ಬೆಂಗಳೂರು: ವಿಮಾನದಲ್ಲಿ ಪ್ರಯಾಣಿಸುವವರು ವಿದ್ಯಾವಂತರು, ಸಿರಿವಂತರು ಎಂಬ ಭಾವನೆ ಜನರಲ್ಲಿದೆ. ಆದರೆ, ಇತ್ತೀಚೆಗೆ ವಿಮಾನಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಅಸಭ್ಯವಾಗಿ ವರ್ತಿಸುವುದು, ಸಹ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡುವುದು, ಗಗನಸಖಿಯರ ಮೇಲೆ ದರ್ಪ ತೋರುವುದು, ವಿಮಾನದ ತುರ್ತು ನಿರ್ಗಮನ ದ್ವಾರ ತೆಗೆಯಲು ಯತ್ನಿಸುವುದು ಸೇರಿ ಹಲವು ರೀತಿಯಲ್ಲಿ ದುರ್ವರ್ತನೆ ತೋರುವ ಪ್ರಕರಣಗಳು ಹೆಚ್ಚಾಗಿವೆ. ಇದಕ್ಕೆ ನಿದರ್ಶನ ಎಂಬಂತೆ, ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಕುಡಿದ ಮತ್ತಿನಲ್ಲಿ 40 ವರ್ಷದ ಪ್ರಯಾಣಿಕನೊಬ್ಬ ಎಮರ್ಜನ್ಸಿ ಬಾಗಿಲನ್ನು (Flight Emergency Door) ತೆರೆಯಲು ಯತ್ನಿಸಿದ್ದಾನೆ.
ಶುಕ್ರವಾರ ಬೆಳಗ್ಗೆ ದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ವಿಮಾನಯಾನ ಸಂಸ್ಥೆಯ 6ಇ 308 ವಿಮಾನವು ಹಾರಾಟ ಆರಂಭಿಸಿದೆ. ಹಾರಾಟ ಆರಂಭಿಸಿದ ಬಳಿಕ ಪ್ರತೀಕ್ ಎಂಬ ವ್ಯಕ್ತಿಯು ಕುಡಿದ ಮತ್ತಿನಲ್ಲಿ ವಿಮಾನದ ತುರ್ತು ನಿರ್ಗಮನ ದ್ವಾರದ ಫ್ಲ್ಯಾಪ್ ತೆರೆಯಲು ಯತ್ನಿಸಿದ್ದಾನೆ. ವಿಮಾನದ ಸಿಬ್ಬಂದಿಯು ಎಷ್ಟು ಹೇಳಿದರೂ ಕೇಳದೆ, ವಿಮಾನ ಹಾರುತ್ತಿರುವಾಗಲೇ ಮೂರು ಬಾರಿ ಎಮರ್ಜನ್ಸಿ ಡೋರ್‌ನ ಫ್ಲ್ಯಾಪ್ ತೆಗೆಯಲು ಯತ್ನಿಸಿದ್ದಾನೆ. ವಿಮಾನವು ಬೆಳಗ್ಗೆ 10.43ರ ಸುಮಾರಿಗೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಪ್ರತೀಕ್‌ನನ್ನು ಬಂಧಿಸಲಾಗಿದೆ.
ಕಾನ್ಪುರ ಮೂಲದ ಪ್ರತೀಕ್, ಇ-ಕಾಮರ್ಸ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆತ ಎಮರ್ಜನ್ಸಿ ಡೋರ್ ತೆಗೆಯುವ ಮುನ್ನವೇ ತಡೆದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕುಡಿದ ಮತ್ತಿನಲ್ಲಿ ಆರೋಪಿಯು ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಕೆಲ ತಿಂಗಳ ಹಿಂದೆ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ವಿಮಾನದ ಬಾಗಿಲು ತೆರೆದು, ವಿಮಾನ ಹಾರಾಟ ವಿಳಂಬವಾದ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು.
ಇದನ್ನೂ ಓದಿ: Shankar Mishra Case | ಮಹಿಳೆ ಮೇಲೆ ಮೂತ್ರ ವಿಸರ್ಜನೆ, ಶಂಕರ್ ಮಿಶ್ರಾ 4 ತಿಂಗಳು ವಿಮಾನ ಸಂಚಾರ ನಿಷೇಧ
ಕಳೆದ ವಾರವಷ್ಟೇ ಮುಂಬೈಗೆ ಪ್ರಯಾಣಿಸುತ್ತಿದ್ದ ಸ್ವೀಡನ್ ದೇಶದ ನಾಗರಿಕನೊಬ್ಬ ವಿಮಾನದ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿತ್ತು. ಆ ವ್ಯಕ್ತಿ ಮುಂಬೈಗೆ ಬಂದಿಳಿಯುತ್ತಿದ್ದಂತೆಯೇ ಮುಂಬೈ ಪೊಲೀಸರು ಬಂಧಿಸಿದ್ದರು. ಕ್ಲಾಸ್ ರಡಿಕ್ ಹರಾಲ್ಡ್ ಜೋನಸ್ ವೆಸ್ಟ್‌ಬರ್ಗ್ ಹೆಸರಿನ ವ್ಯಕ್ತಿ ಇಂಡಿಗೋ ಏರ್‌ಲೈನ್‌ನ ಬ್ಯಾಂಕಾಕ್‌ನಿಂದ ಮುಂಬೈಗೆ ಬರುವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ. ಆತ ವಿಮಾನದಲ್ಲಿ ತಿನ್ನುವುದಕ್ಕೆಂದು ಚಿಕನ್ ಖಾದ್ಯ ಒಂದನ್ನು ಆರ್ಡರ್ ಮಾಡಿದ್ದಾನೆ. ಅದರ ಹಣ ಪಡೆಯುವುದಕ್ಕೆಂದು ಸಿಬ್ಬಂದಿ ಆತನ ಬಳಿ ಹೋದಾಗ, ಕಾರ್ಡ್ ಸ್ವೈಪ್ ಮಾಡುವ ನೆಪದಲ್ಲಿ ಸಿಬ್ಬಂದಿಯ ಕೈ ಹಿಡಿದುಕೊಂಡಿದ್ದ. ಈ ವಿಚಾರದಲ್ಲಿ ಸಿಬ್ಬಂದಿ ಖಂಡನೆ ವ್ಯಕ್ತಪಡಿಸಿದಾಗ ಆತ ಎದ್ದು ನಿಂತು ಬೈಯಲಾರಂಭಿಸಿದ್ದ. ಆತ ತನ್ನ ಅಕ್ಕಪಕ್ಕದಲ್ಲಿ ಕುಳಿತಿದ್ದ ಪ್ರಯಾಣಿಕರಿಗೂ ತೊಂದರೆಯುಂಟು ಮಾಡಿದ್ದಾಗಿ ವರದಿಯಾಗಿತ್ತು.