ವಿಜಯಪುರ : ವಿಜಯಪುರದಲ್ಲಿ ಭೂಕಂಪನ ಪದೇ ಪದೇ (Earthquake In Karnataka) ಸಂಭವಿಸುತ್ತಿದ್ದು ನಗರದಲ್ಲಿ ಕಳೆದೊಂದು ವರ್ಷದಲ್ಲಿ ಹಲವಾರು ಬಾರಿ ಭೂಮಿ ಕಂಪಿಸಿದೆ. ಕಳೆದ ವರ್ಷದಿಂದ ಈವರೆಗೆ ಬರೋಬ್ಬರಿ 17 ಬಾರಿ ಭೂಕಂಪನ ಸಂಭವಿಸಿದ್ದು, ಗುಮ್ಮಟ ನಗರಿಯ ಜನತೆಯಲ್ಲಿ ಮುಂದೆ ಏನಾಗುತ್ತದೆಯೋ ಎಂಬ ಆತಂಕ ಶುರುವಾಗಿದೆ. ಶನಿವಾರ ರಾತ್ರಿ 8.17ಕ್ಕೆ ಭೂಮಿ ಕಂಪಿಸಿತ್ತು ಎನ್ನಲಾಗಿದೆ. ನಗರದ ಬಹುತೇಕ ಬಡಾವಣೆಯಲ್ಲಿ ಭೂ ಕಂಪನದ ಹಿನ್ನಲೆಯಲ್ಲಿ ಮನೆಯಿಂದ ಜನತೆ ಹೊರಗೆ ಓಡಿ ಬಂದಿದ್ದಾರೆ.
ವಿಜಯಪುರ ಬಳಿಯ ಮದಭಾವಿ ಗ್ರಾಮ ಭೂಕಂಪನದ ಕೇಂದ್ರ ಬಿಂದುವಾಗಿದೆ. ಭಾರಿ ಶಬ್ದ ಹಾಗೂ ಭೂಮಿ ಕಂಪನದ ಹಿನ್ನೆಲೆಯಲ್ಲಿ ಮನೆಯಲ್ಲಿನ ಸಾಮಾನುಗಳು ಕೆಳಗೆ ಬಿದ್ದಿವೆ. ರಿಕ್ಟರ್ ಮಾಪಕದಲ್ಲಿ 3.2 ಮ್ಯಾಗ್ನಿಟ್ಯೂಡ್ ಪ್ರಮಾಣದಲ್ಲಿ ಭೂಮಿ ಕಂಪಿಸಿರುವುದು ದಾಖಲಾಗಿದೆ.
ಇದನ್ನೂ ಓದಿ | Earthquake In Karnataka | ಕರ್ನಾಟಕ, ಮಹಾರಾಷ್ಟ್ರದ ಹಲವು ಜಿಲ್ಲೆಗಳಲ್ಲಿ ಕಂಪನ, ಕೇಂದ್ರಸ್ಥಾನ ಮಹಾರಾಷ್ಟ್ರ
ಗುಮ್ಮಟನಗರಿಯಲ್ಲಿ ಭೂಕಂಪನಕ್ಕೆ ಕಾರಣ?
ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ ಪದೇ ಪದೇ ಆಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ನ್ಯಾಶನಲ್ ಜಿಯೋಫಿಜಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್‌ನ ವಿಶೇಷ ತಂಡ ರಮೇಶ್ ದಿಕ್ಪಾಲ್ ನೇತೃತ್ವದಲ್ಲಿ ಅಧ್ಯಯನ ಮಾಡಿತ್ತು.
2021 ಅಕ್ಟೋಬರ್ ತಿಂಗಳಲ್ಲಿ ಕೋಲ್ಹಾರ ತಾಲೂಕಿನ ಮಸೂತಿ ಗ್ರಾಮಕ್ಕೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಜನರಿಗೆ ಸ್ಥೈರ್ಯ ತುಂಬಿದ್ದರು. ಈ ಭಾಗದ ಭೂಮಿಯಲ್ಲಿ ಮ್ಯಾಗ್ನಿಟೂಡ್ ಬಹಳ ಕಡಿಮೆಯಿದೆ. ವಾಡಿಕೆಗಿಂತ ಮಳೆ ಅಧಿಕ ಆಗಿರುವುದರಿಂದ ಭೂಮಿಯೊಳಗಿನ ಶಿಲಾಪದರಿನಲ್ಲಿ ಬಿರುಕು ಉಂಟಾಗಿದೆ. ಇದು ಭೂಮಿಯಲ್ಲಿ ನೈಸರ್ಗಿಕ ಪ್ರಕ್ರಿಯೆಯಾಗಿದೆ ಎಂದು ಹೇಳಿ ಗ್ರಾಮ ಪಂಚಾಯಿತಿಯಲ್ಲಿ ಭೂಕಂಪನ ಮಾಪಕ ಅಳವಡಿಸಿದ್ದರು. ಆದರೆ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಆಗುತ್ತಿರುವುದಕ್ಕೆ ನಿಖರ ಉತ್ತರ ಮಾತ್ರ ನಿರುತ್ತರವಾಗಿದೆ. ಗುಮ್ಮಟ ನಗರಿ ವಿಜಯಪುರದಲ್ಲಿ ಪದೇ ಪದೇ ಭೂಕಂಪನ ಆಗುತ್ತಿರುವುದಕ್ಕೆ ಆಲಮಟ್ಪಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಕಾರಣ ಎಂದೂ ಹೇಳಲಾಗುತ್ತಿದೆ.
ಇದನ್ನೂ ಓದಿ | Earthquake In Karnataka | ಬಾಗಲಕೋಟೆಯಲ್ಲಿ ಕಂಪಿಸಿದ ಭೂಮಿ, ಭಯದಲ್ಲಿ ಸ್ಥಳೀಯರು