ಬೆಂಗಳೂರು: ಕೇಂದ್ರ ಸರ್ಕಾರದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 (National Education Policy-2020) ಅನ್ನು ಅಧಿಕೃತವಾಗಿ ರದ್ದು ಮಾಡುವ ರಾಜ್ಯ ಸರ್ಕಾರದ ತೀರ್ಮಾನ ವಿರೋಧಿಸಿ ಎನ್‌ಇಪಿ-2020ರ ಪ್ರಾಮುಖ್ಯತೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಪರಿಣಾಮಕಾರಿ ಜಾರಿಗಾಗಿ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಷನ್‌ನಿಂದ ಆಗಸ್ಟ್ 22ರಂದು ಮಧ್ಯಾಹ್ನ 3.30 ಗಂಟೆಗೆ ನಗರದ ರ‍್ಯಾಡಿಸನ್ ಬ್ಲ್ಯೂ ಹೋಟೆಲ್ ಎದುರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಶಿಕ್ಷಣ ತಜ್ಞರ ಸಭೆ ಆಯೋಜಿಸಲಾಗಿದೆ.
ಸಭೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಬಿ.ತಿಮ್ಮೇಗೌಡ, ಪ್ರೊ. ಕೆ. ಆರ್. ವೇಣುಗೋಪಾಲ್, ವಿಜಯಪುರ ಬಿಎಲ್‌ಡಿಇ ವಿವಿ ವಿಶ್ರಾಂತ ಕುಲಪತಿ ಪ್ರೊ. ಸತೀಶ ಜಿಗಜಿನ್ನಿ, ಬೆಳಗಾವಿ ಆರ್‌ಸಿಯುಬಿ ವಿವಿ ವಿಶ್ರಾಂತ ಕುಲಪತಿ ಪ್ರೊ. ಶಿವಾನಂದ ಹೊಸಮನಿ, ಬಳ್ಳಾರಿ ವಿಎಸ್‌ಕೆಯು ವಿಶ್ರಾಂತ ಕುಲಪತಿ ಪ್ರೊ. ಸಿದ್ದು ಆಲ್ಗೂರ್, ಮಂಗಳೂರು ವಿವಿ ವಿಶ್ರಾಂತ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಉಪಸ್ಥಿತರಿರಲಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ಮಾಜಿ ಸಚಿವರಾದ ಎಸ್. ಸುರೇಶ್ ಕುಮಾರ್, ಡಾ. ಸಿ.ಎನ್. ಅಶ್ವತ್ಥನಾರಾಯಣ, ಮಾಜಿ ಸ್ಪೀಕರ್ ವಿಶ್ವೇಶ್ಚರ ಹೆಗಡೆ ಕಾಗೇರಿ, ಮಾಜಿ ಶಾಸಕರಾದ ಅರವಿಂದ ಲಿಂಬಾವಳಿ, ಸಿ.ಟಿ. ರವಿ, ಎನ್. ಮಹೇಶ್, ಬಿ.ಸಿ. ನಾಗೇಶ್, ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಪ್ರೊ. ಮೀನಾ ಚಂದಾವರ್ಕರ್ ಸೇರಿ ಅನೇಕರು ಭಾಗಿಯಾಗಲಿದ್ದಾರೆ.
ಇದನ್ನೂ ಓದಿ | Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?
ಎನ್‌ಇಪಿ ರದ್ದು ಆಘಾತಕಾರಿ ನಿರ್ಧಾರ
ಅಪ್ಪ ಹಾಕಿದ ಆಲದ ಮರ ಎಂದು ಇಷ್ಟು ದಿನ ಅದೇ ಬ್ರಿಟಿಷರ ಶಿಕ್ಷಣ ವ್ಯವಸ್ಥೆಗೆ ಅಂಟಿಕೊಂಡಿದ್ದು, ನಮ್ಮ ದುರ್ದೈವವೇ ಸರಿ. ನಮ್ಮ ವಿದ್ಯಾರ್ಥಿಗಳಲ್ಲಿ ಸ್ವಾವಲಂಬನೆ ಬೆಳೆಸಲಾರದ, ಅವರ ಇಚ್ಛೆಗನುಸಾರ ಜ್ಞಾನ ಕೊಡಲಾಗದ, ಕೇವಲ ಮತ್ತೊಬ್ಬರ ಅಡಿಯಾಳಾಗಿ ಬದುಕಲು ಹೇಳಿಕೊಡುವಂತಹ ಮೆಕಾಲೆ ಶಿಕ್ಷಣ ಪದ್ಧತಿಯನ್ನು ದೂರಗೊಳಿಸಿ ನಮ್ಮ ದೇಶದ ಹಿತಕ್ಕಾಗಿ ಸ್ವಾವಲಂಬಿ ಯುವಕರನ್ನು ತಯಾರಿಸುವ ಹಾಗೂ ಸ್ವದೇಶಿ ರಾಷ್ಟ್ರದ ನಿರ್ಮಾಣಕ್ಕಾಗಿ ನಮ್ಮ ದೇಶದವರೇ ನಿರ್ಮಿಸಿದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತೆಗೆದುಹಾಕುತ್ತೇವೆ ಎನ್ನುತ್ತಿರುವುದು ಅತ್ಯಂತ ಆಘಾತಕಾರಿ ನಿರ್ಧಾರವಾಗಿ ಎಂದು ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಅಭಿಪ್ರಾಯಪಟ್ಟಿದೆ.
ರಾಷ್ಟ್ರೀಯ ಶಿಕ್ಷಣ ನೀತಿಯ ಉಪಯೋಗಗಳು ಹಾಗೂ ಅದರಿಂದಾಗಿ ಸಮಾಜದಲ್ಲಾಗುವ ಲಾಭಗಳನ್ನು ಚರ್ಚಿಸಿ ಸರ್ಕಾರದ ಗಮನಕ್ಕೆ ತರುವ ಸಲುವಾಗಿ ವಿಶ್ರಾಂತ ಕುಲಪತಿಗಳು, ಸಿಂಡಿಕೇಟ್ ಸದಸ್ಯರು, ಶಿಕ್ಷಣ ತಜ್ಞರು, ಸಾಹಿತಿಗಳು ಹಾಗೂ ಎಲ್ಲ ಶಿಕ್ಷಣ ಆಸಕ್ತರು ಆಗಮಿಸಿ ತಮ್ಮ ಅಭಿಪ್ರಾಯ ಹಾಗೂ ಸಲಹೆ ಸೂಚನೆಗಳನ್ನು ನೀಡಬೇಕು ಎಂದು ಕೋರಿದೆ.