ಬೆಂಗಳೂರು: ಎಐಸಿಸಿ ಅಧ್ಯಕ್ಷರಿಗೆ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ (shamanur shivashankarappa) ಪತ್ರದ ಬಗ್ಗೆ ಸ್ವಪಕ್ಷದಲ್ಲೇ ಪರ, ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಶಾಮನೂರು ನಡೆಯನ್ನು ಕೆಲ ಶಾಸಕರು ಸ್ವಾಗತಿಸಿದ್ದರೆ, ಮತ್ತೆ ಕೆಲವರು ಟೀಕಿಸಿದ್ದಾರೆ. ವಯಸ್ಸಾದವರು ಮನೆಯಲ್ಲೇ ಇರಬೇಕು, ಏನೇನೋ ಮಾತನಾಡುವುದಲ್ಲ ಎಂಬ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಮನೂರು ಶಿವಶಂಕರಪ್ಪ ಅವರು, ನಮಗೆ ಮನೆಯಲ್ಲಿ ಇರೋಕೆ ಜಾಗ ಇಲ್ಲ, ಅದಕ್ಕೆ ಇಲ್ಲಿಗೆ ಬರುತ್ತೇವೆ ಎಂದು ಟಾಂಗ್ ನೀಡಿದ್ದಾರೆ.
ರಾಜ್ಯಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ವೀರಶೈವ ಲಿಂಗಾಯತ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಾಮನೂರು ಶಿವಶಂಕರಪ್ಪ ಅವರು ಪತ್ರ ಬರೆದಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕ ರಿಜ್ವಾನ್ ಅರ್ಷದ್, ವಯಸ್ಸು ಜಾಸ್ತಿ ಆಗಿರುವುದರಿಂದ ಏನೇನೋ ಹೇಳುತ್ತಿರುತ್ತಾರೆ. ಬಹಳ ವಯಸ್ಸು ಆದಾಗ ರಾಜಕೀಯ ನಿವೃತ್ತಿ ತೆಗೆದುಕೊಂಡು ಫ್ಯಾಮಿಲಿ ಜೊತೆ ಕಾಲ ಕಳೆಯಬೇಕು ಎಂದು ಪರೋಕ್ಷವಾಗಿ ಮನೆಯಲ್ಲೇ ಇರಬೇಕು ಎಂದು ಹೇಳಿದ್ದರು.
ಸ್ವಪಕ್ಷದ ಶಾಸಕನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಮನೂರು ಶಿವಶಂಕರಪ್ಪ ಅವರು, ನಮಗೆ ಮನೆಯಲ್ಲಿ ಇರೋಕೆ ಜಾಗ ಇಲ್ಲ. ಅದಕ್ಕೆ ಇಲ್ಲಿಗೆ (ವಿಧಾನಸೌಧಕ್ಕೆ) ಬರುತ್ತೇವೆ. ಇಲ್ಲಿ ಕೂತು ಹೋಗುತ್ತೇವೆ ತಿರುಗೇಟು ನೀಡಿದ್ದಾರೆ.
ರಿಜ್ವಾನ್ ಅರ್ಷದ್ ಏನು ಹೇಳಿದ್ದರು?
ಶಾಮನೂರು ಶಿವಶಂಕರಪ್ಪ ಪತ್ರದ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ರಿಜ್ವಾನ್ ಅರ್ಷದ್ ಅವರು, ಶಾಮನೂರು ಶಿವಶಂಕರಪ್ಪ ಅವರು ವಯಸ್ಸಿನಲ್ಲಿ ಹಿರಿಯರು. ಅವರಿಗೆ 94 ವರ್ಷ ವಯಸ್ಸು, ಏನು ಅರ್ಥ ಆಗುತ್ತೋ, ಏನು ಬರೆಯುತ್ತಾರೋ ಗೊತ್ತಿಲ್ಲ. ವಯಸ್ಸು ಜಾಸ್ತಿ ಆಗಿರುವುದರಿಂದ ಏನೇನೋ ಹೇಳುತ್ತಿರುತ್ತಾರೆ. ಲಿಂಗಾಯತ ಮಹಾಸಭಾದಿಂದ ಯಾರೂ ಪತ್ರ ಬರೆಯುತ್ತಿಲ್ಲ, ಅದು ಕೇವಲ ಶಾಮನೂರು ಅವರ ಪತ್ರವಾಗಿದೆ. ಅವರ ಬಗ್ಗೆ ನಾನು ಏನು ಕಾಮೆಂಟ್ ಮಾಡಲು ಸಾಧ್ಯ ವಯಸ್ಸಾದವರು ರಾಜಕೀಯ ನಿವೃತ್ತಿ ತೆಗೆದುಕೊಂಡು ಫ್ಯಾಮಿಲಿ ಜತೆ ಕಾಲ ಕಳೆಯಬೇಕು ಎಂದು ಹೇಳಿದ್ದರು.
ಇದನ್ನೂ ಓದಿ | Karnataka Budget Session 2024: ಕೆಟ್ಟು ನಿಂತ ಕಾಂಗ್ರೆಸ್ ಸರ್ಕಾರ; ದಲಿತರ ಹಣ ಬೇರೆಡೆ ಬಳಸಿದ್ದೇಕೆ?: ಆರ್. ಅಶೋಕ್
ಬಿ.ವೈ. ರಾಘವೇಂದ್ರ ಅವರು ಗೆಲ್ಲಬೇಕು ಎಂಬ ಶಾಮನೂರು ಹೇಳಿಕೆ ಪ್ರತಿಕ್ರಿಯಿಸಿ, ಅಷ್ಟು ವಯಸ್ಸಾದ ಮೇಲೆ ರಾಜಕೀಯ ವಿದ್ಯಮಾನ ಸೇರಿ ಬಹಳಷ್ಟು ವಿಷಯಗಳು ಅರ್ಥ ಆಗೋದಿಲ್ಲ, ಆ ವಯಸ್ಸಿನವರಿಗೆ ನಾವು ಕೂಡ ಜೋರಾಗಿ ಹೇಳಲು ಆಗೋದಿಲ್ಲ. ನಾವು ಕೂಡ ಟೀಕೆ ಟಿಪ್ಪಣಿ ಮಾಡೋದು ಸರಿಯಲ್ಲ. ಆ ವಯಸ್ಸಿನಲ್ಲಿ ಸಾರ್ವಜನಿಕ ಜೀವನದಲ್ಲಿದ್ದರೆ ಇಂತಹ ಸಮಸ್ಯೆ ಬರುತ್ತದೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಮತಗಳಿಂದ ಅವರು ಆಯ್ಕೆ ಆಗುತ್ತಾರೆ. ಆ ವಿಚಾರ ದಾವಣಗೆರೆ ಜಿಲ್ಲೆಯಲ್ಲಿ ಎಲ್ಲರಿಗೂ ಗೊತ್ತಿದೆ ಎಂದು ತಿಳಿಸಿದ್ದರು.