ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಬಿ ಖಾತಾ ಪ್ರಾಪರ್ಟಿಗಳು ಅನಧಿಕೃತವಾಗಿ ಎ ಖಾತೆ (E khata) ಪ್ರಾಪರ್ಟಿಗಳಾಗಿ ಬದಲಾಗಿದೆ. ಹೀಗೆ ಅಕ್ರಮವಾಗಿ ಖಾತಾಗಳನ್ನು ಬದಲಾವಣೆ ಮಾಡಿಕೊಂಡವರ ಹಾಗೂ ಮಾಡಿಸಿಕೊಟ್ಟ ಅಧಿಕಾರಿಗಳ ಮೇಲೆ ಬಿಬಿಎಂಪಿ (BBMP) ಅಧಿಕಾರಿಗಳು ಕ್ರಮಕ್ಕೆ ಮುಂದಾಗಿದ್ದಾರೆ.
ಗಾರ್ಡನ್ ಸಿಟಿಯಾಗಿದ್ದ ಬೆಂಗಳೂರು ನಗರ ಕಾಂಕ್ರಿಟ್ ಸಿಟಿಯಾಗಿ ಬದಲಾಗಿ ಯಾವುದೋ ಕಾಲವಾಗಿದೆ. ಇಂತಹ ನಗರದಲ್ಲಿ ವಿದೇಶಿ ಕಂಪನಿಗಳು ಬಂದು ತಮ್ಮ ಬ್ರಾಂಚ್‌ಗಳನ್ನು ತೆರೆದಿವೆ. ಅಷ್ಟರ ಮಟ್ಟಿಗೆ ಬೆಂಗಳೂರು ಎಲ್ಲರ ಪ್ರೀತಿಯನ್ನು ಗಳಿಸಿದೆ. ಇಂತಹ ನಗರದಲ್ಲಿ ಚದರ ಅಡಿ ಖರೀದಿಸಬೇಕಾದರೂ ಕನಿಷ್ಠ ಹತ್ತಾರು ಸಾವಿರ ರೂ. ಆಗುತ್ತದೆ.
ರೆವಿನ್ಯೂ ಸೈಟ್, ಬಿ ಖಾತೆ ಸೈಟ್‌ಗಳನ್ನೇ ಖರೀದಿ ಮಾಡಬೇಕಾದರೂ ಲಕ್ಷಾಂತರ ರೂಪಾಯಿ ನೀಡಬೇಕು. ಇನ್ನು ಆ ಸೈಟ್‌ಗಳಿಗೆ ಎ ಖಾತೆ ಸಿಕ್ಕಿ ಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು. ಹೇಗಾದರೂ ಮಾಡಿ ಎ ಖಾತೆ ಪಡೆಯಬೇಕು ಎಂದು ಚಾಪೆ ಕೆಳಗೆ ತೂರಿದ್ದರೆ ಅಂಥವರಿಗೆ ಈಗ ಪಾಲಿಕೆ ಬಿಸಿ ಮುಟ್ಟಿಸಲಿದೆ.
ಬಿ ಖಾತೆಯಲ್ಲಿದ್ದ ಪ್ರಾಪರ್ಟಿಯನ್ನು ಕೆಲ ಪಾಲಿಕೆಯ ಅಧಿಕಾರಿಗಳು ಹಣದಾಸೆಗೆ ಎ ಖಾತೆಗೆ ಬದಲಾಯಿಸಿದ್ದಾರೆ. ಬಿ ಖಾತಾ ಪ್ರಾಪರ್ಟಿಗಳು ಅನಧಿಕೃತವಾಗಿ ಎ ಖಾತೆ ಪ್ರಾಪರ್ಟಿಗಳಾಗಿ ಕನ್ವರ್ಟ್ ಆಗಿದೆ. ಈ ಕುರಿತು ಹೆಚ್ಚಿನ ದೂರುಗಳು ಪಾಲಿಕೆಗೆ ಬರುತ್ತಿತ್ತು. ಹೀಗಾಗಿ ವಿಶೇಷ ಆಯುಕ್ತ ಜಯರಾಂ ರಾಯ್‌ಪುರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿತ್ತು. ಆ ಸಮಿತಿ ನಗರದ ಅನೇಕ ಸ್ಥಳಗಳಲ್ಲಿ ಆಗಿರುವ ಅಕ್ರಮಗಳನ್ನು ಪತ್ತೆ ಹಚ್ಚಿ, ವರದಿ ಕೂಡ ನೀಡಿದೆ. ಸದ್ಯ ಈಗೇನಿದರೂ ಕ್ರಮ ಜರುಗಿಸುವುದಷ್ಟೇ ಬಾಕಿ ಇದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಜೂನ್ 15ರೊಳಗೆ ಡೆಡ್‌ಲೈನ್
ಬಿ ಖಾತೆಯಲ್ಲಿರುವ ಪ್ರಾಪರ್ಟಿಗಳು ನಿಗದಿತ ದಾಖಲೆಗಳನ್ನು ನೀಡಿ ಅಭಿವೃದ್ಧಿ ಶುಲ್ಕವನ್ನು ತೆತ್ತಬೇಕು. ಪಾಲಿಕೆ ತಿಳಿಸಿರುವ ದಾಖಲೆಗಳ ಪೈಕಿ ಒಂದು ದಾಖಲೆ ಮಿಸ್ ಆಗಿದ್ದರೂ ಖಾತೆ ಬದಲಾವಣೆ ಮಾಡುವಂತಿಲ್ಲ. ಆದರೆ, ಈ ನಿಯಮವನ್ನು ಗಾಳಿಗೆ ತೂರಲಾಗಿದೆ.
ಇನ್ನು, ನಗರದ ಹೊರವಲಯಗಳಲ್ಲೇ ಈ ಪ್ರಕರಣಗಳು ಹೆಚ್ಚಾಗಿ ನಡೆದಿದ್ದು, ಬೆಂಗಳೂರು ದಕ್ಷಿಣದಲ್ಲಿ ಹೆಚ್ಚು ಪ್ರಕರಣಗಳು ಕಂಡು ಬಂದಿದೆ. ಸಮಿತಿ ನೀಡಿದ ವರದಿಯನ್ನು ಆಧರಿಸಿ ಎಆರ್‌ಒ ಹಂತದಲ್ಲೇ ಮೊದಲ ಹಂತದ ಪರಿಶೀಲನೆ ನಡೆಸುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ ಚುನಾವಣೆ ಕಾರ್ಯದಿಂದ ಈ ಕೆಲಸಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು. ಆದರೆ ಈಗ ಮತ್ತೊಮ್ಮೆ ಕೆಲಸ ಚುರುಕುಗೊಂಡಿದ್ದು, ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಹಾಗೂ ಖಾತೆ ಬದಲಾಯಿಸಿಕೊಂಡ ಜಾಗದ ಮಾಲೀಕರಿಗೆ ಶಾಕ್ ನೀಡಲು ಪಾಲಿಕೆ ಸಜ್ಜಾಗಿದೆ. ಜೂನ್ 15ರೊಳಗೆ ಅಧಿಕಾರಿಗಳು ತಪ್ಪು ಮಾಡಿದ್ದರೆ ಶರಣಾಗಿ, ಇಲ್ಲ ಶಿಕ್ಷೆ ಎದುರಿಸಲು ಸಿದ್ಧರಾಗಿ ಎಂದು ಡೆಡ್‌ಲೈನ್ ನೀಡಿದೆ.
ಇದನ್ನೂ ಓದಿ: Weather Report: ಬೆಂಗಳೂರಿನಲ್ಲಿ ಭರ್ಜರಿ ಮಳೆಗೆ ತಂಪಾದ ಇಳೆ; ಗಾಳಿ-ಗುಡುಗಿನ ಅಬ್ಬರ, ಅಸ್ತವ್ಯಸ್ತವಾಯ್ತು ಸಂಚಾರ
ಕೇವಲ ಎಆರ್‌ಒಗಳಿಗೆ ಮಾತ್ರವಲ್ಲದೇ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಗೆ ಈ ಕುರಿತ ಪರಿಶೀಲನೆ ಮಾಡಲು ಸೂಚಿಸಲಾಗಿದೆ. ಕಳೆದ ಕೆಲ ತಿಂಗಳುಗಳಲ್ಲಿ ಬಿ ಖಾತೆಯಿಂದ ಎ ಖಾತೆಗೆ ವರ್ಗಾವಣೆ ಆಗಿರುವುದನ್ನು ಪರಿಶೀಲಿಸಬೇಕು. ಜತೆಗೆ ಜೂನ್ 15ರೊಳಗೆ ಈ ಕುರಿತ ಮಾಹಿತಿ ಹಾಗೂ ವರದಿ ನೀಡಬೇಕು ಎಂದು ತಿಳಿಸಲಾಗಿದೆ. ಒಂದು ವೇಳೆ ಅಧಿಕಾರಿ ಹಾಗೂ ಸಿಬ್ಬಂದಿಯಿಂದ ತಪ್ಪಾಗಿದ್ದರೆ ಅದನ್ನು ಕೂಡಲೇ ತಿಳಿಸತಕ್ಕದ್ದು. ಇಲ್ಲವಾದರೆ ಪರಿಶೀಲನೆಗಾಗಿ ಬಂದಾಗ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುತ್ತದೆ ಎಂದು ಸೂಚನಾ ಪತ್ರ ನೀಡಲಾಗಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ