Site icon Vistara News

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳಿಗೆ ಆರ್ಥಿಕ ಬಲ; ದಿವಾಳಿ ಎಂದವರಿಗೆ ರಾಮಲಿಂಗಾರೆಡ್ಡಿ ತಿರುಗೇಟು

Minister Ramalinga Reddy

ಬೆಂಗಳೂರು: ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ದಿವಾಳಿಯಾಗುತ್ತಿವೆ ಎಂಬ ಆರೋಪ ಬಿಜೆಪಿ ನಾಯಕರು ಮಾಡಿದ್ದರು. ಅದಕ್ಕೆ ಪ್ರತಿಯಾಗಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ದಾಖಲೆ ಸಮೇತ ಶುಕ್ರವಾರ ತಿರುಗೇಟು ನೀಡಿದ್ದಾರೆ. ಶಕ್ತಿ ಯೋಜನೆಯಿಂದ ನಿಗಮಗಳಿಗೆ ಆರ್ಥಿಕ ಬಲ ಬಂದಿದೆಯೋ ಹೊರತು ದಿವಾಳಿ ಎದ್ದೋಗಿಲ್ಲ ಎಂದು ಕಿಡಿಕಾರಿದ್ದಾರೆ.

ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳು ದಿವಾಳಿಯಾಗುತ್ತಿವೆ. ನೌಕರರಿಗೆ ಸರಿಯಾದ ಸಮಯಕ್ಕೆ ಸಂಬಳವೇ ನೀಡಲಾಗುತ್ತಿಲ್ಲ ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, ಶಕ್ತಿ ಯೋಜನೆಯಿಂದ ನಿಗಮಗಳಿಗೆ ಆರ್ಥಿಕ ಬಲ ಬಂದಿದೆಯೋ ಹೊರತು ದಿವಾಳಿ ಎದ್ದೋಗಿಲ್ಲ. ಅಲ್ಲದೆ ಕೆಎಸ್‌ಆರ್‌ಟಿಸಿ ಸೇರಿ ನಾಲ್ಕೂ ನಿಗಮಗಳ ನೌಕರರಿಗೆ ಸಂಬಳ ನೀಡುತ್ತಿರುವುದರ ಬಗ್ಗೆ ದಾಖಲೆ ಸಮೇತ ತಿರುಗೇಟು ಕೊಟ್ಟರು.

ಶಕ್ತಿ ಯೋಜನೆ ಜಾರಿಯಾಗಿ ಇಂದಿಗೆ 54 ದಿನಗಳಾಗಿವೆ. ಯೋಜನೆ ಜಾರಿಯಾದ ಬಳಿಕ 30 ಕೋಟಿಗೂ ಅಧಿಕ ಮಹಿಳೆಯರು ಸಾರಿಗೆ ಬಸ್‌ಗಳಲ್ಲಿ ಓಡಾಡಿದ್ದಾರೆ. ಒಟ್ಟು 749 ಕೋಟಿ ರೂ. ಮೌಲ್ಯದ ಟಿಕೆಟ್ ಹಂಚಿಕೆ ಮಾಡಲಾಗಿದೆ. ಈ ಪೈಕಿ ಜೂನ್ ತಿಂಗಳ 258 ಕೋಟಿ ರೂಪಾಯಿಯಲ್ಲಿ ಅರ್ಧ ಎಂದರೆ 125 ಕೋಟಿ ರೂಪಾಯಿ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಹಣ ಬಿಡುಗಡೆ ಮಾಡಲು ಕಾಲವಕಾಶ ಕೇಳಲಾಗಿದೆ. ಜತೆಗೆ ಹಣಕಾಸು ಇಲಾಖೆ ಸಾರಿಗೆ ನಿಗಮಗಳಿಗೆ ಕೆಲವೊಂದು ಸ್ಪಷ್ಟತೆ ಕೇಳಿದ್ದು, ನಾಲ್ಕೂ‌ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಹಣಕಾಸು ಇಲಾಖೆಗೆ ವರದಿ ಕೊಡುತ್ತಿದ್ದಾರೆ. ಅದಾದ ಬಳಿಕ ಸಂಪೂರ್ಣ ಹಣ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಸಚಿವರು ಸ್ಪಷ್ಟ ಪಡಿಸಿದರು.

ಶಕ್ತಿ ಯೋಜನೆ ಬಹಳ ಯಶಸ್ವಿಯಾಗಿ ಜಾರಿಯಾಗಿದೆ. ಪ್ರತಿ ನಿತ್ಯ 60 ಲಕ್ಷ ಮಹಿಳೆಯರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಇದರ ಯಶಸ್ಸನ್ನು ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದ ಸಚಿವರು, ಇನ್ನು ಶಕ್ತಿಯೋಜನೆಯಿಂದ ಸಾರಿಗೆ ನಿಗಮಗಳ ಸಾಲದ ಹೊರೆಯೂ ಕಡಿತಗೊಳ್ಳುತ್ತಿದೆ. ಈವರೆಗೆ ಸಾರಿಗೆ ನಿಗಮಗಳಿಗೆ 4,553 ಕೋಟಿ ರೂಪಾಯಿ ಸಾಲವಿದೆ. ಈ ವರ್ಷದ ಅಂತ್ಯದಲ್ಲಿ ಆ ಸಾಲವೂ ತೀರಲಿದೆ ಎಂದು ತಿಳಿಸಿದರು.


Exit mobile version