ಬೆಂಗಳೂರು: 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ (Board exams) ನಡೆಸಲು ಶಿಕ್ಷಣ ಇಲಾಖೆ (Education Department) ನಿರ್ಧಾರ ಮಾಡಿದೆ. ಮಕ್ಕಳ ಕಲಿಕಾ ದೃಷ್ಟಿಯಿಂದ 9ನೇ ತರಗತಿ ಮಕ್ಕಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆ (Summative Assessment Exam) ನಡೆಸಲಾಗುತ್ತಿದ್ದರೆ, 11ನೇ ತರಗತಿ ಮಕ್ಕಳಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ (Education News) ಕೆಲವು ಬದಲಾವಣೆ ಮಾಡಲು ನಿರ್ಧಾರ ಮಾಡಲಾಗಿದೆ.
ಸದ್ಯ ಕಳೆದ ವರ್ಷವಷ್ಟೇ 5 ಮತ್ತು 8ನೇ ತರಗತಿ ಮಕ್ಕಳಿಗೆ ಮೌಲ್ಯಾಂಕನ ಪರೀಕ್ಷೆಯನ್ನು ಶಿಕ್ಷಣ ಇಲಾಖೆ ಜಾರಿ ಮಾಡಿತ್ತು. ಸಾಕಷ್ಟು ವಿರೋಧಗಳ ಮಧ್ಯೆಯೇ ಈ ವರ್ಷ 9 ಮತ್ತು 11 ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಯನ್ನು ನಿಗದಿ ಮಾಡಿ ಆದೇಶವನ್ನು ಹೊರಡಿಸಿದೆ.
2023/24ನೇ ಸಾಲಿನಲ್ಲಿಯೇ ಈ ನಿಯಮವನ್ನು ಜಾರಿ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುವ ಎಲ್ಲ ಅನುದಾನಿತ, ಸರ್ಕಾರಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳಿಗೆ ಈ ಆದೇಶ ಅನ್ವಯ ಆಗಲಿದೆ.
ಪ್ರಥಮ , ದ್ವಿತೀಯ ಪಿಯು ಪರೀಕ್ಷೆಯಲ್ಲಿ ವ್ಯತ್ಯಾಸ
ಈ ನೂತನ ಆದೇಶದಿಂದ ಪ್ರಥಮ , ದ್ವಿತೀಯ ಪಿಯು ಪರೀಕ್ಷೆಯಲ್ಲಿ ವ್ಯತ್ಯಾಸ ಆಗಲಿದೆ. ದ್ವಿತೀಯ ಪಿಯುಸಿಯಲ್ಲಿ ಪರೀಕ್ಷಾ ಮೌಲ್ಯ ಮಾಪನ ಬೇರೆ ಕಡೆ ನಡೆಯುತ್ತದೆ. ಆದರೆ, ಪ್ರಥಮ ಪಿಯು ಪರೀಕ್ಷೆ ಮೌಲ್ಯಮಾಪನ ಆಯಾ ಕಾಲೇಜುಗಳಲ್ಲಿ ನಡೆಯುತ್ತದೆ.
ನಿಯಮ ಯಾವ ರೀತಿ ಇರುತ್ತದೆ?
ದ್ವಿತೀಯ ಪಿಯು ಪರೀಕ್ಷೆಯಲ್ಲಿ ಇರುವ ಹಾಗೇ ಮೇಲ್ವಿಚಾರಕರು ಪ್ರಥಮ ಪಿಯು ಅಲ್ಲಿಯೂ ಇರುತ್ತಾರೆ. ದ್ವಿತೀಯ ಪಿಯು ಪರೀಕ್ಷೆ ಹಾಗೆಯೇ ಇಲ್ಲಿಯೂ ಪರೀಕ್ಷಾ ಪ್ರಕ್ರಿಯೆ ನಡೆಯುತ್ತದೆ.
ಪ್ರಶ್ನೆ ಪತ್ರಿಕೆಯನ್ನು ಇಲ್ಲಿಯೂ ಕೂಡ ಪಿಯು ಬೋರ್ಡ್ನಿಂದಲೇ ಕಳುಹಿಸಲಾಗುತ್ತದೆ. ಮೊದಲು ವಾರ್ಷಿಕವಾಗಿ ಒಂದು ಪರೀಕ್ಷೆ ನಡೆಸಲಾಗುತ್ತದೆ. ಅನುತ್ತೀರ್ಣರಾದರೆ ಮತ್ತೊಂದು ಪೂರಕ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪೂರಕ ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಮುಂದೇನು ಎಂಬ ಬಗ್ಗೆ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಬಳಿ ಇನ್ನೂ ಉತ್ತರ ಇಲ್ಲ. ಪರೀಕ್ಷಾ ಪ್ರಕ್ರಿಯೆ ದ್ವಿತೀಯ ಪಿಯು ಹಾಗೆಯೇ ಇರುತ್ತದೆ. ಆದರೆ ಮೌಲ್ಯ ಮಾಪನವನ್ನು ಮಾತ್ರ ಕಾಲೇಜು ಹಂತದಲ್ಲಿ ಮಾಡಲಾಗುತ್ತದೆ.
ಇದನ್ನೂ ಓದಿ: BJP-JDS Alliance: ಮೈತ್ರಿಯಿಂದ ಬಿಜೆಪಿ, ಜೆಡಿಎಸ್ಗೆ ಲಾಭ ಆಗಬಹುದೇ? ಕಾಂಗ್ರೆಸ್ಗೆ ಫುಲ್ ಲಾಸ್ ಆಗುತ್ತಾ?
9ನೇ ತರಗತಿಗೆ ಸಂಕಲನಾತ್ಮಕ ಮೌಲ್ಯಮಾಪನ ಪ್ರಶ್ನೆ
9ನೇ ತರಗತಿಯ ಪರೀಕ್ಷೆಯು ಮೊದಲಿನ ಹಾಗೆ ಅಂದರೆ 5 ಮತ್ತು 8ನೇ ತರಗತಿ ಪರೀಕ್ಷೆಯು ನಡೆದಂತೆಯೇ ನಡೆಯುತ್ತದೆ. ಇಲ್ಲಿ ಪರೀಕ್ಷೆಯನ್ನು ಜಿಲ್ಲಾ ಹಂತದಲ್ಲೇ ಮಾಡಲಾಗುತ್ತದೆ. ಆಯಾ ಶಾಲೆಯ ಶಿಕ್ಷಕರೇ ಪರೀಕ್ಷೆ ನಡೆಸುತ್ತಾರೆ. ಮೌಲ್ಯಮಾಪನವನ್ನೂ ಅವರೇ ನಡೆಸುತ್ತಾರೆ. ಹೀಗಾಗಿ ಇದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.