ಬೆಂಗಳೂರು: ಗುರುವಾರ ರಾಜ್ಯದ ಹಾಸನ, ಮಂಡ್ಯ, ಕೊಡಗಿನ ಕೆಲ ಭಾಗದಲ್ಲಿ ಲಘು ಭೂಕಂಪನ ಸಂಭವಿಸಿದ ಬೆನ್ನಲ್ಲೇ ಶುಕ್ರವಾರ ಕೂಡ ರಾಜ್ಯದ ಕೆಲ ಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ.
ಶುಕ್ರವಾರ ರಾತ್ರಿ 10.38ರ ಸುಮಾರಿಗೆ ವಿಜಯಪುರ, ಕೊಡಗು ಹಾಗೂ ಮಂಗಳೂರಿನಲ್ಲಿ ಭೂಮಿ ಕಂಪಿಸಿದ್ದು, ಜನರು ಆತಂಕದಿಂದ ಮನೆಗಳಿಂದ ಓಡಿ ಹೊರ ಬಂದಿದ್ದಾರೆ. ವಿಜಯಪುರದ ಹಲವೆಡೆ ಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 2.4 ತೀವ್ರತೆಯಲ್ಲಿ ಭೂಮಿ ಕಂಪಿಸಿದೆ. ರೈಲ್ವೇ ಸ್ಟೇಷನ್ ಏರಿಯಾ, ಕೀರ್ತಿ ನಗರ, ಅಲ್ ಅಮೀನ್ ಏರಿಯಾ ಸೇರಿ 4 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಆದರೆ, ಈವರೆಗೂ ಈ ಬಗ್ಗೆ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗದಲ್ಲೂ ಭೂಮಿ ಕಂಪನದ ಅನುಭವವಾಗಿದೆ. ಸುಮಾರು 3 ರಿಂದ 4 ಸೆಕೆಂಡ್ಗಳ ಕಾಲ ಭೂಮಿ ಕಂಪಿಸಿದ್ದು, ಕೆಲವು ಕಡೆ ಭೂ ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮಡಿಕೇರಿ ತಾಲೂಕಿನ ಚೆಂಬು, ಕರಿಕೆ ಸಂಪಾಜೆ ವ್ಯಾಪ್ತಿಯಲ್ಲಿ ಕಂಪನದ ಅನುಭವ ಹೆಚ್ಚಾಗಿತ್ತು.
ಇದನ್ನೂ ಓದಿ | ಹಾಸನ ಜಿಲ್ಲೆಯ ಹಲವೆಡೆ ಲಘು ಭೂಕಂಪ, 3.4 ತೀವ್ರತೆ, ಜನತೆಯಲ್ಲಿ ಆತಂಕ
ಕೊಡಗು ಗಡಿಗೆ ಹೊಂದಿಕೊಂಡಿರುವ ದಕ್ಷಿಣ ಜಿಲ್ಲೆಯ ಕಲ್ಲುಗುಂಡಿ, ಗೂನಡ್ಕ, ಮರ್ಕಂಜ, ಕೊಡಪ್ಪಾಲ, ಅರಂತೋಡು ಗ್ರಾಮಗಳಲ್ಲಿ ಶುಕ್ರವಾರ ಬೆಳಗ್ಗೆ 9.10 ರಿಂದ 9.15 ರ ಅಸುಪಾಸಿನಲ್ಲಿ ಭೂಮಿ ಕಂಪಿಸಿದೆ. ಪರಿಣಾಮ ಕೆಲ ಮನೆಗಳ ಗೋಡೆಗಳಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.