ಮಂಗಳೂರು/ಮಡಿಕೇರಿ : ಮೂರು ವರ್ಷಗಳ ಹಿಂದೆ ಭೂ ಕುಸಿತ ದುರಂತ ಸಂಭವಿಸಿ ಅಪಾರ ಪ್ರಾಣಹಾನಿ ಉಂಟಾಗಿದ್ದ ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಮಂಗಳವಾರ ಮುಂಜಾನೆ ಮತ್ತೆ ಭೂಮಿ ಕಂಪಿಸಿದೆ. (Earthquake in Karnataka). ಕಳೆದ ಶನಿವಾರದಿಂದ ಮೂರನೇ ಬಾರಿ ಇಂಥ ಅನುಭವ ಉಂಟಾಗುತ್ತಿದ್ದು, ಹೆದರಿದ ಜನರು ಮನೆ ಬಿಟ್ಟು ಹೊರಗೋಡಿ ಬಂದಿದ್ದಾರೆ.
ಬೆಳಗ್ಗೆ 7.45 ರ ಸಮಯದಲ್ಲಿ 3.4 ಸೆಕೆಂಡುಗಳ ಕಾಲ ಕಂಪನದ ಅನುಭವ ಆಗಿದೆ. ಕೊಡುಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿಪ್ರದೇಶವಾಗಿರುವ ಕರಿಕೆ, ಪೆರಾಜೆ, ಭಾಗಮಂಡಲ, ಮಡಿಕೇರಿ, ನಾಪೋಕ್ಲು ಸೇರಿದಂತೆ ಹಲವೆಡೆ ಭೂ ಕಂಪಿಸಿದೆ.
ಕಳೆದ ವರ್ಷದ ಮಳೆಗಾಲದ ಆರಂಭದಲ್ಲಿ ಕೂಡ ಕೊಡಗು ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿತ್ತು. ಅಲ್ಲದೆ, 2018 ಹಾಗೂ 2019ರಲ್ಲಿಯೂ ಭಾರಿ ಪ್ರಮಾಣದ ಪ್ರಾಕೃತಿಕ ವಿಕೋಪ ಸಂಭವಿಸಿತ್ತು. ಇದರಿಂದ ಜೀವಹಾನಿಯೂ ಉಂಟಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೆ ಭೂ ಕಂಪನವಾಗುತ್ತಿದ್ದು, ಕೊಡಗು ಜನ ಆತಂಕಗೊಂಡಿದ್ದಾರೆ.
ಮಂಗಳೂರಿನ ಕಲ್ಲುಗುಂಡಿ ಸಂಪಾಜೆ ಭಾಗದಲ್ಲಿ ಮತ್ತೆ ಭೂ ಕಂಪಿಸಿದ ಅನುಭವ ಆಗಿದೆ. ಮುಂಜಾನೆ 7.45 ರ ಸುಮಾರಿಗೆ ಭೂ ಕಂಪನದ ಅನುಭವ ಆಗಿದ್ದು, ಜನರು ಭಯಗೊಂಡು ಮನೆಯಿಂದ ಹೊರಗೋಡಿ ಬಂದಿದ್ದಾರೆ.
ಕಳೆದ ಶನಿವಾರ (ಜೂನ್ 25) ಭೂಮಿ ಕಂಪಿಸಿ ಕೆಲವು ಮನೆಗಳಲ್ಲಿ ಬಿರುಕು ಉಂಟಾಗಿತ್ತು. ಕಳೆದ ಬಾರಿಗಿಂತ ಈ ಬಾರಿ ಕಂಪನ ತೀವ್ರವಾಗಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದಾರೆ.
ಇದನ್ನೂ ಓದಿ | ಚಿಕ್ಕಬಳ್ಳಾಪುರ ಜಿಲ್ಲೆಯ ಎರಡು ಕಡೆ ಭೂಮಿ ಕಂಪನ
ಇತ್ತೀಚೆಗೆ ಹಾಸನ ಹಾಗೂ ಕೊಡಗು ಜಿಲ್ಲೆಯ ನೈರುತ್ಯ ಗಡಿಭಾಗದಲ್ಲಿ ಭೂ ಕಂಪಿಸಿರುವ ಬಗ್ಗೆ ವರದಿಯಾಗಿದ್ದು, ಯಾರು ಸಹ ಆತಂಕಪಡುವ ಅಗತ್ಯ ಇಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್ ಅವರು ಭರವಸೆ ನೀಡಿದ್ದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಸಂದರ್ಭದಲ್ಲಿ ಜಿಲ್ಲಾಡಳಿತ ಕೈಗೊಂಡಿರುವ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿದ್ದರು.
ಭೂ ಕಂಪನದಿಂದ ಜಿಲ್ಲೆಯ ಯಾವುದೇ ಭಾಗದಲ್ಲಿ ಭೂಮಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿಲ್ಲ. ಈ ಹಿಂದೆ 2018 ರಲ್ಲಿ ರಿಕ್ಟರ್ ಮಾಪಕದಲ್ಲಿ 3.3 ರಷ್ಟು ಭೂ ಕಂಪಿಸಿರುವ ಬಗ್ಗೆ ವರದಿಯಾಗಿತ್ತು. ಆ ಸಂದರ್ಭದಲ್ಲಿ ಭೂಕುಸಿತ ಹಾಗೂ ಪ್ರವಾಹ ಉಂಟಾಗಿತ್ತು. ಈ ಬಾರಿ ಸರಾಸರಿ ಮಳೆಯ ಪ್ರಮಾಣ ಕಡಿಮೆ ಇದ್ದು, ಆ ನಿಟ್ಟಿನಲ್ಲಿ ಯಾರೂ ಆತಂಕ ಪಡಬೇಕಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದರು.
ಶನಿವಾರ (ಜೂನ್ 25) ಕರಿಕೆಯಿಂದ 04 ಕಿ.ಮೀ ವಾಯುವ್ಯ ಭಾಗದಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 2.3 ಎಂದು ದಾಖಲಾಗಿದೆ. ಹಾಗೂ ಕಳೆದ ವಾರ ಹಾಸನದ ಹೊಳೆನರಸೀಪುರ ತಾಲ್ಲೂಕಿನಲ್ಲಿ ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.4 ಮ್ಯಾಗ್ನಿಟ್ಯುಡ್ ಎಂದು ದಾಖಲಾಗಿದೆ. ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕೆಲವು ಗ್ರಾಮಗಳಲ್ಲಿ ಹಾಗೂ ಮಡಿಕೇರಿ ತಾಲೂಕಿನ ದೇವಸ್ತೂರು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದ್ದು ಯಾವುದೇ ರೀತಿಯ ಭೂಮಿ ಬಿರುಕು ಬಿಟ್ಟಿರುವ ಬಗ್ಗೆ ವರದಿಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.
ಇದನ್ನೂ ಓದಿ | Earthquake in Karnataka |ವಿಜಯಪುರ, ಕೊಡಗು, ಮಂಗಳೂರಿನಲ್ಲಿ ಮತ್ತೆ ಅದುರಿದ ಭೂಮಿ