ಉಡುಪಿ: ಮಾದಕ ದ್ರವ್ಯ ಸೇವನೆ ಮತ್ತು ಮಾರಾಟದ (Drugs case) ವಿಚಾರವಾಗಿ ಪೊಲೀಸ್ ತನಿಖೆ ವೇಳೆ ಸಿಕ್ಕಿ ಬಿದ್ದಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಮಾಹೆ ವಿದ್ಯಾಸಂಸ್ಥೆ ಅಮಾನತು ಮಾಡಿದೆ. ಇತ್ತೀಚಿನ ದಿನಗಳಲ್ಲಿ ಉಡುಪಿ ಮತ್ತು ಮಣಿಪಾಲ ಭಾಗದಲ್ಲಿ ಉಡುಪಿ ಜಿಲ್ಲಾ ಪೊಲೀಸರಿಂದ ಡ್ರಗ್ಸ್ ವಿರುದ್ಧ ಕಾರ್ಯಾಚರಣೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೊರ ರಾಜ್ಯದಿಂದ ಬಂದ ಇಬ್ಬರು ವಿದ್ಯಾರ್ಥಿಗಳು ಡ್ರಗ್ಸ್ ಪೆಡ್ಲಿಂಗ್ ವಿಚಾರದಲ್ಲಿ ಬಂಧನವಾಗಿದ್ದಾರೆ.
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದ ವಿದ್ಯಾರ್ಥಿಗಳಾದ ಬಂಧಿತರು ಮಣಿಪಾಲದ ಪ್ರಸಿದ್ದ ಮಾಹೆ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಅವರು ವಿದ್ಯಾಸಂಸ್ಥೆಗಳಿಗೆ ಇಂತಹ ವಿದ್ಯಾರ್ಥಿಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ. ಇದೇ ರೀತಿ ಜಿಲ್ಲೆಯಲ್ಲಿರುವ ಶಾಲಾ-ಕಾಲೇಜುಗಳಲ್ಲಿ ಇಂತಹ ಡ್ರಗ್ಸ್ ವಿಚಾರದಲ್ಲಿ ಭಾಗಿಯಾದ ವಿದ್ಯಾರ್ಥಿಗಳಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉಡುಪಿ ಎಸ್‌ಪಿ ಮನವಿ ಮಾಡಿದ್ದಾರೆ.
ಕಳೆದ ಆರು ತಿಂಗಳಿನಿಂದ ಇಲಾಖೆ ನಿರಂತರವಾಗಿ ಡ್ರಗ್ಸ್ ವಿರುದ್ಧ ಸಮರ ಸಾರಿದೆ. ಜಿಲ್ಲೆಯಲ್ಲಿ ಪ್ರತಿದಿನಕ್ಕೊಂದರಂತೆ ಡ್ರಗ್ಸ್ ಪ್ರಕರಣಗಳು ದಾಖಲಾಗುತ್ತಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ತಮಗೆ ಅರಿವಿದ್ದೇ ಇಂತಹ ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಕಾಲೇಜಿನವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದರಿಂದ ಉಳಿದ ವಿದ್ಯಾರ್ಥಿಗಳಿಗೆ ಸಂದೇಶ ನೀಡಿದಂತಾಗುತ್ತದೆ ಎಂಬ ನಿಟ್ಟಿನಲ್ಲಿ ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: Karnataka Election: ನಾನು ಪ್ರಚಾರಕ್ಕೆ ಬಳಸಲು ಜನರಿಂದ ಹಣ ಕೇಳಿದ್ದೇನೆ: ಸುನೀಲ್ ಕುಮಾರ್‌ಗೆ ಮುತಾಲಿಕ್ ತಿರುಗೇಟು
ಕಾರಿನಲ್ಲಿ ಅಕ್ರಮ ಗಾಂಜಾ ಸಾಗಾಟ
ಬೀದರ್‌ನ ಬಾಲ್ಕಿ ಸಮೀಪದ ರಾಷ್ಟ್ರೀಯ ಹೆದ್ದಾರಿ ೫೦ ರ ಅಂಬೆಸಾಗ್ವಿ ಬಳಿ ಕಾರಿನಲ್ಲಿ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ವಿಶಾಖಪಟ್ಟಣದಿಂದ ಸೊಲ್ಲಾಪುರ ಕಡೆ ಹೊರಟಿದ್ದ ಕಾರ್ ಮೇಲೆ ದಾಳಿ ಮಾಡಿದ್ದು, ಕಾರು ಮತ್ತು 57.6 ಕೆಜಿ ಸೇರಿ 11 ಲಕ್ಷ 20 ಸಾವಿರ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಬಾಲ್ಕಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.