡಿದ್ದ.
ಕೆಲವು ದಿನಗಳ ಹಿಂದೆ ಜೈಲಿನಿಂದ ಬಿಡುಗಡೆಯಾಗಿದ್ದ ವಿಕ್ರಂ, ತನ್ನ ಪ್ರೇಯಸಿ ಮನೆ ಸಮೀಪ ಬಂದು ಆಕೆಯ ಮೇಲಿದ್ದ ಕೋಪವನ್ನೆಲ್ಲ ಸ್ಕೂಟರ್ ಮೇಲೆ ಪ್ರದರ್ಶಿಸಿ, ಸ್ಕೂಟರ್‌ಗೆ ಬೆಂಕಿ ಹಚ್ಚಿ ಪರಾರಿ ಆಗಿದ್ದಾನೆ. ವಿಕ್ರಂ ಪ್ರೇಯಸಿ ವಾಹನಕ್ಕೆ ಬೆಂಕಿ ಹಾಕಿ ಪರಾರಿ ಆಗಿರುವ ದೃಶ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಯುವತಿ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಹಲಸೂರು ಪೊಲೀಸರು, ಸಿಸಿ ಕ್ಯಾಮೆರಾದ ದೃಶ್ಯಾವಳಿ ಆಧಾರದ ಮೇಲೆ ಆರೋಪಿ ವಿಕ್ರಂನನ್ನು ಬಂಧಿಸಿ ಮತ್ತೆ ಜೈಲಿಗಟ್ಟಿದ್ದಾರೆ.
ಇದನ್ನೂ ಓದಿ | DK Shivakumar | ಕುಕ್ಕರ್ ಬ್ಲಾಸ್ಟ್ ಆರೋಪಿಯನ್ನು ಭಯೋತ್ಪಾದಕ ಅಂದಿದ್ದೇಕೆ? ಡಿಕೆಶಿ ಪ್ರಶ್ನೆಗೆ ಬಿಜೆಪಿ ಆಕ್ರೋಶ