ಬೆಂಗಳೂರು: ಮುಂದುವರಿದ ಹಲವು ದೇಶಗಳಲ್ಲಿ ಸಂಸ್ಥೆ ಚಾಲಿತ ಅರ್ಥ ವ್ಯವಸ್ಥೆ ಇದೆ. ಆದರೆ, ನಮ್ಮಲ್ಲಿ ಕೈಗಾರಿಕೆ ಚಾಲಿತ ಅರ್ಥ ವ್ಯವಸ್ಥೆಯಿದೆ. ದೇಶ ಸಮಗ್ರವಾಗಿ ಅಭಿವೃದ್ಧಿಗೊಳ್ಳಬೇಕು ಎಂದಾದರೆ ಸಂಸ್ಥೆ ಚಾಲಿತ ಅರ್ಥ ವ್ಯವಸ್ಥೆಯತ್ತ ನಾವು ಹೊರಳುವುದು ಅಗತ್ಯ. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿ ಮಹತ್ವದ ಪಾತ್ರ ನಿಭಾಯಿಸಲಿದೆ ಎಂದು (Eco Youth) ಉನ್ನತ ಶಿಕ್ಷಣ ಮತ್ತು ಐಟಿ ಬಿಟಿ ಸಚಿವ ಡಾ.ಸಿ.ಎನ್. ಅಶ್ವತ್ಥ್‌ನಾರಾಯಣ ಹೇಳಿದ್ದಾರೆ.
ಅವರು ಸಿಎಂಆರ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ, ಪರ್ಯಾವರಣ ಗತಿ ವಿಧಿ ಸಂಘ-ಸಂಸ್ಥೆಗಳ ಸಹಯೋಗದಿಂದ ಹಮ್ಮಿಕೊಳ್ಳಲಾಗಿರುವ ಎರಡು ದಿನಗಳ “ಇಕೋ ಯೂತ್” ನವೋದ್ಯಮ ಸ್ಪರ್ಧೆ ಮತ್ತು ಶೃಂಗಸಭೆ ಉದ್ಘಾಟಿಸಿ ಮಾತನಾಡಿದರು.
ಭಾರತೀಯರು ಏಕಾಂಗಿಯಾಗಿ ಉತ್ತಮ ಸಾಧನೆ ಮಾಡುತ್ತಾರೆ. ಆದರೆ, ತಂಡವಾಗಿ ಸೋಲುತ್ತಾರೆ. ವಿದ್ಯಾರ್ಥಿಗಳು, ನವೋದ್ಯಮಿಗಳು ಒಂದು ತಂಡ ಸ್ಫೂರ್ತಿಯಿಂದ ಕೆಲಸ ಮಾಡುವುದನ್ನು ಕಲಿತುಕೊಳ್ಳಬೇಕು. ಮುಂದಿನ 25 ವರ್ಷದಲ್ಲಿ ಭಾರತವು ವಿಶ್ವದ ಅಗ್ರಮಾನ್ಯ ದೇಶವಾಗುವ ನಿಟ್ಟಿನಲ್ಲಿ ನಮ್ಮೆಲ್ಲರ ಶ್ರಮ ಅಗತ್ಯ ಎಂದು ಹೇಳಿದರು.
ಉದ್ಯಮಶೀಲರಿಗೆ ಸಾಮಾಜಿಕ ಸಂಕಷ್ಟಗಳು, ತೊಂದರೆಗಳು ಸಾಮಾನ್ಯ. ಆದರೆ, ಇವುಗಳನ್ನು ಉದ್ದಿಮೆಗೆ, ಆವಿಷ್ಕಾರಕ್ಕೆ ಅವಕಾಶವನ್ನಾಗಿ ಮಾರ್ಪಾಡು ಮಾಡಿಕೊಳ್ಳಬೇಕು. ಮರುಬಳಕೆ ಇಂಧನ, ಎಲೆಕ್ಟ್ರಿಕಲ್ ವಾಹನ, ಬ್ಯಾಟರಿ, ಹಸಿರು ಆಮ್ಲಜನಕ, ತ್ಯಾಜ್ಯದ ಮರುಬಳಕೆ ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ ನವೋದ್ಯಮಕ್ಕೆ ಉತ್ತಮ ಅವಕಾಶಗಳಿವೆ. 2050ಕ್ಕೆ ಶೂನ್ಯ ಇಂಗಾಲದ ಗುರಿ ಹೊಂದಲಾಗಿದ್ದು, ಈ ಗುರಿ ಸಾಧಿಸುವಲ್ಲಿ ನವೋದ್ಯಮಗಳು ಪ್ರಮುಖ ಭೂಮಿಕೆಯಾಗಿ ನಿಭಾಯಿಸಬೇಕು ಎಂದು ಹೇಳಿದರು.
ಆರ್‌ಎಸ್‌ಎಸ್‌ನ ಹಿರಿಯ ನಾಯಕ ನಾ. ತಿಪ್ಪೆಸ್ವಾಮಿ ಮಾತನಾಡಿ, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಉಪಕರಣಗಳ ಸಂಸ್ಕರಣೆ ಮತ್ತು ಪುನರ್ಬಳಕೆ ನಮ್ಮ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಬಲ್ಲದು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯ, ಬುದ್ಧಿಮತ್ತೆ ಬಳಸಿ ಪರಿಸರಸ್ನೇಹಿ ಬದುಕು ರೂಪಿಸಲು ನೆರವಾಗಬೇಕು ಎಂದು ಕರೆ ನೀಡಿದರು.
ನವೋದ್ಯಮಿ ಮೆಕಿನ್ ಮಹೇಶ್ವರಿ ಮಾತನಾಡಿ, ನವೋದ್ಯಮಿಗಳಲ್ಲಿ ಮಹತ್ವಾಕಾಂಕ್ಷೆಯ ಜತೆಗೆ ಸ್ವಯಂ ಅರಿವು ಇರಬೇಕು. ಯುವ ಜನರು ಭೂಮಿ ಮತ್ತು ಹವಾಮಾನದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ನಮ್ಮದು ಮೂಲತಃ ಬಳಸಿ, ಬಿಸಾಡುವ ಸಂಸ್ಕೃತಿಯಲ್ಲ ಎಂದು ಹೇಳಿದರು. ಸಿಎಂಆರ್ ಶಿಕ್ಷಣ ಸಂಸ್ಥೆಗಳ ಸಮೂಹದ ಉಪಾಧ್ಯಕೆ ಡಾ. ತ್ರಿಷ್ಠಾ ರಾಮಮೂರ್ತಿ ಉಪಸ್ಥಿತರಿದ್ದರು.
ಇದನ್ನೂ ಓದಿ | ವಿಸ್ತಾರ Interview | ಅಪ್ರಸ್ತುತ ವ್ಯಕ್ತಿಗಳು ನೂರು ಫ್ರೀಡಂ ಮಾರ್ಚ್ ಮಾಡಿದರೂ ವೇಸ್ಟ್: ಡಾ. ಸಿ.ಎನ್. ಅಶ್ವತ್ಥನಾರಾಯಣ