Site icon Vistara News

Education News : ಸ್ಕೂಲ್ ಬ್ಯಾಗ್ ತೂಕಕ್ಕೆ ಮಿತಿ ಹಾಕಿದ ಸರ್ಕಾರ; ಯಾವ ಕ್ಲಾಸಿನ ಮಕ್ಕಳಿಗೆ ಎಷ್ಟು ತೂಕ?

school bag weight limit

#image_title

ಬೆಂಗಳೂರು: ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ನಿಮ್ಮ ಮಕ್ಕಳು ಓದುತ್ತಿದ್ದರೆ ಈ ಸುದ್ದಿಯನ್ನು ನೀವು ಓದಲೇಬೇಕು. ಅವರು ಮಣಭಾರದ ಪಾಠಿಚೀಲ (ಸ್ಕೂಲ್‌ಬ್ಯಾಗ್‌) ಹೊತ್ತುಕೊಂಡು ಶಾಲೆಗೆ ಹೋಗುವುದನ್ನು ನೋಡಿ ನೀವಿನ್ನು ಬೇಸರಪಡಬೇಕಾಗಿಲ್ಲ. ಏಕೆಂದರೆ ಪ್ರತಿಯೊಂದು ತರಗತಿಯ ವಿದ್ಯಾರ್ಥಿಗಳು ಎಷ್ಟು ತೂಕದ ಚೀಲವನ್ನು ಬಳಸಬೇಕೆಂದು ಶಾಲಾ ಶಿಕ್ಷಣ ಇಲಾಖೆಯೇ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದೆ. ಇದನ್ನು ಎಲ್ಲ ಶಾಲೆಗಳೂ ಕಡ್ಡಾಯವಾಗಿ ಜಾರಿಗೆ ತರಬೇಕೆಂದು (Education News) ಸೂಚಿಸಿದೆ.

ಇಲಾಖೆಯ ಸುತ್ತೋಲೆ.

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಮಕ್ಕಳು ಮತ್ತು ಕಾನೂನಿಗೆ ಸಂಬಂಧಿಸಿದ ಕೇಂದ್ರ ಹಾಗೂ ಡಿಎಸ್‌ಇಆರ್‌ಟಿ ಅಧ್ಯಯನ ನಡೆಸಿದ್ದು, ಈ ಅಧ್ಯಯನ ವರದಿಯಂತೆ ಇಲಾಖೆಯು ಪಾಠಿಚೀಲಗಳ ತೂಕವನ್ನು ನಿಗದಿಪಡಿಸಿದೆ.

ವಿದ್ಯಾರ್ಥಿಗಳು ತಮ್ಮ ದೇಹದ ತೂಕದ ಶೇ. 10 ರಿಂದ ಶೇ.15 ರಷ್ಟು ತೂಕದ ಶಾಲಾ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗಬಹುದಾಗಿದೆ ಎಂದು ಮೂಳೆ ತಜ್ಞರು ಶಿಫಾರಸು ಮಾಡಿರುವುದಾಗಿ ಈ ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ 2020 ರಲ್ಲಿ ಸರ್ಕಾರ ಜಾರಿಗೆ ತಂದಿರುವ ʻಶಾಲಾಬ್ಯಾಗ್‌ ನೀತಿʼಯ ಅನ್ವಯ ಈ ಆದೇಶ ಹೊರಡಿಸಲಾಗಿದೆ.

ರಾಜ್ಯಾದ್ಯಂತ ಇರುವ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಎಲ್ಲ ಶಾಲೆಗಳಿಗೂ ಈ ಸುತ್ತೋಲೆ ಅನ್ವಯವಾಗಲಿದ್ದು, ಎಲ್ಲ ಶಾಲೆಗಳಲ್ಲಿ ಒಂದರಿಂದ ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಶಾಲಾ ಬ್ಯಾಗ್‌ ಹೊರೆ ಕಡಿಮೆ ಮಾಡಲು ಯಾವೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದೂ ಜೂನ್‌ 20 ರಂದು ಹೊರಡಿಸಿರುವ ಈ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.

ಯಾವ ತರಗತಿಯ ವಿದ್ಯಾರ್ಥಿಯ ಬ್ಯಾಗ್‌ ಎಷ್ಟು ತೂಕವಿರಬೇಕು?

ಇಲಾಖೆ ಸೂಚಿಸಿದ ಕ್ರಮಗಳೇನು?

1 ಮತ್ತು 2ನೇ ತರಗತಿ ಬೋಧನೆಯು ಬುನಾದಿ ಹಂತದ ಶಿಕ್ಷಣವಾಗಿದ್ದು (Education News) ವಿದ್ಯಾರ್ಥಿಗಳು ಸಂತಸ ಮತ್ತು ಸಕ್ರಿಯವಾಗಿ ಶಾಲೆಗಳಲ್ಲಿಯೇ ಚಟುವಟಿಕೆ ಮೂಲಕ ಕಲಿಯಲು ಆದ್ಯತೆ ನೀಡುವುದು ಈ ವಿದ್ಯಾರ್ಥಿಗಳಿಗೆ ಕಲಿಕೆಯ ಪುನರ್ಬಲನಕ್ಕಾಗಿ ಯಾವುದೇ ರೀತಿಯ ಗೃಹಪಾಠ ಅಥವಾ ಮನೆಗೆಲಸವನ್ನು ನೀಡದಂತೆ ಕ್ರಮವಹಿಸುವುದು.

1 ರಿಂದ 05ನೇ ತರಗತಿಗಳ ವಿದ್ಯಾರ್ಥಿಗಳಿಗೆ ಭಾಷೆ, ಗಣಿತ ಹಾಗೂ ಪರಿಸರ ವಿಜ್ಞಾನ ವಿಷಯ ಹೊರತುಪಡಿಸಿ ಇನ್ಯಾವುದೇ ಪಠ್ಯಕ್ರಮವನ್ನು ನಿಗದಿಪಡಿಸದಂತೆ ಕ್ರಮವಹಿಸುವುದು.

3 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಕಲಿಕಾ ಬಲವರ್ಧನೆ ಚಟುವಟಿಕೆಗಳನ್ನು ಶಾಲೆಗಳಲ್ಲಿಯೇ ನಿರ್ವಹಿಸುವುದು ಅತ್ಯಂತ ಅಗತ್ಯವಿರುವ ಹಾಗೂ ಪೂರಕವಾಗಿರುವಂತಹ ಚಟುವಟಿಕೆಗಳಿಗೆ ಸೀಮಿತ ಪ್ರಮಾಣದಲ್ಲಿ ಮನೆಗೆಲಸ ನೀಡುವಂತೆ ಕ್ರಮವಹಿಸುವುದು.

ವಿದ್ಯಾರ್ಥಿಗಳು ಕಲಿಕೆಯ ಎಲ್ಲಾ ಪಠ್ಯ ಪುಸ್ತಕಗಳು/ನೋಟ್‌ ಪುಸ್ತಕಗಳು ಮತ್ತು ಅಭ್ಯಾಸ ಪುಸ್ತಕಗಳನ್ನು ಪ್ರತಿ ದಿನವು ತರುವುದನ್ನು ತಪ್ಪಿಸಲು ವಿದ್ಯಾರ್ಥಿಗಳಿಗೆ ಮುಂಚಿತವಾಗಿಯೇ ಆಯಾ ದಿವಸದ ವೇಳಾಪಟ್ಟಿಗೆ ಅನುಗುಣವಾಗಿ ಅಗತ್ಯವಿರುವ ಪುಸ್ತಕಗಳನ್ನು ಮಾತ್ರ ಶಾಲೆಗೆ ತರಲು ಸೂಚನೆ ನೀಡುವುದು.

ಅಭ್ಯಾಸ ಚಟುವಟಿಕೆಗಳನ್ನು ಹಾಳೆಗಳಲ್ಲಿ ಮಾಡಿಸಿ ಫೈಲ್‌ ಮಾಡಿಸುವುದು. ಅವಶ್ಯಕತೆ ಇದ್ದಾಗ ಪರಾಮರ್ಶಿಸಲು ಇವುಗಳನ್ನು ಶಾಲೆಗಳಲ್ಲಿಯೇ ಸಂಗ್ರಹಿಸಿಡಲು ಪ್ರೇರೇಪಿಸುವುದು ಅಥವಾ ಅಭ್ಯಾಸ ಪುಸ್ತಕಗಳನ್ನು ಬಳಸಿದಲ್ಲಿ ಇವುಗಳನ್ನು ಶಾಲೆಗಳಲ್ಲಿಯೇ (Education News) ಸಂಗ್ರಹಿಸಿಡತಕ್ಕದ್ದು.

ಶಾಲಾ ಬ್ಯಾಗ್‌ ಅರ್ಜಿ ಹಿಂದಕ್ಕೆ
ಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕ ಇಳಿಕೆ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆಯಲು ರಾಜ್ಯ ಹೈಕೋರ್ಟ್‌ ಅನುಮತಿ ನೀಡಿದೆ. ಮುಖ್ಯ ನ್ಯಾಯಮೂರ್ತಿ ಪಿ ಬಿ ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಈ ಸಂಬಂಧ ಬುಧವಾರ ತೀರ್ಪು ನೀಡಿದೆ.
ವಕೀಲರಾದ ರಮೇಶ್ ನಾಯಕ್ ಈ ಸಂಬಂಧ ಕಳೆದ ವರ್ಷ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯವು ಈ ಸಂಬಂಧ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿತ್ತು. ಮಕ್ಕಳು ನಡೆಯುವ ಭಂಗಿ ಹಾಗೂ ಅವರ ಮುಖಭಾವ ಗಮನಿಸಿದರೆ ಬೆನ್ನಿನ ಮೇಲೆ ಅತಿ ಭಾರ ಹೊತ್ತಿರೋದು ಗಮನಕ್ಕೆ ಬರುತ್ತೆ, ಮಕ್ಕಳ ಸಾಮರ್ಥ್ಯಕ್ಕಿಂತಾ ಅತಿ ಹೆಚ್ಚಿನ ತೂಕದ ಬ್ಯಾಗ್ ಹೊರಿಸಲಾಗುತ್ತಿದೆ ಎಂದು ಅವರು ಅರ್ಜಿಯಲ್ಲಿ ವಾದಿಸಿದ್ದರು.

ವಿದ್ಯಾರ್ಥಿಯು ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ತೆಗೆದುಕೊಂಡು ಹೋಗುವ ಪಠ್ಯ ಪುಸ್ತಕಗಳು, ನೋಟ್‌ ಪುಸ್ತಕಗಳು, ಲೇಖನ ಸಾಮಗ್ರಿಗಳು, ಕಲಿಕಾ ಉಪಕರಣಗಳು ಹಾಗೂ ಇನ್ನಿತರ ವಸ್ತುಗಳನ್ನು ತರಗತಿ ಒಳಗೆ ಶೇಖರಿಸಿಡುವಂತೆ ಅಗತ್ಯ ಅನುಕೂಲತೆಗಳನ್ನು ಕಲ್ಪಿಸತಕ್ಕದ್ದು.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಕ್ಲಿಕ್‌ (Click Here) ಮಾಡಿ.

ಶಾಲಾ ಗ್ರಂಥಾಲಯಗಳಲ್ಲಿ ಶಬ್ದಕೋಶ, ಸಮಾನಾರ್ಥಕ ಪದಕೋಶ. ಅಟ್ಲಾಸ್‌, ಜ್ಞಾನ ವಿಜ್ಞಾನ ಕೋಶಗಳಂತಹ ಪರಾಮರ್ಶನ ಸಾಮಗ್ರಿಗಳು ಸಾಕಷ್ಟು ಸಂಖ್ಯೆಯಲ್ಲಿ ಲಭ್ಯವಾಗುವಂತೆ ಹಾಗೂ ಮಕ್ಕಳು ಇವುಗಳನ್ನು ಅವಶ್ಯಕತೆ ಇದ್ದಾಗ ಬಳಸಿಕೊಳ್ಳುವಂತೆ ವ್ಯವಸ್ಥೆಮಾಡುವುದು.

100 ರಿಂದ 200 ಪುಟ ಮೀರದ ನೋಟ್‌ ಪುಸ್ತಕಗಳನ್ನು ಬಳಸುವಂತೆ ಕ್ರಮವಹಿಸುವುದು.

ಕಡಿಮೆ ಖರ್ಚಿನ ಹಗುರವಾದ ಹಾಗೂ ದೀರ್ಫ ಕಾಲ ಬಾಳಿಕೆ ಬರುವಂತಹ ಶಾಲಾಬ್ಯಾಗ್‌ ಹಾಗೂ ಇತರೆ ಸಾಮಗ್ರಿಗಳನ್ನು ಬಳಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸುವುದು.

ಮಕ್ಕಳು ಶಾಲೆಗಳಿಗೆ ಕುಡಿಯುವ ನೀರನ್ನು ಕೊಂಡೊಯ್ಯುವುದನ್ನು ತಪ್ಪಿಸಲು ಕುಡಿಯುವ ನೀರಿನ ವ್ಯವಸ್ಥೆಯನ್ನು ಶಾಲೆಯಲ್ಲಿಯೇ ಕಲ್ಪಿಸತಕ್ಕದ್ದು.

ಅತಿಯಾದ ಹೊರೆ ಇರುವ ಶಾಲಾಬ್ಯಾಗ್‌ನಿಂದ ಉಂಟಾಗಬಹುದಾದ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವುದು.

ಇದನ್ನೂ ಓದಿ : Court Verdict : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ನಾಗೇಶ್‌ ಆಯ್ಕೆ; ಪ್ರಶ್ನಿಸಿದ್ದ ಅರ್ಜಿ ತಿರಸ್ಕೃತ

Exit mobile version