ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸದ್ಯ ನಾಲ್ಕು ಗ್ಯಾರಂಟಿ ಯೋಜನೆಗಳನ್ನು (Congress Guarantee Scheme) ಅನುಷ್ಠಾನಕ್ಕೆ ತಂದಿದೆ. ಅದರಲ್ಲಿ ಅನ್ನಭಾಗ್ಯ ಯೋಜನೆ (Anna Bhagya Scheme) ಸಹ ಪ್ರಮುಖವಾಗಿದೆ. ಆದರೆ, ಈಗ ರೇಷನ್ ಕಾರ್ಡ್‌ಗೆ (Ration Card) ಇ-ಕೆವೈಸಿ ಸಂಕಷ್ಟ ಎದುರಾಗಿದೆ. ಇ-ಕೆವೈಸಿ ಮಾಡಿಸದಿದ್ದರೆ ಕೂಡಲೇ ಮಾಡಿಸಿಕೊಳ್ಳುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಸರ್ಕಾರದ ಮೇಲೆ ಅನಗತ್ಯ ಹೊರೆ ಹಾಗೂ ಅಕ್ರಮವನ್ನು ತಪ್ಪಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಕಾರಣ, ಅನ್ನಭಾಗ್ಯ ಯೋಜನೆಗೆ ರಾಜ್ಯದ ಪಾಲು ಐದು ಕೆ.ಜಿ. ಅಕ್ಕಿಯನ್ನು ಪೂರೈಕೆ ಮಾಡಲು ಸಮರ್ಪಕ ದಾಸ್ತಾನು ಇಲ್ಲದೇ ಇದ್ದರಿಂದ ಅದರ ಬದಲಿಗೆ ಕೆಜಿ ಅಕ್ಕಿಗೆ ತಲಾ 30 ರೂಪಾಯಿಯಂತೆ ಒಬ್ಬರಿಗೆ 170 ರೂಪಾಯಿಯನ್ನು ರಾಜ್ಯ ಸರ್ಕಾರ ಜಮೆ ಮಾಡುತ್ತಾ ಬಂದಿದೆ. ಇವರಲ್ಲಿ ಬಹಳಷ್ಟು ಮಂದಿ ರೇಷನ್ ಕಾರ್ಡ್‌ನಲ್ಲಿ ಸಮಸ್ಯೆ ಇದ್ದರಿಂದ ಹಣ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ತಿದ್ದುಪಡಿ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಫಲಾನುಭವಿಗಳಿದ್ದಾರೆ. ಇದರಿಂದ ಸರ್ಕಾರಕ್ಕೆ ಹೊರೆ ಮತ್ತಷ್ಟು ಹೆಚ್ಚಳವಾಗಲಿದೆ. ಈ ಎಲ್ಲದರ ಮಧ್ಯೆ ರಾಜ್ಯ ಸರ್ಕಾರ ಕೆಲವೊಂದು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದುವರೆಗೂ ಇ-ಕೆವೈಸಿ (E-KYC) ಮಾಡಿಸಿಕೊಳ್ಳದಿದ್ದರೆ, ಹಣವನ್ನು ಖಾತೆಗೆ ಜಮೆ ಮಾಡುವುದಿಲ್ಲ. ಜತೆಗೆ ಆರು ತಿಂಗಳವರೆಗೆ ಅಕ್ಕಿಯನ್ನು ಪಡೆಯದೇ ಇದ್ದರೂ ಯೋಜನೆಯ ಫಲ ದಕ್ಕುವುದಿಲ್ಲ. ಈ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಿದರೆ ಕಾರ್ಡನ್ನೇ ರದ್ದು ಮಾಡಲು ಮುಂದಾಗಿದೆ.
ಇ-ಕೆವೈಸಿ ಎಂಬುದು ಬಹಳ ಮುಖ್ಯವಾಗಿದೆ. ಇದರಿಂದ ನಕಲಿ ಫಲಾನುಭವಿಗಳನ್ನು ಸಹ ತಡೆಯಬಹುದಾಗಿದೆ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುವುದನ್ನು ತಪ್ಪಿಸಬಹುದು. ಹಾಗಾದರೆ ಇ-ಕೆವೈಸಿಯನ್ನು ಅಪ್ಡೇಟ್ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇನ್ನೂ ಹಾಕಿಸಿಲ್ವಾ, ಟೆನ್ಶನ್ ಬೇಡ! ಯಾಕಂದ್ರೆ..?
ಇ-ಕೆವೈಸಿ ಅಪ್ಡೇಟ್ ಬಗ್ಗೆ ತಿಳಿಯೋದು ಹೀಗೆ!
ಮೊದಲಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ. ಅಲ್ಲಿ ಪುಟದ ಮೇಲ್ಭಾಗ ಇ-ಸೇವೆಗಳು ಎಂಬ ಆಯ್ಕೆ ಕಾಣುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಆಗ ವೆಬ್‌ಪುಟದ ಎಡಭಾಗದಲ್ಲಿ ಇ-ಸ್ಥಿತಿ ಎಂಬ ಆಯ್ಕೆ ಕಾಣುತ್ತದೆ. ಅದರ ಕೆಳಗೆ ಹೊಸ/ಹಾಲಿ ಪಡಿತರ ಚೀಟಿಯ ಸ್ಥಿತಿ ಎಂಬ ಆಯ್ಕೆ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು.
ಆಗ ಅಲ್ಲಿ ನಿಮ್ಮ ಜಿಲ್ಲೆಗಳನ್ನು ವಿಭಾಗಾವಾರು ಅಡಿ ನೀಡಲಾಗಿರುತ್ತದೆ. ಅಲ್ಲಿ 2 ಲಿಂಕ್‌ಗಳು ಹಾಗೂ ಜಿಲ್ಲೆಗಳ ಹೆಸರು ನಮೂದಾಗಿರುತ್ತದೆ. ಅದರಲ್ಲಿ ನಿಮ್ಮ ಜಿಲ್ಲೆಯ ಹೆಸರು ಇರುವ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಎಡಭಾಗದಲ್ಲಿ ಕಾಣುವ ಆಯ್ಕೆಗಳಲ್ಲಿ ಪಡಿತರ ಚೀಟಿ ವಿವರ (Status of Ration Card) ಮೇಲೆ ಕ್ಲಿಕ್ ಮಾಡಿ. ನಿಮ್ಮ ಇ-ಕೆವೈಸಿ ಸ್ಟೇಟಸ್ ತಿಳಿಯಲು ವಿಥ್ ಒಟಿಪಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಬಳಿಕ ಅಲ್ಲಿ ಕಾಣುವ ಆಯ್ಕೆ ಮೇಲೆ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ “Go” ಆಯ್ಕೆಯನ್ನು ಒತ್ತಿ.
ಇದಾದ ಬಳಿಕ ಮತ್ತೊಂದು ಆಯ್ಕೆ ಬರಲಿದ್ದು, ಅಲ್ಲಿ ನೀವು ನೋಂದಾಯಿಸಿರುವ ನಿಮ್ಮ ಮನೆಯ ಸದಸ್ಯರ ಹೆಸರುಗಳು ಕಾಣಿಸುತ್ತವೆ. ಇಲ್ಲಿ ಆಧಾರ್ ಕಾರ್ಡ್‌ನಲ್ಲಿರುವ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರುವವರ ಹೆಸರನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ “Go” ಆಯ್ಕೆಯನ್ನು ಒತ್ತಿ. ಆ ಬಳಿಕ ಆ ಸದಸ್ಯರ ಮೊಬೈಲ್ ನಂಬರ್‌ಗೆ ಬರುವ ಒಟಿಪಿಯನ್ನು ನಮೂದು ಮಾಡಬೇಕು. ಇದಾದ ಬಳಿಕ ನಿಮ್ಮ ರೇಷನ್ ಕಾರ್ಡ್ ಸ್ಟೇಟಸ್ ಆ ಪುಟದಲ್ಲಿ ಕಾಣಿಸುತ್ತದೆ. ಇದರಲ್ಲಿ ಯಾವೆಲ್ಲ ಸದಸ್ಯರ ಇ-ಕೆವೈಸಿ ಆಗಿದೆ ಅಥವಾ ಆಗಿಲ್ಲ ಎಂಬುದು ತಿಳಿಯುತ್ತದೆ. ಇ-ಕೆವೈಸಿ ಸ್ಟೇಟಸ್‌ನಲ್ಲಿ “NO” ಎಂದು ಇರುವ ಸದಸ್ಯರ ಇ-ಕೆವೈಸಿಯನ್ನು ಮಾಡಿಸಬೇಕಾಗುತ್ತದೆ.
ನ್ಯಾಯಬೆಲೆ ಅಂಗಡಿ ಹೋಗಿ ಅಪ್ಡೇಟ್ ಮಾಡಿಸಿ
ಇ-ಕೆವೈಸಿ ಆಗಿಲ್ಲವೆಂದು ತೋರಿಸುತ್ತಿದ್ದರೆ ಅದನ್ನು ಆನ್‌ಲೈನ್ ಮುಖಾಂತರ ಅಪ್ಡೇಟ್ ಮಾಡಲು ಬರುವುದಿಲ್ಲ. ಇದಕ್ಕಾಗಿ ನಿಮ್ಮ ರೇಷನ್ ಕಾರ್ಡ್ ಅಂಗಡಿಗೆ ಹೋಗಲೇಬೇಕು. ಅಲ್ಲಿ ನಿಮ್ಮ ಹೆಬ್ಬೆಟ್ಟಿನ ಗುರುತು ಪಡೆದು ಇ-ಕೆವೈಸಿಯನ್ನು ಮಾಡಿಸಿಕೊಳ್ಳಲಾಗುತ್ತದೆ.
ಇ-ಕೆವೈಸಿಗೆ ಡಿ. 31 ಕೊನೇ ದಿನ!
ರೇಷನ್ ಕಾರ್ಡ್‌ಗೆ ಇ-ಕೆವೈಸಿ ಮಾಡಿಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಅಸಲಿ – ನಕಲಿ ರೇಷನ್ ಕಾರ್ಡ್ ಅನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ ಎಂದು ಹೇಳಲಾಗಿದೆ. ಇ-ಕೆವೈಸಿ ಅಪ್ಡೇಟ್‌ಗಾಗಿ ರಾಜ್ಯ ಸರ್ಕಾರವು ಡಿಸೆಂಬರ್ 30ರ ವರೆಗೆ ಕಾಲಾವಕಾಶವನ್ನು ನೀಡಿದೆ. ಒಂದು ವೇಳೆ ಇದನ್ನು ಮಾಡಿಸದೆ ಹೋದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುವ ಸಾಧ್ಯತೆಯಿದೆ.
ರೇಷನ್ ಪಡೆಯದಿದ್ದರೂ ಕಾರ್ಡ್ ರದ್ದು!
ಇನ್ನು ರೇಷನ್ ಕಾರ್ಡ್ ಹೊಂದಿದವರು ಕೆಲವು ಕಾರಣಗಳಿಂದ 6 ತಿಂಗಳುಗಳ ಕಾಲ ನಿರಂತರವಾಗಿ ರೇಷನ್ ಪಡೆಯದೇ ಇದ್ದರೆ ಅಂಥವರ ಕಾರ್ಡ್ ಅನ್ನು ರದ್ದು ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ.
ಇದನ್ನೂ ಓದಿ: Karnataka Drought : ರೈತರೇ, ಬರ ಪರಿಹಾರ ಬೇಕಿದ್ದರೆ ಹೀಗೆ ಮಾಡಿ; 2 ವಾರ ಮಾತ್ರ ಕಾಲಾವಕಾಶ!
ಅಕ್ರಮ ಮಾರಾಟ ಮಾಡಿದರೂ ಕಾರ್ಡ್ ರದ್ದು, ಶಿಕ್ಷೆ
ಅನ್ನಭಾಗ್ಯದ ಅಕ್ಕಿಯನ್ನು ಮಾರಿದರೂ ಸರ್ಕಾರ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತದೆ. ಅಗತ್ಯ ವಸ್ತುಗಳ ಕಾಯ್ದೆ-1955 ರಡಿ ಪ್ರಕರಣ ದಾಖಲು ಮಾಡುವ ಅವಕಾಶ ಇದೆ. ಈ ಹಿನ್ನೆಲೆಯಲ್ಲಿ ಕಾರ್ಡ್‌ದಾರರು ಅನ್ನಭಾಗ್ಯ ಯೋಜನೆಯಡಿ ಪಡೆಯುವ ಅಕ್ಕಿಯನ್ನು ಮನೆ ಬಳಕೆಗೆ ಮಾತ್ರ ಬಳಸಬೇಕು. ಅದನ್ನು ಮಾರಾಟ ಮಾಡಿದರೆ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ. ಜತೆಗೆ ಇದು ಶಿಕ್ಷಾರ್ಹ ಅಪರಾಧವಾಗಿದೆ. ಜತೆ ಕಾರ್ಡ್ ಸಹ ರದ್ದುಗೊಳ್ಳುತ್ತದೆ.