ಬೆಳಗಾವಿ/ಮುಂಬೈ: ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಬಿಕ್ಕಟ್ಟಿನ (Border Dispute) ಕುರಿತು ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸುವವರೆಗೂ ಯಾವುದೇ ಚಟುವಟಿಕೆ ಕೂಡದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಮಾಡಿದ ತಾಕೀತಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸೆಡ್ಡು ಹೊಡೆದಿದ್ದಾರೆ. ಶಾ ಸೂಚನೆಯನ್ನೂ ಉಲ್ಲಂಘಿಸಿ ಡಿಸೆಂಬರ್ 19ರಂದು ತಮ್ಮ ಆಪ್ತನನ್ನು ಬೆಳಗಾವಿಗೆ ಕಳುಹಿಸಿಕೊಡಲು ಶಿಂಧೆ ತೀರ್ಮಾನಿಸಿದ್ದಾರೆ.
ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರೂ ಆದ ಸಂಸದ ಧೈರ್ಯಶೀಲ್ ಮಾನೆ ಅವರು ಬೆಳಗಾವಿಗೆ ಆಗಮಿಸುತ್ತಿರುವ ಕುರಿತು ಪ್ರವಾಸದ ಪಟ್ಟಿಯನ್ನು ಬೆಳಗಾವಿ ಪೊಲೀಸರಿಗೆ ರವಾನಿಸಲಾಗಿದೆ. ಚಳಿಗಾಲದ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್‌ನಿಂದ ಬೆಳಗಾವಿಯಲ್ಲಿ ಡಿ.19ರಂದು ಮಹಾಮೇಳಾವ್ ಆಯೋಜಿಸಲಾಗಿದೆ. ಟಿಳಕವಾಡಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮಹಾಮೇಳಾವ್ ನಡೆಯಲಿದ್ದು, ಇದರಲ್ಲಿ ಧೈರ್ಯಶೀಲ್ ಭಾಗವಹಿಸಲಿದ್ದಾರೆ. ಡಿ.19ರ ಬೆಳಗ್ಗೆ 11.30ಕ್ಕೆ ಬೆಳಗಾವಿಗೆ ಆಗಮಿಸಲಿರುವ ಮಾನೆ, ಮಧ್ಯಾಹ್ನ 1.30ಕ್ಕೆ ಹಿಂದಿರುಗಲಿದ್ದಾರೆ ಎಂದು ಪ್ರವಾಸದ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ, ಇದು ಅಮಿತ್ ಶಾ ಅವರ ಸೂಚನೆಯ ಸ್ಪಷ್ಟ ಉಲ್ಲಂಘನೆ ಎಂದು ಹೇಳಲಾಗುತ್ತಿದೆ.
ಕುತೂಹಲ ಮೂಡಿಸಿದ ಬೊಮ್ಮಾಯಿ ನಡೆ
ಕೆಲ ದಿನದ ಹಿಂದೆ ಏಕನಾಥ್ ಶಿಂಧೆ ಹಾಗೂ ಬಸವರಾಜ ಬೊಮ್ಮಾಯಿ ಅವರ ಜತೆ ಸಭೆ ನಡೆಸಿದ್ದ ಅಮಿತ್ ಶಾ, ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೂ ಯಾವುದೇ ಚಟುವಟಿಕೆ ಕೈಗೊಳ್ಳಬಾರದು ಎಂದು ಸೂಚಿಸಿದ್ದರು. ಸೂಚನೆಯನ್ನೂ ಉಲ್ಲಂಘಿಸಿ ಮಹಾರಾಷ್ಟ್ರ ಸರ್ಕಾರ ಸೆಡ್ಡು ಹೊಡೆದಿರುವ ಕಾರಣ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಿನ ನಡೆಯು ಕುತೂಹಲ ಕೆರಳಿಸಿದೆ.
ಇದನ್ನೂ ಓದಿ | Border Dispute | ಬೆಳಗಾವಿ ಅಧಿವೇಶನಕ್ಕಾಗಿ ಆಗಮಿಸಿದ್ದ ಸರ್ಕಾರಿ ವಾಹನಕ್ಕೆ ಮರಾಠಿ ಪುಂಡರಿಂದ ಕಲ್ಲು ತೂರಾಟ