Site icon Vistara News

ಅಪಘಾತದಲ್ಲಿ ಬಾಲಕಿ ಸತ್ತ ಬಳಿಕ ಪತ್ತೆಯಾಯ್ತು ನಕಲಿ ನಂಬರ್ ಪ್ಲೇಟ್ ವಂಚನೆ

ನಕಲಿ ನಂಬರ್ ಪ್ಲೇಟ್

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಡೂಪ್ಲಿಕೇಟ್‌ ನಂಬರ್‌ ಪ್ಲೇಟ್‌ ಹಾವಳಿ ನಿಲ್ಲುವಂತೆ ಕಾಣುತ್ತಿಲ್ಲ. ಪೊಲೀಸರಿಗೂ ಯಾಮಾರಿಸುವ ಖದೀಮರು ನಕಲಿ ನಂಬರ್‌ ಪ್ಲೇಟ್‌ ಹಾಕಿಕೊಂಡು ವಾಹನಗಳನ್ನ ಬಳಸುತ್ತಿದ್ದಾರೆ. ಪೊಲೀಸರ ತನಿಖೆ ವೇಳೆ ನಕಲಿ ನಂಬರ್ ಪ್ಲೇಟ್‌ನಿಂದ ಆದ ಅವಾಂತರ ಬೆಳಕಿಗೆ ಬಂದಿದೆ.

ಬೈಕ್ ಅಪಘಾತದ ತನಿಖೆ ನಡೆಸುತ್ತಿರುವಾಗ ಬೈಕ್ ಮಾಲೀಕನ ಈ ಎಡವಟ್ಟು ಬೆಳಕಿಗೆ ಬಂದಿದೆ. ಕಳೆದ ಮೇ ತಿಂಗಳಲ್ಲಿ ಬನಶಂಕರಿ ಠಾಣಾ ವ್ಯಾಪ್ತಿಯ ದೇವೇಗೌಡ ಪೆಟ್ರೋಲ್ ಬಂಕ್ ಬಳಿ ಸ್ಕೂಲ್ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಒಬ್ಬಾಕೆ ಬಾಲಕಿ ಮೃತಪಟ್ಟಿದ್ದಳು. ಈ ಬಗ್ಗೆ ಬನಶಂಕರಿ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ತನಿಖೆ ವೇಳೆ, ಬೈಕ್‌ ಮಾಲಿಕ ನಕಲಿ ನಂಬರ್ ಪ್ಲೇಟ್ ಹಾಕಿಕೊಂಡು ಬೈಕ್‌ ಓಡಿಸುತ್ತಿರುವುದು ಗೊತ್ತಾಗಿದೆ. ಬೈಕ್‌ ಓಡಿಸುತ್ತಿದ್ದ ಯುವಕ ಮಹಾರಾಷ್ಟ್ರದ ಸ್ಪೆಂಡರ್ ಪ್ಲಸ್ ಬೈಕ್‌ಗೆ ಕರ್ನಾಟಕ ನೋಂದಣಿ ನಂಬರ್ ಪ್ಲೇಟ್ ಬಳಸಿ ರೈಡಿಂಗ್ ಮಾಡುತ್ತಿದ್ದ. ಮಹಾರಾಷ್ಟ್ರದ ನೋಂದಣಿಯ ಬೈಕನ್ನು ಮಾಲೀಕ ಅನಂತರಾಮು ಪೊಲೀಸರ ಹರಾಜಿನಲ್ಲಿ ಖರೀದಿ ಮಾಡಿದ್ದು, ಬಳಿಕ ಬೈಕ್ ದಾಖಲಾತಿಗಳನ್ನು ವರ್ಗಾವಣೆ ಮಾಡದೆ ನಿರ್ಲಕ್ಷ್ಯ ತೋರಿದ್ದರು ಎನ್ನಲಾಗಿದೆ.

ಇದನ್ನೂ ಓದಿ | ನಿಮ್ಮದೇ ಗಾಡಿ ನಂಬರ್‌ ಇರೋ ಬೇರೆ ವಾಹನ ಇವೆಯೆ? ನಕಲಿ ನಂಬರ್‌ ಪ್ಲೇಟ್‌ ಹಾವಳಿ ಹೆಚ್ಚಾಗಿದೆ ಎಚ್ಚರ!

ಹೊರರಾಜ್ಯದ ಬೈಕ್ ನಗರದಲ್ಲಿ ಓಡಿಸಿದರೆ ದಾಖಲಾತಿ ಸಮಸ್ಯೆ ಆಗಬಹುದು, ಟ್ರಾಫಿಕ್ ಪೊಲೀಸರು ಬೈಕ್ ಹಿಡಿಯಬಹುದು ಎಂದು ನಕಲಿ ನಂಬರ್ ಪ್ಲೇಟ್ ಬಳಕೆ ಮಾಡಿದ್ದಾನೆ. KA-04 HE-5475 ನೋಂದಣಿ ನಂಬರ್ ಬಳಸಿ ಬೈಕ್ ಸವಾರಿ ಮಾಡಿದ್ದು, ಇದು ಪೊಲೀಸರ ಕಣ್ತಪ್ಪಿಸಲು ಬಳಸಿದ ನಕಲಿ ನಂಬರ್ ಪ್ಲೇಟ್ ಎನ್ನಲಾಗಿದೆ. ನಂತರ ಇದೇ ನಂಬರ್‌ನಲ್ಲಿ ಬೈಕ್ ಓಡಿಸುತ್ತಿದ್ದ ಮಾಲೀಕ. ದುರದೃಷ್ಟವಶಾತ್ ಮೇ ತಿಂಗಳಲ್ಲಿ ಬೈಕ್ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಹಿಂಬದಿಯಲ್ಲಿ ಕುಳಿತಿದ್ದ ಪರಿಚಯದ ಬಾಲಕಿ ಮೃತಪಟ್ಟಿದ್ದಳು. ಸರಿಯಾದ ಡಾಕ್ಯುಮೆಂಟ್ ಇಲ್ಲದೆ, ನಕಲಿ ನಂಬರ್ ಪ್ಲೇಟ್ ಬಳಕೆಯಿಂದ ಎಲ್ಲರಿಗೂ ಸಂಕಷ್ಟ ಒದಗಿ ಬಂದಿದೆ.

ನಕಲಿ ನಂಬರ್ ಪ್ಲೇಟ್ ಬಳಸಿ ವಂಚಿಸಿದ ಹಿನ್ನೆಲೆಯಲ್ಲಿ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಮಾಲೀಕನ ವಿರುದ್ಧ ಸಂಚಾರಿ ಪೊಲೀಸರು ಕೇಸ್‌ ದಾಖಲಿಸಿಕೊಂಡಿದ್ದಾರೆ. ಇದೇ ರೀತಿ ಕಳೆದ 2 ತಿಂಗಳಲ್ಲಿ 12 ನಕಲಿ ನಂಬರ್ ಪ್ಲೇಟ್ ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲಿ ನಾಲ್ಕು ಪ್ರಕರಣಗಳು ಅಪಘಾತ ಎಸಗಿ ಪತ್ತೆಯಾಗಿವೆ.

ಆರ್‌ಸಿ ಕಾರ್ಡ್ ತೋರಿಸಿ ಐಎನ್‌ಡಿ ನಂಬರ್ ಪ್ಲೇಟ್ ಹಾಕಿಸುವ ಕಾನೂನು ಈಗಾಗಲೇ ಇದ್ದರೂ ಕಡ್ಡಾಯವಾಗಿಲ್ಲ. ಇದನ್ನು ಕಡ್ಡಾಯ ಮಾಡದಿದ್ದರೆ ನಕಲಿ ನಂಬರ್ ಪ್ಲೇಟ್ ಹಾವಳಿ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ | Fake Number Plates | ಒಂದಲ್ಲ, ಎರಡಲ್ಲ, ಮೂರು ವಾಹನಗಳಿಗೆ ಒಂದೇ ಸಂಖ್ಯೆ!

Exit mobile version