ಬೆಂಗಳೂರು: ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಯಲ್ಲೋ ಟ್ಯೂನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಶೆಲ್ ಕಂಪನಿಯ ಮೇಲೆ ದಾಳಿ ಮಾಡಿದ್ದು, ಸುಮಾರು ೩೭೦ ಕೋಟಿ ರೂ. ಮೌಲ್ಯದ ಸಂಪತ್ತನ್ನು ಫ್ರೀಜ್ ಮಾಡಿದೆ. ಇದು ಕ್ರಿಪ್ಟೋ ಕರೆನ್ಸಿ ಸೇರಿದಂತೆ ಹಲವು ವ್ಯವಹಾರಗಳನ್ನು ನಡೆಸುವ ಸಂಸ್ಥೆಯಾಗಿದ್ದು, ಸುಮಾರು ೩೭೦ ಕೋಟಿ ರೂ. ಮೌಲ್ಯದ ಡಿಜಿಟಲ್ ಕರೆನ್ಸಿಯನ್ನು ಬ್ಯಾಂಕ್‌ನಲ್ಲಿ ಇಟ್ಟಿತ್ತು ಎಂದು ತಿಳಿದುಬಂದಿದೆ.
ಬೆಂಗಳೂರಿನ ಈ ಕಚೇರಿಯಲ್ಲಿ ಕಳೆದ ಮೂರು ದಿನಗಳಿಂದ ಇ.ಡಿ ಅಧಕಾರಿಗಳು ತಪಾಸಣೆ ನಡೆಸುತ್ತಿದ್ದಾರೆ. ಈ ಕಂಪನಿಯು ಇಬ್ಬರು ಚೀನಾ ಮೂಲದ ವ್ಯಕ್ತಿಗಳ ಪಾಲುದಾರಿಕೆಯನ್ನೂ ಹೊಂದಿದೆ ಎಂದು ಹೇಳಲಾಗಿದೆ. ಆ ಇಬ್ಬರು ೨೦೨೦ರಲ್ಲೇ ದೇಶ ಬಿಟ್ಟು ಹೋಗಿದ್ದಾರೆ.
ಇ.ಡಿ. ಈಗಾಗಲೇ ಮೊಬೈಲ್ ಫೋನ್ ಬಳಸಿ ಆ್ಯಪ್‌ಗಳ ಮೂಲಕ ಲೋನ್ ಕೊಡುವ ಕೆಲವು ಕಂಪನಿಗಳ ಬಗ್ಗೆ ತನಿಖೆ ನಡೆಸುತ್ತಿದೆ. ಈ ಕಂಪನಿಗಳಿಗೆ ಚೀನಾದಿಂದ ಹಣ ಬರುತ್ತಿದೆ ಎಂಬ ಆಪಾದನೆಗಳಿವೆ. ಇಂಥ ಹಲವು ಕಂಪನಿಗಳನ್ನು ನೋಡಿರುವ ಇ.ಡಿ ಅಧಿಕಾರಿಗಳೇ ಯಲ್ಲೋ ಟ್ಯೂನ್ ಟೆಕ್ನಾಲಜೀಸ್‌ನಲ್ಲಿ ನಡೆದಿರುವ ಅಕ್ರಮ ಚಟುವಟಿಕೆಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗಿದೆ. ದೇಶದಲ್ಲಿ ಲೋನ್ ಆ್ಯಪ್‌ಗಳ ಮೇಲೆ ದಾಳಿ ತೀವ್ರವಾದಾಗ ಈ ಕಂಪನಿಗಳು ಬಾಗಿಲು ಮುಚ್ಚಿ ಲಾಭವನ್ನು ಬೇರೆ ಉದ್ಯಮದಲ್ಲಿ ತೊಡಗಿಸಿಕೊಂಡಿವೆ ಎನ್ನಲಾಗಿದೆ.
ಈ ಕಂಪನಿಯ ದಾಳಿ ವೇಳೆ ಕೆಲವೊಂದು ಮಹತ್ವದ ಸಂಗತಿಗಳು ಬಯಲಿಗೆ ಬಂದಿವೆ. ಅದೆಷ್ಟೋ ಬ್ಯಾಂಕೇತರ ಹಣಕಾಸು ಕಂಪನಿಗಳು ಮತ್ತು ಫಿನ್‌ಟೆಕ್ ಕಂಪನಿಗಳು ಯಲ್ಲೋ ಟ್ಯೂನ್‌ನ ವ್ಯಾಲೆಟ್‌ಗಳಲ್ಲಿ ಹಣ ತೊಡಗಿಸಿವೆ ಎನ್ನಲಾಗಿದೆ. ಅಂದರೆ ಈ ಕ್ರಿಪ್ಟೋ ವ್ಯವಹಾರಗಳಲ್ಲಿ ದೊಡ್ಡ ಮೊತ್ತದ ಲಾಭ ಬರಲಿದೆ ಎನ್ನುವ ನಿರೀಕ್ಷೆಯೊಂದಿಗೆ ಹೂಡಿಕೆ ಮಾಡಿವೆ ಎಂದು ಹೇಳಲಾಗಿದೆ. ಈ ಎಲ್ಲ ಮೊತ್ತಗಳು ಈ ಹಿಂದೆ ನಡೆಸಿದ ದುಷ್ಟ ಹಾಗೂ ಜನರನ್ನು ಸುಲಿದ ಪ್ರಕ್ರಿಯೆಯಲ್ಲಿ ಜಮಾ ಮಾಡಿಕೊಂಡ ಹಣವಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.
ಈ ಕಂಪನಿಯಲ್ಲಿ ಹಣ ತೊಡಗಿಸಿದವರು ಯಾರು, ಭದ್ರತಾ ಠೇವಣಿ ಇಟ್ಟವರು ಯಾರು ಎನ್ನುವುದನ್ನು ತಿಳಿಯುವುದಕ್ಕಾಗಿ ದಾಳಿ ಮಾಡಲಾಗಿದೆ. ಆದರೆ, ಕಂಪನಿಯ ಪ್ರಾಯೋಜಕರು ಪರಾರಿಯಾಗಿದ್ದಾರೆ. ಈ ಕಂಪನಿಯು ಚೀನಾದ ನಾಗರಿಕರಾದ ಅಲೆಕ್ಸ್ ಮತ್ತು ಕಾಯ್ದಿ ಎಂಬವರ ಹೆಸರಿನಲ್ಲಿದೆ (ನಿಜವಾದ ಹೆಸರು ಗೊತ್ತಿಲ್ಲ). ಕೆಲವೊಂದು ಚಾರ್ಟರ್ಡ್ ಅಕೌಂಟೆಂಟ್‌ಗಳು ಹಾಗೂ ಕಂಪನಿ ಸೆಕ್ರೆಟರಿಗಳ ಬೆಂಬಲದೊಂದಿಗೆ ಅನಾಮಿಕ ನಿರ್ದೇಶಕರ ಹೆಸರಿನಲ್ಲಿ ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.