Site icon Vistara News

ಕುಡಿದ ಮತ್ತಿನಲ್ಲಿ ನೇಣು ಬಿಗಿದುಕೊಂಡ ಚಾಲಕ; ಆತ್ಮಹತ್ಯೆ ಮಾಡಿಕೊಂಡ ಹೆಡ್ ಕಾನ್ಸ್‌ಟೇಬಲ್

Suicide Case

Suicide Case

ನೆಲಮಂಗಲ/ ಕಲಬುರಗಿ: ಬೆಂಗಳೂರು ಗ್ರಾಮಾಂತರದ ನೆಲಮಂಗಲದ ಕುಣಿಗಲ್ ಬೈಪಾಸ್‌‌ ಸಮೀಪ ಕುಡಿದ ಮತ್ತಿನಲ್ಲಿ ಚಾಲಕನೊಬ್ಬ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ. ಯೋಗೇಶ್ (35) ಮೃತ ದುರ್ದೈವಿ.

ಯೋಗೇಶ್‌ ಹಾಸನದ ಕಳ್ಳಿಗುಡ್ಡದಹಳ್ಳಿ ಮೂಲದವರು ಎಂದು ತಿಳಿದುಬಂದಿದೆ. ನೆಲಮಂಗಲದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ನೆಲಮಂಗಲ ಟೌನ್ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

ಆತ್ಮಹತ್ಯೆಗೆ ಶರಣಾದ ಹೆಡ್‌ ಕಾನ್ಸ್‌ಟೇಬಲ್‌

ಕಲಬುರಗಿ ನಗರದ ಡಿಎಆರ್ ಹೆಡ್ ಕ್ವಾರ್ಟರ್ಸ್‌ನಲ್ಲಿ ಹೆಡ್ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪಾಂಡುರಂಗ (47) ನೇಣು ಬಿಗಿದುಕೊಂಡು ಮೃತಪಟ್ಟವರು. ಪಾಂಡುರಂಗ ಕಲಬುರಗಿಯ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ಗ್ರಾಮದ ನಿವಾಸಿ ಆಗಿದ್ದಾರೆ.

ನೇಣಿಗೆ ಶರಣಾದ ಪಾಂಡುರಂಗ

ಶನಿವಾರ ರಾತ್ರಿ 10 ಗಂಟೆಗೆ ಕೆಲಸ ಮುಗಿಸಿ ಮನೆಗೆ ತೆರಳಿದ ಪಾಂಡುರಂಗ, ಕುಟುಂಬ ಸದಸ್ಯರೊಂದಿಗೆ ಊಟ ಮುಗಿಸಿದ್ದಾರೆ. ಬಳಿಕ ಪಾಂಡುರಂಗ ಅವರ ಇಬ್ಬರು ಮಕ್ಕಳು ಮನೆಯೊಳಗೆ ಸೆಕೆ ಎಂದು ಮನೆಯ ಚಾವಣಿಯಲ್ಲಿ ಮಲಗಿದ್ದರು. ಪತಿ-ಪತ್ನಿ‌ ಇಬ್ಬರು ಕ್ವಾಟರ್ಸ್‌ನ ಬೆಡ್ ರೂಂನಲ್ಲಿ ಮಲಗಿದ್ದರು. ಆದರೆ, ನಸುಕಿನ ಜಾವ ಮನೆಯ ಅಡುಗೆ ಕೋಣೆಯಲ್ಲಿ ಪಾಂಡುರಂಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆ ಆಗಿದ್ದಾರೆ.

ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಸದ್ಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಹಾವು ಕಡಿತದಿಂದ ಮೃತಪಟ್ಟ ಚೇತನ

ಹಾವು ಕಚ್ಚಿ ಯುವಕ ಸಾವು

ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಿಷಕಾರಿ ಹಾವು ಕಚ್ಚಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಧಾರವಾಡದ ರಾಮನಗರ ನಿವಾಸಿ ಚೇತನ್ (27) ಮೃತದುರ್ದೈವಿ. ಚೇತನ ಹಾವು ಹಿಡಿಯಲು ಹೋದಾಗ ಈ ದುರ್ಘಟನೆ ನಡೆದಿದೆ. ಹಾವು ಕಚ್ಚಿದ್ದರಿಂದ ಅಸ್ವಸ್ಥಗೊಂಡಿದ್ದ ಚೇತನ್‌ರನ್ನು ಕೂಡಲೇ ಧಾರವಾಡದ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಚೇತನ್‌ ಮೃತಪಟ್ಟಿದ್ದಾರೆ.

ಟರ್ಪೆಂಟೈನ್ ಆಯಿಲ್ ಕುಡಿದು 2 ವರ್ಷದ ಮಗು ಸಾವು

ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಉತ್ತಾಸಿಪಾಳ್ಯದಲ್ಲಿ ಟರ್ಪೆಂಟೈನ್ ಆಯಿಲ್ (Turpentine Oil) ಕುಡಿದು ಮಗು ಮೃತಪಟ್ಟಿರುವ (Child Death) ದಾರುಣ ಘಟನೆ ನಡೆದಿದೆ. ಅಂಜು ಫಾತೀಮಾ (2) ಮೃತ ದುರ್ದೈವಿ. ಅಂಜು ಫಾತಿಮಾ ಮನೆಯಲ್ಲಿದ್ದ ಕುರಿಗೆ ಬಣ್ಣ ಬಳಿಯಲು ಟರ್ಪೆಂಟೈನ್ ಆಯಿಲ್ ತಂದಿಟ್ಟಿದ್ದರು. ಈ ವೇಳೆ ಅಂಜು ಆಟ ಆಡುವಾಡುತ್ತಾ ಕೈಗೆ ಸಿಕ್ಕಿದ ಟರ್ಪೆಂಟೈನ್ ಆಯಿಲ್ ಬಾಟೆಲ್‌ ತೆರೆದು ಕುಡಿದು ಬಿಟ್ಟಿದೆ.

ಇದನ್ನೂ ಓದಿ: Long life secret | ಹೆಚ್ಚು ಕಾಲ ಬದುಕಿರಬೇಕೆಂದರೆ ಹೇಗಿರಬೇಕು? ಸಂಶೋಧನೆ ತಿಳಿಸಿದ ರಹಸ್ಯ

ಕೂಡಲೇ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಮೃತಪಟ್ಟಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version