ಮಂಗಳೂರು: ಮಂಗಳೂರು ಮತ್ತು ಮಣಿಪಾಲವನ್ನು ಕೇಂದ್ರೀಕರಿಸಿ ನಡೆಯುತ್ತಿದ್ದ, ಡಾಕ್ಟರ್ ಮತ್ತು ವೈದ್ಯ ವಿದ್ಯಾರ್ಥಿಗಳೇ ಪ್ರಧಾನವಾಗಿರುವ ಗಾಂಜಾ ಜಾಲವನ್ನು ಹೆಡೆಮುರಿ ಕಟ್ಟಿದ ಮಂಗಳೂರು ಪೊಲೀಸರು ಈಗ ಡ್ರಗ್ಸ್ ಮಾಫಿಯಾದ ವಿರುದ್ಧ ಮುಗಿಬಿದ್ದಿದ್ದಾರೆ. ಹೀಗಾಗಿ ಮತ್ತೆರಡು ಪ್ರಕರಣಗಳು ಬಯಲಿಗೆ ಬಂದಿವೆ.
ಪ್ರಕರಣ ೧: ಸ್ವಿಫ್ಟ್ ಕಾರು ಸಹಿತ ವ್ಯಕ್ತಿಯ ಬಂಧನ
ಮಂಗಳೂರಿನ ಕುಂಟಿಕಾನ ಬಳಿ ಸ್ವಿಫ್ಟ್ ಡಿಸೈರ್ ಕಾರನ್ನು ತಡೆ ಹಿಡಿದ ಪೊಲೀಸರು ಅದರಲ್ಲಿ ೧೦ ಕೆಜಿ ಗಾಂಜಾ ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹತ್ತಿ, ಆರೋಪಿಯನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ವಿಜಯ ಕುಮಾರ್ ಶೆಟ್ಟಿ(24) ಎಂಬಾತ ಬಂಧಿತ. ಆಂಧ್ರ ಪ್ರದೇಶದಿಂದ ಬೆಂಗಳೂರು ಮೂಲಕ ಮಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದ ವೇಳೆ ಈ ಬಂಧನ ನಡೆದಿದೆ. ಆತನಿಂದ ಸ್ವಿಫ್ಟ್ ಕಾರು, ಮೊಬೈಲ್ ಫೋನ್ ಮತ್ತು 5.65 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಬಿ ಪೊಲೀಸರು ಆತನನ್ನು ಬಂಧಿಸಿ ಉರ್ವಾ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ವಿಜಯ ಕುಮಾರ್ ಶೆಟ್ಟಿ ಈ ಹಿಂದೆಯೂ ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಗಾಂಜಾ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ.
ಪ್ರಕರಣ ೨: ಮತ್ತೊಂದು ಚರಸ್ ಮತ್ತು ಗಾಂಜಾ ಕೇಸ್ ಪತ್ತೆ
ಮಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ಪೂರೈಸುತ್ತಿದ್ದ ಗ್ಯಾಂಗ್ ಒಂದನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಉಡುಪಿ ಜಿಲ್ಲೆಯ ಕಾರ್ಕಳದ ಸುಕೇತ್ ಕಾವಾ(33), ತಮಿಳುನಾಡಿನ ಅರವಿಂದ(24), ಉಡುಪಿಯ ಸುನೀಲ್(32) ಬಂಧಿತರು.
ಇವರು ಉತ್ತರ ಪ್ರದೇಶದ ಕುಲ್ಲು ಜಿಲ್ಲೆಯ ಪಾರ್ವತಿ ವ್ಯಾಲಿಯಿಂದ ಗಾಂಜಾ ಮತ್ತು ಚರಸನ್ನು ತಂದು ಮಂಗಳೂರಿನ ಉದ್ಯಮಿಗಳು ಮತ್ತು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದರು.
ಪಾರ್ವತಿ ವ್ಯಾಲಿಯ ಪ್ರದೇಶದ ಹಳ್ಳಿಗಾಡಿನ ಜನರು ನೈಸರ್ಗಿಕವಾಗಿ ಬೆಳೆಯುತ್ತಿದ್ದ ನಿಷೇಧಿತ ಗಾಂಜಾ ಇದಾಗಿದೆ ಎನ್ನಲಾಗಿದೆ. ಗಾಂಜಾವನ್ನೇ ಬಳಸಿಕೊಂಡು ಚರಸ್ ಕೂಡಾ ತಯಾರಿಸಲಾಗುತ್ತಿದೆ. ತಾವು ಟ್ರೆಕ್ಕಿಂಗ್ ಬಂದ ಪ್ರವಾಸಿಗರು ಎಂದು ನಂಬಿಸುತ್ತಿದ್ದ ಈ ತಂಡ ಅಲ್ಲಿನ ಕೃಷಿಕರಿಂದ ಕಡಿಮೆ ಹಣಕ್ಕೆ ಗಾಂಜಾವನ್ನು ಖರೀದಿ ಮಾಡುತ್ತಿತ್ತು. ಬಳಿಕ ರೈಲಿನಲ್ಲಿ ತೆಗೆದುಕೊಂಡು ಬಂದು ಮಂಗಳೂರಿನ ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿತ್ತು. ಬಂಧಿತರಿಂದ 500 ಗ್ರಾಂ ಚರಸ್ ಮತ್ತು ಒಂದು ಕೆ.ಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ | Drugs Mafia | ಇದು ಬರೀ ಮಾದಕ ಲೋಕವಲ್ಲ, ಲಿವಿಂಗ್ ಟುಗೆದರ್, ಸೆಕ್ಸ್ ಬೆರೆತ ವೈದ್ಯ ವಿದ್ಯಾರ್ಥಿಗಳ ಕರಾಳ ಲೋಕ