ವಿಜಯಪುರ: ಮಕ್ಕಳಿಗೆ ತಿದ್ದಿ-ಬುದ್ಧಿ ಹೇಳಬೇಕಾದ ಶಿಕ್ಷಕರೊಬ್ಬರು ಶಾಲೆಗೆ ಮದ್ಯ ಸೇವನೆ (Drunken Teacher) ಮಾಡಿ ತೂರಾಡಿಕೊಂಡು ಬಂದಿದ್ದು, ಈ ವಿಡಿಯೊ ಈಗ ವೈರಲ್ ಆಗಿದೆ. ವಿಜಯಪುರ ತಾಲೂಕಿನ ಕನ್ನೂರ ಬಾಲಕಿಯರ ಪ್ರೌಢ ಶಾಲೆಯಲ್ಲಿ ಘಟನೆ ನಡೆದಿದೆ.
ಬಿ.ಎಸ್. ರಾಠೋಡ ಎಂಬಾತನೇ ಕುಡಿದು ಶಾಲೆಗೆ ಬಂದ ಮುಖ್ಯ ಶಿಕ್ಷಕನಾಗಿದ್ದಾನೆ. ಇದನ್ನು ನೋಡಿದ ಎಸ್‌ಡಿಎಂಸಿ ಅಧ್ಯಕ್ಷ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು, ಗ್ರಾಮಸ್ಥರು ಶಾಲಾ ಶಿಕ್ಷಕನಿಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಶಾಲೆಗೆ ಅನಧಿಕೃತವಾಗಿ ಗೈರಾಗುವುದು, ಒಂದು ವೇಳೆ ಶಾಲೆಗೆ ಬಂದರೆ ಕುಡಿದು ಬರುವುದನ್ನು ರಾಠೋಡ ರೂಢಿಸಿಕೊಂಡಿದ್ದರು. ಈ ಬಗ್ಗೆ ಸಾಕಷ್ಟು ಸಾರಿ ಹೇಳಿದ್ದರೂ ಅವರ ವರ್ತನೆ ಹಾಗೂ ನಡವಳಿಕೆಯಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ ಎನ್ನಲಾಗಿದೆ.
ಅವರ ಕುಡಿತದ ಚಟದ ಬಗ್ಗೆ ಸಾರ್ವಜನಿಕರು ಹಾಗೂ ಪೋಷಕರು ಸಾಕಷ್ಟು ಬಾರಿ ದೂರು ನೀಡಿದ್ದರು. ಇಷ್ಟಾದರೂ ರಾಠೋಡ ತಿದ್ದಿಕೊಂಡಿರಲಿಲ್ಲ. ಸೋಮವಾರ (ಜ.೨೩) ಶಾಲೆಗೆ ಎಂದಿನಂತೆ ಕುಡಿದುಕೊಂಡು ತೂರಾಡುತ್ತಾ ಬಂದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶಾಲಾ ಶಿಕ್ಷಕನ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: Rahul Gandhi ಭದ್ರತೆ ಕುರಿತು ಯಾವುದೇ ರಾಜಿ ಇಲ್ಲ ಎಂದ ಜೈರಾಮ್ ರಮೇಶ್
ಅಲ್ಲದೆ, ಕಳೆದ ಒಂದು ವರ್ಷದಿಂದ ಇವರು ಕುಡಿದು ಬರುತ್ತಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕರೂ ಆಗಿದ್ದರೂ ಇವತ್ತಿನವರೆಗೆ ಯಾವುದೇ ರೀತಿಯ ಚಟುವಟಿಕೆಯನ್ನು ಮಕ್ಕಳಿಗೆ ಮಾಡಿಸಿಲ್ಲ. ಅಲ್ಲದೆ, ಶಾಲೆಗೆ ಬಂದರೂ ಒಂದು ಗಂಟೆಗಳ ಕಾಲ ಬಂದು ವಾಪಸ್ ಹೋಗುತ್ತಾರೆ. ಈ ಹಿನ್ನೆಲೆಯಲ್ಲಿ ಡಿಡಿಪಿಐ ಸೂಕ್ತ ಕ್ರಮವಹಿಸಬೇಕು. ಅವರನ್ನು ವರ್ಗಾವಣೆ ಮಾಡಬೇಕು, ಇಲ್ಲವೇ ಇಲ್ಲಿಯೇ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ವೇಳೆ ಇನ್ನು ಈ ರೀತಿ ಮಾಡುವುದಿಲ್ಲ ಎಂದು ಶಿಕ್ಷಕ ಮುಚ್ಚಳಿಕೆ ಪತ್ರವನ್ನು ಬರೆದುಕೊಟ್ಟಿದ್ದಾರೆನ್ನಲಾಗಿದೆ.