ಚಿಕ್ಕಮಗಳೂರು : ಬೈಕ್ ಇಂಡಿಕೇಟರ್ ಆನ್ ಆಗಿದ್ದರಿಂದ ಕುಡುಕ (drunk and drive) ಸವಾರನ ಜೀವ ಉಳಿದಿದೆ. ಭಾನುವಾರ ರಾತ್ರಿ ಸುಮಾರು 11 ಗಂಟೆ ಆಸುಪಾಸು ಆಗಿರಬಹುದು. ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸಬ್ಬೇನಹಳ್ಳಿ ಗ್ರಾಮದ ಸಮೀಪ ಬರುತ್ತಿದ್ದ ಕೆಲ ಸವಾರರಿಗೆ ಕೂಗಳತೆ ದೂರದಲ್ಲಿ ಇಂಡಿಕೇಟರ್ ಆನ್ ಆಗಿ ಕೆಳಗೆ ಬಿದ್ದಿದ್ದ ಬೈಕ್‌ವೊಂದು ಕಂಡಿತ್ತು.
ಅಯ್ಯೋ.. ಬೈಕ್ ಆಕ್ಸಿಡೆಂಟ್ ಆಗಿರಬೇಕು. ಸವಾರ ಬದುಕಿದ್ದನೋ ಏನೋ ಎಂದು ಆತುರದಲ್ಲಿ ಓಡಿಹೋಗಿದ್ದರು. ಹತ್ತಿರ ಹೋಗಿ ನೋಡಿದಾಗ ಬೈಕ್‌ವೊಂದು ರಸ್ತೆಬದಿ ಬಿದ್ದಿತ್ತು. ಸವಾರ ರಸ್ತೆ ಪಕ್ಕಕ್ಕೆ ಬಿದ್ದಿದ್ದ. ಇದೆಲ್ಲ ನೋಡಿದವರಿಗೆ ಬೈಕ್ ಅಪಘಾತವಾಗಿರಬೇಕು ಎಂದುಕೊಂಡಿದ್ದರು. ಹತ್ತಿರ ಹೋಗಿ ನೋಡಿದಾಗ ಸವಾರ ಉಸಿರಾಡುತ್ತಿದ್ದ. ಕೂಡಲೇ ಅಲ್ಲಿದ್ದವರು ಅಪಘಾತವಾಗಿರಬಹುದೆಂದು ಅಂದಾಜಿಸಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿದರು.
ಇದನ್ನೂ ಓದಿ: Karnataka Weather : ಮುಂದಿನ 3 ದಿನ ಮಳೆ ಸಾಧ್ಯತೆ; ಬೆಂಗಳೂರಲ್ಲಿ ಕವಿದ ಮೋಡ
ಇತ್ತ ಆ್ಯಂಬುಲೆನ್ಸ್ ಬರುತ್ತಿದ್ದಂತೆ ದಿಢೀರ್ ಎದ್ದು ಕುಳಿತ ಸವಾರನನ್ನು ಕಂಡು ಇತರರು ಶಾಕ್ ಆಗಿದ್ದರು. ಬಳಿಕ ಹತ್ತಿರ ಹೋಗಿ ವಿಚಾರಿಸಿ ಆತನನ್ನು ಮೇಲಕ್ಕೆ ಎತ್ತಿದಾಗಲೇ ಗೊತ್ತಾಗಿದ್ದು, ಕಂಠ ಪೂರ್ತಿ ಕುಡಿದು ಬೈಕ್ ಓಡಿಸಲು ಆಗದೆ ರಸ್ತೆಯಲ್ಲೇ ಮಲಗಿ ಬಿಟ್ಟಿದ್ದ ಎಂದು. ಹಾಸನದಿಂದ ಸಂಬಂಧಿಕರ ಮನೆಗೆ ಬಂದಿದ್ದ ಸವಾರ, ಕುಡಿದ ಮತ್ತಿನಲ್ಲಿ ಬೈಕ್ ಓಡಿಸಲು ಮುಂದಾಗಿದ್ದಾನೆ. ಆದರೆ ಬೈಕ್ ಕಂಟ್ರೋಲ್‌ಗೆ ಸಿಗದೆ ಅತ್ತಿಂದಿತ್ತ ಓಡಿಸಿ ರಸ್ತೆ ಪಕ್ಕಕ್ಕೆ ಬಿದ್ದಿದೆ. ಬೈಕ್ ಪಕ್ಕದಲ್ಲೇ ಕುಡುಕ ಸವಾರ ಮಲಗಿ ಬಿಟ್ಟಿದ್ದ.
ಪಕ್ಕದಲ್ಲಿದ್ದ ಬೈಕ್ ಇಂಡಿಕೇಟರ್ ಆನ್ ಆಗಿದ್ದರಿಂದ ಈತನ ಜೀವ ಉಳಿದಿದೆ. ಆ ಕತ್ತಲಿಲ್ಲ ಒಂದು ವೇಳೆ ಇಂಡಿಕೇಟರ್ ಆನ್ ಆಗಿರಲಿಲ್ಲ ಎಂದಿದ್ದರೆ, ಯಾವುದಾದರೂ ವಾಹನದಿಂದ ಅಪಘಾತ ಸಂಭವಿಸುವ ಸಾಧ್ಯತೆ ಇತ್ತು. ಅದೃಷ್ಟವಾಶತ್ ಇಡಿಕೇಟರ್‌ನಿಂದ ಕುಡುಕನ ಜೀವ ಉಳಿದಿದೆ. ವಿಚಾರ ತಿಳಿಯುತ್ತಿದ್ದಂತೆ ಬಣಕಲ್ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಬೈಕ್ ಸವಾರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ