ಬೆಂಗಳೂರು: ಯೂಸುಫ್ ಶರೀಫ್‌ಗೆ (ಕೆಜಿಎಫ್ ಬಾಬು) ಶಾಸಕ ಜಮೀರ್ ಅಹ್ಮದ್ ದೋಸ್ತಿಯೇ ಕಂಟಕವಾಗುವ ಸಾಧ್ಯತೆ ಇದೆ. ಈ ಹಿಂದೆ ಕೆಜಿಎಫ್ ಬಾಬು ಮನೆ ಮೇಲೆ ದಾಳಿ ಮಾಡಿದ್ದ ಇಡಿ ಅಧಿಕಾರಿಗಳು (ED Case) ಚಿನ್ನಾಭರಣ ಹಾಗೂ ದುಬಾರಿ ವಾಚ್ಗಳನ್ನು ವಶಕ್ಕೆ ಪಡೆದಿದ್ದರು. ಆದರೆ, ಇವುಗಳನ್ನು ವಾಪಸ್ ಪಡೆದುಕೊಳ್ಳಲು ಬಾಬು ಈಗ ಹರಸಾಹಸಪಡುತ್ತಿದ್ದಾರೆ.
ಐಎಂಎ ಕೇಸ್‌ನಲ್ಲಿ ಮನ್ಸೂರ್ ಆಲಿ ಖಾನ್ ಜಮೀರ್ ಅಹ್ಮದ್‌ಗೆ 63 ಕೋಟಿ ರೂಪಾಯಿ ನೀಡಿರುವುದಾಗಿ ಹೇಳಿಕೆ ನೀಡಿದ್ದ. ಹಾಗೆಯೇ ಕೆಜಿಎಫ್ ಬಾಬು ಕೂಡ ಜಮೀರ್ ಅಹ್ಮದ್‌ಗೆ ಮೂರು ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ನೀಡಿದ್ದರು. ಅದನ್ನು ವಾಪಸ್ ಪಡೆದುಕೊಂಡಿಲ್ಲ ಎಂದು ಇಡಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ | ಜೈಲು ಸೇರಿದ ಅರ್ಪಿತಾ ಮುಖರ್ಜಿ; ಆಕೆಯ ಜೀವ ಅಪಾಯದಲ್ಲಿದೆ ಎಂದು ಕೋರ್ಟ್ಗೆ ಹೇಳಿದ ಇಡಿ
ಈಗಾಗಲೇ ಮನ್ಸೂರ್ ಕೇಸ್ ಸಂಬಂಧ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೂ ದಾಳಿ ನಡೆಸಿದ್ದಲ್ಲದೆ, ನಂತರ ಅವರಿಗೆ ನೋಟಿಸ್ ನೀಡಿ ವಿಚಾರಣೆ ಮಾಡಲಾಗಿತ್ತು. ಇತ್ತ ಕೆಜಿಎಫ್ ಬಾಬು ಮನೆಯಲ್ಲಿದ್ದ ಚಿನ್ನಾಭರಣ ಸೇರಿ ಹಲವು ವಸ್ತುಗಳನ್ನು ವಾಪಸ್ ಪಡೆಯಲು ಇಡಿ, ಅಜ್ಯುಡಿಕ್ಟಿಂಗ್ ಕಮಿಟಿಗೆ ಅರ್ಜಿ ಕೂಡ ಸಲ್ಲಿಸಿದ್ದರು. ಆದರೆ, ಇಡಿ ಅಧಿಕಾರಿಗಳು ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಆಗಸ್ಟ್ 10ರೊಳಗೆ ಉತ್ತರ ನೀಡಲು ಕೆಜಿಎಫ್ ಬಾಬುಗೆ ಅಜ್ಯುಡಿಕ್ಟಿಂಗ್ ಕಮಿಟಿಯಿಂದ ಶೋಕಾಸ್ ನೋಟಿಸ್ ನೀಡಲಾಗಿದೆ. ಇವೆಲ್ಲವು ಕೆಜಿಎಫ್ ಬಾಬುಗೆ ತಲೆನೋವಾಗಿ ಪರಿಣಮಿಸಿದೆ.
ಇನ್ನು ಈ ಬಗ್ಗೆ ಇತ್ತೀಚೆಗೆ ಪ್ರತಿಕ್ರಿಯಿಸಿರುವ ಕೆಜಿಎಫ್ ಬಾಬು, ಯಾವ ಕ್ಷಣದಲ್ಲಿ ಇ.ಡಿ. ಅಧಿಕಾರಿಗಳು ಹಾಗೂ ಸಿಬಿಐನವರು ಬರುತ್ತಾರೆ ಎಂದು ನನಗೆ ನಿದ್ದೆ ಬರುತ್ತಿಲ್ಲ. ಟೆನ್ಷನ್ ಕೂಡ ಹೆಚ್ಚಾಗಿದೆ ಎಂದು ಹೇಳಿದ್ದರು. ನಾನು 40 ಕೋಟಿ ರೂಪಾಯಿ ತೆರಿಗೆ ಕಟ್ಟುತ್ತೇನೆ, ಯಾವುದೇ ರೀತಿಯಲ್ಲಿ ನಾನು ಕಳ್ಳತನ ಮಾಡಿಲ್ಲ, ಹಾಗಿದ್ದರೂ ಇಡಿ ನನಗೆ ಟಾರ್ಚರ್ ನೀಡುತ್ತಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ | ಅಕ್ರಮ ಆಸ್ತಿ ಪ್ರಕರಣ: ಕೊನೆಗೂ ಎಸಿಬಿ ವಿಚಾರಣೆಗೆ ಹಾಜರಾದ ಶಾಸಕ ಜಮೀರ್ ಅಹಮದ್