Site icon Vistara News

Drugs Mafia : ಸಾಗರದಲ್ಲಿ ಡ್ರಗ್ಸ್‌ ಮಾರಾಟ ಯತ್ನ: ಲಾಂಗ್‌ ಸಹಿತ ಇಬ್ಬರ ಅರೆಸ್ಟ್‌, ಕೊಲೆ ಸಂಚೂ ಬಯಲು

sagara drugs

#image_title

ಶಿವಮೊಗ್ಗ: ಕರಾವಳಿಯಲ್ಲಿ ವ್ಯಾಪಕವಾಗಿರುವ ಡ್ರಗ್ಸ್‌ ದಂಧೆ (Drugs Mafia) ಇದೀಗ ಮಲೆನಾಡಿಗೂ ವ್ಯಾಪಿಸಿದೆ. ಮಂಗಳೂರಿನಿಂ ಮಾದಕ ದ್ರವ್ಯಗಳನ್ನು ತಂದು ಸಾಗರದಲ್ಲಿ ಮಾರಲು ಮಂದಾಗಿದ್ದ ತಂಡವೊಂದನ್ನು ಸಾಗರ ನಗರ ಠಾಣೆ ಪೊಲೀಸರು ಹತ್ತಿಕ್ಕಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರಿಗೆ ಇದರ ಹಿಂದಿರುವ ಒಂದು ಕೊಲೆ ಯತ್ನದ ಪ್ಲ್ಯಾನ್‌ ಕೂಡಾ ಬಯಲಾಗಿದೆ.

ಮಂಗಳೂರಿನಿಂದ ಮಾದಕ ವಸ್ತು ತಂದು ಸಾಗರದಲ್ಲಿ ಮಾರಾಟಕ್ಕೆ ಯತ್ನಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಾಗರದ ಅಣಲೆಕೊಪ್ಪ ಬಳಿ ಪೊಲೀಸರು ದಾಳಿ ಸಂಘಟಿಸಿದ್ದರು. ಈ ವೇಳೆ, ಸೃಜನ್ ಶೆಟ್ಟಿ, ತಿಲಕ್ ಎಂಬಿಬ್ಬರನ್ನು ಬಂಧಿಸಲಾಗಿದೆ. ಬಂಧಿತರಿಂದ 1 ಕೆ.ಜಿ. ಮಾದಕ ವಸ್ತು, 4 ಮೊಬೈಲ್, ಸ್ವಿಪ್ಟ್ ಡಿಜೈರ್ ಕಾರು, ಕಾರಿನಲ್ಲಿದ್ದ 8 ಲಾಂಗ್ ವಶಕ್ಕೆ ಪಡೆಯಲಾಗಿದೆ.

ಬಂಧಿತ ಸೃಜನ್ ಶೆಟ್ಟಿ ವಿಚಾರಣೆ ನಂತರ ಓರ್ವನ ಕೊಲೆ ಸಂಚು ಕೂಡಾ ಬಯಲಾಗಿದೆ. ಸಹಚರರ ಜೊತೆ ಸೇರಿ ವ್ಯಕ್ತಿಯೊಬ್ಬನ ಹತ್ಯೆಗೆ ಸೃಜನ್ ಶೆಟ್ಟಿ ಸಂಚು ರೂಪಿಸಿದ್ದ ಎನ್ನಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಲಾಂಗ್ ಇಟ್ಟುಕೊಂಡಿರುವುದು ಪೊಲೀಸರ ವಿಚಾರಣೆಯಿಂದ ತಿಳಿದುಬಂದಿದೆ.

ಆರೋಪಿಗಳ ಬಂಧನ ಮತ್ತು ಲಾಂಗ್‌ಗಳನ್ನು ವಶಪಡಿಸಿಕೊಂಡಿರುವುದರಿಂದ ಕೊಲೆ ಸಂಚು ವಿಫಲಗೊಂಡಂತಾಗಿದೆ. ಆದರೆ, ಆರೋಪಿಗಳು ಯಾರನ್ನು ಕೊಲೆ ಮಾಡಲು ಮುಂದಾಗಿದ್ದರು ಎಂಬ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ. ಪೊಲೀಸರು

ಬಂಧಿತ ಆರೋಪಿಗಳನ್ನು ಸಾಗರ ನ್ಯಾಯಾಲಯಕ್ಕೆ ಒಪ್ಪಿಸಿದ ಪೊಲೀಸರು ಇದೀಗ ಹೆಚ್ಚಿನ ವಿಚಾರಣೆಗಾಗಿ ಸೃಜನ್ ಶೆಟ್ಟಿಯನ್ನು ವಶಕ್ಕೆ ಪಡೆಯಲಿದ್ದಾರೆ.

ಲಾರಿ-ಬೈಕ್‌ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಬಲಿ

ವಿಜಯಪುರ: ಲಾರಿ ಮತ್ತು ಬೈಕ್‌ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ಘಟನೆ ವಿಜಯಪುರ ನಗರದ ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ.

ಚಂದಾಬಾವಡಿ ನಿವಾಸಿ ಉಮರ್ ಬುಡನಸಾಬ್ ಲಾಟಿ ಮೃತಪಟ್ಟಿರುವ ದುರ್ದೈವಿ. ಅವರ ಜತೆಗೆ ಸಹಸವಾರರಾಗಿದ್ದ ಮತ್ತೊಬ್ಬರಿಗೆ ಗಂಭೀರವಾಗಿ ಗಾಯವಾಗಿದೆ. ಲಾರಿ ಚಾಲಕ ಘಟನೆ ನಂತರ ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದು ವಿಜಯಪುರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಯಾಗಿದ್ದು, ಘಟನೆಯ ಬಳಿಕ ಅಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

ಚರಂಡಿ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾರ್ಮಿಕರು ಸಾವು

ದಾವಣಗೆರೆ: ಚರಂಡಿ ಸ್ವಚ್ಛಗೊಳಿಸುತ್ತಿದ್ದ ಇಬ್ಬರು ಕಾರ್ಮಿಕರು ಇದ್ದಕಿದ್ದಂತೆ ಹೊಟ್ಟೆನೋವು ಉಂಟಾಗಿ ಸಾವಿಗೀಡಾದ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಸವನಕೋಟೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಯುಗಾದಿ ಹಬ್ಬದ ಪ್ರಯುಕ್ತ ಗ್ರಾಮದ ಬೀದಿ ಬದಿಯ ಚರಂಡಿ ಸ್ವಚ್ಛಗೊಳಿಸುತ್ತಿದ್ದ ಕಾರ್ಮಿಕರು ಇದ್ದಕ್ಕಿದ್ದಂತೆ ಹೊಟ್ಟೆ ನೋವು ತಲೆದೋರಿ ಅಸ್ವಸ್ಥರಾಗಿದ್ದರು. ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸತ್ಯಪ್ಪ(50), ಮೈಲಪ್ಪ(41) ಮೃತ ಕೂಲಿಕಾರ್ಮಿಕರು.

ಬಸವನಕೋಟೆ ಗ್ರಾಮ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ದೂರಲಾಗಿದೆ. ಕಾರ್ಮಿಕರ ಸಾವಿನ ತನಿಖೆ ನಡೆಸಲು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ Murder case : ದಾಯಾದಿ ಕಲಹ ; ಕಾರು ನಿಲ್ಲಿಸುವ ಗಲಾಟೆ ತಾರಕಕ್ಕೇರಿ ಕೊಲೆಯಲ್ಲಿ ಅಂತ್ಯ

Exit mobile version