Site icon Vistara News

Drugs Case : ಗಾಂಜಾ ರಿಕವರಿ ಕೇಸ್‌; ಒರಿಸ್ಸಾದಲ್ಲಿ ಜೈಲುಪಾಲಾಗಿದ್ದ ಕರ್ನಾಟಕ ಪೊಲೀಸ್‌ ರಿಲೀಸ್‌!

cannabis recovery case Karnataka police released from jail in Orissa

ಆನೇಕಲ್: ಗಾಂಜಾ ರಿಕವರಿ (Drugs Case) ಮಾಡಿ ಆರೋಪಿಗಳನ್ನು ಬಂಧಿಸಲು ಹೋಗಿದ್ದ ಜಿಗಣಿ ಪೊಲೀಸರನ್ನೇ (Jigani Police) ಒರಿಸ್ಸಾ ಪೊಲೀಸರು ಬಂಧಿಸಿದ್ದರು. ಇದೀಗ ಒರಿಸ್ಸಾ ಜೈಲಿನಿಂದ ಕೋರ್ಟ್ ಜಾಮೀನು ಪಡೆದು ಕ್ರೈಂ ಪೇದೆ ಆನಂದ್ ಬಿಡುಗಡೆ ಆಗಿದ್ದಾರೆ.

ಆನಂದ್‌ ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಗಾಂಜಾ ಆರೋಪಿಯನ್ನು ಹಿಡಿದು ಕಾಡಿನಿಂದ ಹೊರಗೆ ಕರೆದುಕೊಂಡು ಬರುವಾಗ ಕರ್ನಾಟಕ ಪೊಲೀಸ್‌ರನ್ನು ಒರಿಸ್ಸಾ ಪೊಲೀಸರು ಬಂಧಿಸಿದ್ದರು. ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿಲ್ಲ ಎಂದು ಕ್ರೈಂ ಸಿಬ್ಬಂದಿಯನ್ನು ಬಂಧಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ ಠಾಣೆಯ ಎಸ್‌ಪಿ ಮಾತಿಗೂ ಬೆಲೆ ಕೊಡದ ಒರಿಸ್ಸಾ ಪೊಲೀಸರು, ಅರೆಸ್ಟ್‌ ಮಾಡಿ ಜೈಲಿಗೆ ಕಳುಹಿಸಿದ್ದರು. ಹೀಗಾಗಿ ಕೋರ್ಟ್ ಜಾಮೀನು ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಇದೀಗ ಒಂದು ತಿಂಗಳು ಜೈಲುವಾಸದ ಬಳಿಕ ಜಾಮೀನು ಸಿಕ್ಕಿದೆ. ಜಿಗಣಿ ಪೊಲೀಸರು ಪೇದೆ ಆನಂದ್‌ನನ್ನು ಕರೆದುಕೊಂಡು ಬರಲು ಒರಿಸ್ಸಾಗೆ ತೆರಳಿದ್ದಾರೆ.

ಇದನ್ನೂ ಓದಿ: Train services: ಮಂಗಳೂರಿಗೆ ಇನ್ನು 10 ದಿನ ರೈಲು ಸಂಚಾರ ಬಂದ್‌!

ಏನಿದು ಪ್ರಕರಣ?

ಕಾರ್ಯಾಚರಣೆಯೊಂದರಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಜಿಗಣಿ ಪೊಲೀಸರು ಬಂಧಿಸಿದ್ದರು. ಸಂಜಯ್ ರಾವತ್ ಎಂಬಾತನನ್ನು ಬಂಧಿಸಿದಾಗ ಒರಿಸ್ಸಾದಿಂದ ಗಾಂಜಾ ತಂದಿರುವುದಾಗಿ ಬಾಯಿಬಿಟ್ಟಿದ್ದ. ಅಲ್ಲಿಂದ ಗಾಂಜಾ ಸರಬರಾಜು ಮಾಡುತ್ತಿದ್ದ ಇಬ್ಬರು ಆರೋಪಿಗಳ ಹೆಸರನ್ನು ಹೇಳಿದ್ದ. ಆರೋಪಿಗಳನ್ನು ಬಂಧಿಸಲು ಎಂಟು ಜನರ ತಂಡವನ್ನು ಹಿರಿಯ ಅಧಿಕಾರಿಗಳು ರಚಿಸಿದ್ದರು.

ಆನಂದ್, ಚನ್ನಬಸವ, ದೀಪು, ಎ.ಎಸ್.ಐ ಅಪ್ಪಾಜಿ ಗೌಡರ ನಾಲ್ಕು ಜನರ ತಂಡ ಹಿರಿಯ ಅಧಿಕಾರಿಗಳ ಆದೇಶದ ಮೇಲೆ ಒರಿಸ್ಸಾಗೆ ತೆರಳಿದ್ದರು. ಕಾನ್ಸ್‌ಟೇಬಲ್ ಆನಂದ್ ಫಾರೆಸ್ಟ್ ಒಳಗೆ ಮೊದಲು ತೆರಳಿದ್ದರು. ಇತ್ತ ಮೊದಲೇ ಪ್ಲ್ಯಾನ್ ಮಾಡಿಕೊಂಡು ಕಾದಿದ್ದ ಒರಿಸ್ಸಾ ಪೊಲೀಸರು, ಗಾಂಜಾ ಹಿಡಿದು ಹೊರ ಬರುತ್ತಿದ್ದಂತೆ ವಶಕ್ಕೆ ಪಡೆದುಕೊಂಡಿದ್ದರು.

ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿಗಳಿಗೆ ಪರಿಚಯಸ್ಥನಾಗಿದ್ದ ಬೆಂಗಳೂರಿನ ಶಾಮ್ ಎಂಬಾತನೊಂದಿಗೆ ಆರು ಮಂದಿ ಪೊಲೀಸರು ಹಾಗೂ ಓರ್ವ ಒರಿಸ್ಸಾ ಭಾಷೆ ಮಾತನಾಡುವ ಜಿಗಣಿಯ ಯುವಕನನ್ನು ಕರೆದುಕೊಂಡು ಹೋಗಿದ್ದರು. ಒರಿಸ್ಸಾದಲ್ಲಿನ ಕಾಡಂಚಿನಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಪೊಲೀಸರು ಮಾಹಿತಿಯನ್ನು ಕಲೆ ಹಾಕಿದ್ದರು. ಜಿಗಣಿ ಪೊಲೀಸ್ ಠಾಣೆಯ ಸಿಬ್ಬಂದಿ ಆನಂದ್, ಶ್ಯಾಮ್ ಹಾಗೂ ಜಿಗಣಿಯ ಯುವಕ ಮಾರು ವೇಷದಲ್ಲಿ ಹೋಗಿದ್ದರು. ಗಾಂಜಾ ಖರೀದಿ ಮಾಡುವವರ ನೆಪದಲ್ಲಿ ಕಾಡಂಚಿಗೆ ತೆರಳಿದ್ದರು. ಈ ವೇಳೆ 17 ಕೆ.ಜಿ ಗಾಂಜಾ ವಶಕ್ಕೆ ಪಡೆದು ಕಾಡಿನಿಂದ ಆರೋಪಿಗಳನ್ನು ಬಂಧಿಸಿ ಆನಂದ್ ಕರೆ ತರುತ್ತಿದ್ದರು.

ಈ ಸಂದರ್ಭದಲ್ಲಿ ಒರಿಸ್ಸಾ ಪೊಲೀಸರು ಇವರನ್ನು ಅಡ್ಡಗಟ್ಟಿ ಪ್ರಶ್ನೆ ಮಾಡುತ್ತಿದ್ದಂತೆ ಓರ್ವ ಆರೋಪಿ ಎಸ್ಕೇಪ್ ಆಗಿದ್ದ. ಗಾಂಜಾ ಜತೆಗೆ ಬಂದಿದ್ದರಿಂದ ಪೊಲೀಸ್ ಪೇದೆ ಆನಂದ್ ಹಾಗೂ ಇನ್ನೊಬ್ಬ ಆರೋಪಿಯನ್ನು ಒರಿಸ್ಸಾ ಪೊಲೀಸರು ಬಂಧಿಸಿದ್ದರು. ಈ ವೇಳೆ ತಾವು ಕರ್ನಾಟಕ ಪೊಲೀಸರು ಎಂದು ಹೇಳಿ ದಾಖಲೆ ತೋರಿಸಿದರೂ ಬಿಡದೆ ಒರಿಸ್ಸಾ ಪೊಲೀಸರು ಬಂಧಿಸಿದ್ದರು. ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಿಲ್ಲ ಎನ್ನುವ ಆರೋಪದ ಮೇರೆಗೆ ಪೇದೆ ಆನಂದ್‌ನನ್ನು ಬಂಧಿಸಲಾಗಿತ್ತು. ಸದ್ಯ ಒರಿಸ್ಸಾ ಜೈಲಿನಲ್ಲಿರುವ ಆನಂದ್‌ ಒಂದು ತಿಂಗಳ ಜೈಲುವಾಸ ಅನುಭವಿಸಿ, ಜಾಮೀನು ಪಡೆದು ಹೊರ ಬಂದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version