Site icon Vistara News

Earthquake In Karnataka | ಕೊಡಗು ಭೂ ಕಂಪನ: ಹಿರಿಯ ಭೂ ವಿಜ್ಞಾನಿಗಳು ಹೇಳೋದೇನು?

Earthquake In Karnataka

ಮಡಿಕೇರಿ: ಮೂರು ವರ್ಷಗಳ ಹಿಂದೆ ಭೂ ಕುಸಿತ ದುರಂತ ಸಂಭವಿಸಿ ಅಪಾರ ಪ್ರಮಾಣದ ನಾಶ-ನಷ್ಟ, ಪ್ರಾಣ ಹಾನಿ ಉಂಟಾಗಿದ್ದ ಕೊಡಗು ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಕಳೆದ ಕೆಲವೇ ದಿನಗಳಲ್ಲಿ ನಾಲ್ಕು ಬಾರಿ ಭೂಮಿ ಕಂಪಿಸಿದೆ. ಇದು ಜನರಲ್ಲಿ ಭಯ, ಆತಂಕವನ್ನು ಸೃಷ್ಟಿ ಮಾಡಿದೆ. ಮಡಿಕೇರಿ ಮತ್ತು ಸುಳ್ಯ ನಡುವಿನ ಕರಿಕೆ ಹಾಗೂ ಚೆಂಬು ಭೂಕಂಪದ ಕೇಂದ್ರ ಬಿಂದುವಾಗಿತ್ತು. ಈ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರಿನಿಂದ ಹಿರಿಯ ಭೂ ವಿಜ್ಞಾನಿಗಳ ತಂಡ ಆಗಮಿಸಿದ್ದು, ಅಧ್ಯಯನ ಆರಂಭಿಸಿದೆ.

ಮಡಿಕೇರಿ ತಾಲೂಕಿನ ಕರಿಕೆ, ಚೆಂಬು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಜೂನ್ 25 ಮತ್ತು 29ರಂದು ಎರಡು ದಿನಗಳಲ್ಲಿ ಮೂರು ಬಾರಿ ಕಂಪನದ ಅನುಭವವಾಗಿತ್ತು. ಮಂಗಳವಾರ (ಜೂನ್‌ 28) ನಡೆದ ಕಂಪನದಿಂದ ಹಲವೆಡೆ ಭೂಮಿ, ಕಟ್ಟಡಗಳು ಬಿರುಕು ಬಿಟ್ಟ ವಿದ್ಯಮಾನವೂ ಜರುಗಿದೆ. ಮಂಗಳವಾರ ಬೆಳಗ್ಗೆ ((ಜೂನ್‌ 28) ) 7.45ಕ್ಕೆ ಚೆಂಬು ಗ್ರಾಮದಲ್ಲಿ ರಿಕ್ಟರ್ ಮಾಪಕದಲ್ಲಿ 3.0 ಪ್ರಮಾಣದ ಕಂಪನ ದಾಖಲಾಗಿತ್ತು. ಅದೇ ಸ್ಥಳದಲ್ಲಿ ಸಂಜೆ ರಿಕ್ಟರ್ ಮಾಪಕದಲ್ಲಿ 1.7 ತೀವ್ರತೆಯ ಕಂಪನವಾಗಿತ್ತು.

ಇದನ್ನೂ ಓದಿ | Earthquake in Karnataka | ಕೊಡಗಲ್ಲಿ ಮತ್ತೆ ಕಂಪಿಸಿದ ಭೂಮಿ: ಮನೆ ಬಿಟ್ಟು ಹೊರ ಬಂದ ಜನ

ಹೀಗೆ ಪದೇಪದೆ ಭೂಮಿ ಕಂಪಿಸುತ್ತಿದ್ದಂತೆಯೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಬೆಂಗಳೂರಿನಲ್ಲಿರುವ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ಹಿರಿಯ ಭೂ ವಿಜ್ಞಾನಿಗಳಾದ ಡಾ. ಜಗದೀಶ್ ಮತ್ತು ಡಾ. ರಮೇಶ್ ದಿಕ್ಪಾಲ್ ಅವರ ನೇತೃತ್ವದ ತಂಡವನ್ನು ಭೂಕಂಪ ಸಂಭವಿಸಿದ ಪ್ರದೇಶಗಳಿಗೆ ತೆರಳಿ ಅಧ್ಯಯನ ನಡೆಸಲು ಸೂಚನೆ ನೀಡಿತ್ತು.

ಸಿಸ್ಮೋಗ್ರಾಫ್‌ ಅಬ್ಸರ್ವರ್‌ (seismography observer earth)

ಜಿಲ್ಲೆಗೆ ಆಗಮಿಸಿದ ಹಿರಿಯ ಇಬ್ಬರು ವಿಜ್ಞಾನಿಗಳ ತಂಡದೊಂದಿಗೆ ಕೊಡಗು ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ಅಧಿಕಾರಿ ಅನನ್ಯ ವಾಸುದೇವ್ ಅವರೂ ಸೇರಿಕೊಂಡಿದ್ದಾರೆ. ತಂಡವು, ಭೂಕಂಪವಾಗಿದ್ದ ಚೆಂಬು ಗ್ರಾಮಕ್ಕೆ ಭೇಟಿ ನೀಡಿದೆ. ಜನರ ಓಡಾಟ ಕಡಿಮೆ ಇರುವ ಸ್ಥಳದಲ್ಲಿ ಸಿಸ್ಮೋಗ್ರಾಫ್‌ ಅಬ್ಸರ್ವರ್‌ (seismography observer earth) ತಂತ್ರಜ್ಞಾನವನ್ನು ಅಳವಡಿಸಿ ಅಧ್ಯಯನ ಆರಂಭಿಸಿದೆ. ಸ್ಥಳ ಪರಿಶೀಲಿಸಿದ ಬಳಿಕ ಸೂಕ್ತ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಮತ್ತೊಂದು ಭೂಕಂಪನ ಮಾಪನವನ್ನು ಚೆಂಬುವಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಥಾಪಿಸಿದೆ.

ಈ ಕುರಿತು ಅನನ್ಯ ವಾಸುದೇವ್ ಮಾತನಾಡಿ, ಭೂಕಂಪನವಾದ ಯಾವುದೇ ಭಾಗದಲ್ಲಿ ಏನು ತೊಂದರೆಯಾಗಿಲ್ಲ. ಯಾವುದೇ ಬಿರುಕು ಕೂಡ ನಮ್ಮ ಅಧ್ಯಯನದಿಂದ ತಿಳಿದು ಬಂದಿಲ್ಲ ಎಂದಿದ್ದಾರೆ. ಮುಂದಿನ ದಿನಗಳಲ್ಲಿ ಕಂಪನಗಳು ಉಂಟಾದಲ್ಲಿ ಈ ಭೂಕಂಪನ ಮಾಪಕದಲ್ಲಿ ದಾಖಲಾಗುತ್ತದೆ. ಇದರ ಮಾಹಿತಿ ನೇರವಾಗಿ KSNDM ಕೇಂದ್ರಕ್ಕೆ ರವಾನೆಯಾಗಲಿದೆ. ಅದರ ಆಧಾರದಲ್ಲಿ ಎಷ್ಟು ಪ್ರಮಾಣದ ಕಂಪನವಾಗಿದೆ ಎಂಬುದನ್ನು ತಿಳಿಯಲು ಇದು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Earthquake in Karnataka | ಕೊಡಗಿನಲ್ಲಿ ಒಂದೇ ದಿನ ಎರಡು ಬಾರಿ ಕಂಪಿಸಿದ ಭೂಮಿ

Exit mobile version